ADVERTISEMENT

`ಕನ್ನಡ ಲಿಪಿಗಳ ಕುರಿತು ಸಂಶೋಧನೆ ನಡೆಯಲಿ'

​ಪ್ರಜಾವಾಣಿ ವಾರ್ತೆ
Published 3 ಮೇ 2013, 19:49 IST
Last Updated 3 ಮೇ 2013, 19:49 IST
ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಹಂ.ಪ ನಾಗರಾಜಯ್ಯ ಅವರು ಸಂಶೋಧಕ ಪ್ರೊ.ಷ.ಶೆಟ್ಟರ್ ಅವರಿಗೆ 'ಚಾವುಂಡರಾಯ' ಪ್ರಶಸ್ತಿ ಪ್ರದಾನ ಮಾಡಿದರು. ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಕರ್ನಾಟಕ ಜೈನ ಒಕ್ಕೂಟದ ಅಧ್ಯಕ್ಷ ಎಸ್.ಜಿತೇಂದ್ರಕುಮಾರ್, ಸಾಹಿತಿ ಪ್ರೊ.ಜಿ.ಅಶ್ವತ್ಥನಾರಾಯಣ, ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ್ ಬಾದವಾಡಗಿ ಚಿತ್ರದಲ್ಲಿದ್ದಾರೆ                                 -ಪ್ರಜಾವಾಣಿ ಚಿತ್ರ

ಬೆಂಗಳೂರು: `ಕನ್ನಡದ ಲಿಪಿಗಳು ಮತ್ತು ಕನ್ನಡ ಭಾಷೆಯ ಉಗಮದ ಕುರಿತು ಸಂಶೋಧನೆ ನಡೆಯಬೇಕಿದೆ' ಎಂದು ಸಂಶೋಧಕ ಪ್ರೊ.ಷ.ಶೆಟ್ಟರ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಶ್ರೀಕ್ಷೇತ್ರ ಸ್ಥಾಪಿಸಿರುವ `ಚಾವುಂಡರಾಯ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು.

`ನಾವು ನಮ್ಮ ಹಿಂದಿನ 150 ವರ್ಷಗಳ ಸಂಶೋಧನೆಯನ್ನು ಬದಿಗೊತ್ತಿ ಈಗ ಮತ್ತೆ ಸಂಶೋಧನೆಯನ್ನು ಕೈಗೊಳ್ಳಬೇಕಾದ ಸಂದರ್ಭ ಬಂದಿದೆ. ನಮ್ಮ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷೆ ಬಂದಿದೆಯೆಂದು ಸುಮ್ಮನೆ ಕುಳಿತರೆ ಇನ್ನು ನಾಲ್ಕೈದು ವರ್ಷಗಳಲ್ಲಿ ನಾವು ಅನರ್ಹರಾಗುವ ಘಟ್ಟವನ್ನು ತಲುಪುತ್ತೇವೆ' ಎಂದು ಅಭಿಪ್ರಾಯಪಟ್ಟರು.

`ನಮ್ಮ ಭಾಷೆಯನ್ನು ಕಲಿಯಬೇಕು. ಬೇರೆಯವರ ಭಾಷೆಯನ್ನು ಕಲಿಯಬೇಕು. ಆಗ ಮಾತ್ರ ನಾವು ಬೆಳೆಯಲು ಸಾಧ್ಯವಾಗುತ್ತದೆ. ಆದರೆ, ನಮ್ಮ ಭಾಷೆಗೆ ಪ್ರಾಮುಖ್ಯತೆ ಇರಲಿ. ಪ್ರತಿಯೊಬ್ಬರಿಗೂ ಮನದಟ್ಟಾಗುವ ರೀತಿಯಲ್ಲಿ ಬರೆಯುವುದು ಕಷ್ಟ' ಎಂದರು.

`ಕ್ಷೇತ್ರಕಾರ್ಯದಲ್ಲಿರುವವರು ಒಂದು ನಿಯಮವನ್ನು ಪಾಲಿಸಬೇಕು. ಅವರ ಕಾರ್ಯದ ಬಗ್ಗೆ ನಿಷ್ಠೆಯಿರಬೇಕು. ಕ್ಷೇತ್ರಕಾರ್ಯ ಎಂದಿಗೂ ಮುಗಿಯುವಂತಹುದಲ್ಲ. ಅದು ನಿರಂತರವಾಗಿ ನಡೆಯುತ್ತಿರುವ ಕಾರ್ಯವಾಗಿದೆ' ಎಂದು ಹೇಳಿದರು.

`ಸಂಶೋಧನೆಗಳಲ್ಲಿ ವಿದ್ಯೆ ಅಥವಾ ಜ್ಞಾನಕ್ಕಿಂತ ಅಲ್ಲಿ ಕೈಗೊಳ್ಳುವ ವಿಧಾನ ಮುಖ್ಯವಾಗುತ್ತದೆ. ಏಕೆಂದರೆ, ಯಾವುದೇ ಕ್ಷೇತ್ರಕಾರ್ಯದಲ್ಲಿ ನಾವು ಬಳಸಿ ಕೈಗೊಳ್ಳುವ ವಿಧಾನ ಮುಖ್ಯವಾಗುತ್ತದೆಯೇ ಹೊರತು ನಮ್ಮಲ್ಲಿರುವ ಜ್ಞಾನವಲ್ಲ' ಎಂದು ನುಡಿದರು.

ಸಾಹಿತಿ ಹಂ.ಪ.ನಾಗರಾಜಯ್ಯ ಮಾತನಾಡಿ, `ಪ್ರೊ. ಷ. ಶೆಟ್ಟರ್ ಒಬ್ಬ ಶಿಸ್ತಿನ ಸಿಪಾಯಿ. ಅವರ ಅಧ್ಯಯನದ ಹರವು ಬಹಳ ವಿಸ್ತಾರವಾಗಿದೆ. ಅವರು ಅಧ್ಯಯನ ಕ್ಷೇತ್ರಕ್ಕೆ ತಮ್ಮನ್ನು ಮುಡುಪಾಗಿಟ್ಟವರು' ಎಂದು ಅವರು ನುಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.