ಬೆಂಗಳೂರು: ರಾಜ್ಯದ ಸಂಶೋಧಕರ ತಂಡವು ದೇಶದ ಪಶ್ಚಿಮ ಕರಾವಳಿಯಲ್ಲಿ ಕಂಡುಬರುವ ಮೈಕ್ರೊಹೈಲಾ ಕುಟುಂಬಕ್ಕೆ ಸೇರಿದ ಕಪ್ಪೆಯ ಹೊಸ ಪ್ರಭೇದವೊಂದನ್ನು ಪತ್ತೆ ಹಚ್ಚಿದೆ.
ಕಪ್ಪೆಯ ಈ ಹೊಸ ಪ್ರಭೇದವು ಮಂಗಳೂರು ಪರಿಸರದಲ್ಲಿ ಮೊದಲ ಬಾರಿ ಪತ್ತೆಯಾಗಿದೆ. ಮಂಗಳೂರನ್ನು ಕೊಂಕಣಿ ಭಾಷೆಯಲ್ಲಿ ‘ಕೊಡಿಯಾಲ್’ ಎಂದೇ ಕರೆಯುತ್ತಾರೆ. ಹಾಗಾಗಿ ಈ ಪ್ರಭೇದಕ್ಕೆ ‘ಮೈಕ್ರೊಹೈಲಾ ಕೊಡಿಯಾಲ್’ ಎಂದು ವೈಜ್ಞಾನಿಕ ಹೆಸರನ್ನು ನಾಮಕರಣ ಮಾಡಲಾಗಿದೆ. ಭಾರತದಲ್ಲಿ ಪತ್ತೆಯಾದ ಮೈಕ್ರೊಹೈಲಾ ಕುಟುಂಬದ ಕಪ್ಪೆಗಳ 10ನೇ ಪ್ರಭೇದವಿದು.
ದಕ್ಷಿಣ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಕಂಡುಬರುವ ಮೈಕ್ರೊಹೈಲಾ ಗುಂಪಿನ ಸಣ್ಣ ಬಾಯಿಯ ಕಪ್ಪೆಗಳಿಗಿಂತ ಈ ಕಪ್ಪೆಯು ಭಿನ್ನವಾದುದು. ಈ ಕಪ್ಪೆಯ ದೇಹದ ಪಾರ್ಶ್ವಗಳಲ್ಲಿ ಪಟ್ಟಿಗಳಿಲ್ಲ. ಬೆನ್ನಿನಲ್ಲಿ ಮಡಿಕೆಗಳಿಂದ ಕೂಡಿದ ಚರ್ಮವಿಲ್ಲ, ಪೂರ್ಣ ಪ್ರಮಾಣದ ಜಾಲಪಾದಗಳಿಲ್ಲ ಅದರ ಬದಲು ಬೆರಳುಗಳ ನಡುವೆ ಆರಂಭಿಕ ಹಂತದ ಜಾಲಪಾದವಿದೆ. ಬೆರಳುಗಳ ಮೇಲ್ಭಾಗದಲ್ಲಿ ಕಿರಿದಾದ ಕುಳಿಗೆರೆಗಳಿಲ್ಲ.
ಈ ಕಪ್ಪೆಗಳ ಸಂತಾನೋತ್ಪತ್ತಿಯ ಅವಧಿ ಮಳೆಗಾಲಕ್ಕೆ ಸೀಮಿತ. ಜೂನ್‌ನಿಂದ ಸೆಪ್ಟೆಂಬರ್ ತಿಂಗಳ ನಡುವೆ ಇವು ಜನನಕ್ರಿಯೆಯಲ್ಲಿ ತೊಡಗುತ್ತವೆ. ಹೆಣ್ಣು ಕಪ್ಪೆ ಏಕಕಾಲಕ್ಕೆ 300ರಷ್ಟು ಮೊಟ್ಟೆಗಳನ್ನಿಡುತ್ತದೆ ಎನ್ನುತ್ತಾರೆ ಸಂಶೋಧಕರು.
ಮಂಗಳೂರು ವಿಶ್ವವಿದ್ಯಾಲಯದ ಆನ್ವಯಿಕ ಜೀವವಿಜ್ಞಾನ ವಿಭಾಗದ ಕೆ.ವಿನೀತ್ ಕುಮಾರ್, ಯು.ಕೆ.ರಾಧಾಕೃಷ್ಣನ್, ಕೆ.ರಾಜಶೇಖರ್ ಪಾಟೀಲ, ಸೇಂಟ್ ಅಲೋಷಿಯಸ್ ಪದವಿ ಪೂರ್ವಕಾಲೇಜಿನ ಆರ್.ಡಿ.ಗಾಡ್ವಿನ್, ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಆ್ಯಂಡ್ ದಿ ಎನ್‌ವಿರಾನ್‌ಮೆಂಟ್ (ಎಟಿಆರ್‌ಇಇ) ಸಂಸ್ಥೆಯ ಸೂರಿ ಸೆಹಗಲ್ ಜೀವವೈವಿಧ್ಯ ಮತ್ತು ಸಂರಕ್ಷಣಾ ಕೇಂದ್ರದ ಅನ್ವೇಷಾ ಸಾಹ, ಎನ್.ಎ.ಅರವಿಂದ ಅವರನ್ನು ಒಳಗೊಂಡ ವಿಜ್ಞಾನಿಗಳ ತಂಡವು ಈ ಸಂಶೋಧನೆ ನಡೆಸಿದೆ. ಜೀವಿಗಳ ನಾಮಕರಣಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ನಿಯತಕಾಲಿಕೆ ‘ಝೂಟ್ಯಾಕ್ಸಾ’ದಲ್ಲಿ ಈ ಕುರಿತ ಸಂಶೋಧನಾ ಲೇಖನ ಪ್ರಕಟವಾಗಿದೆ.
ಪಶ್ಚಿಮ ಘಟ್ಟ ಪ್ರದೇಶದ ನಗರ ಪ್ರದೇಶದಲ್ಲಿ ಕಂಡುಬರುವ ಕಪ್ಪೆಗಳ ಸಮುದಾಯಿಕ ಪರಿಸರ ವ್ಯವಸ್ಥೆ ಕುರಿತ ವಿಸ್ತೃತ ಅಧ್ಯಯನದ ಸಲುವಾಗಿ ಕ್ಷೇತ್ರ ಕಾರ್ಯ ನಡೆಸುವಾಗ ಈ ಕಪ್ಪೆ ಪತ್ತೆಯಾಗಿತ್ತು. ಬಂದರು, ಪೆಟ್ರೊರಾಸಾಯನಿಕ, ರಾಸಾಯನಿಕ ಹಾಗೂ ಪೆಟ್ರೋಲಿಯಂ ಸಂಸ್ಕರಣಾ ಕೈಗಾರಿಕೆಗಗಳನ್ನು ಒಳಗೊಂಡ ನಗರದ ಕೈಗಾರಿಕಾ ಪ್ರದೇಶದಲ್ಲಿ ಈ ಹೊಸ ಪ್ರಭೇದವು ಕಾಣಸಿಕೊಂಡಿರುವುದು ವಿಶೇಷ. ಸಾಮಾನ್ಯವಾಗಿ ಮೈಕ್ರೊ ಹೈಲಾ ಕುಟುಂಬದ ಕಪ್ಪೆಗಳು ಇಂತಹ ಪರಿಸರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಇವು ಇಲ್ಲಿನ ಕೈಗಾರಿಕಾ ವಾತಾವರಣಕ್ಕೆ ಒಗ್ಗಿಕೊಂಡಿವೆ ಎನ್ನುತ್ತಾರೆ ಸಂಶೋಧಕರು.
ಈ ಕಪ್ಪೆ ಪತ್ತೆಯಾದ ಪರಿಸರದಲ್ಲಿ ಮರದ ದಿಮ್ಮಿಗಳನ್ನು ದಾಸ್ತಾನಿಡುವ ಡಿಪೊಗಳಿವೆ. ಮಲೇಷ್ಯಾ, ಇಂಡೋನೇಷ್ಯಾ ಹಾಗೂ ಬರ್ಮಾ ದೇಶಗಳಿಂದ ಆಮದು ಮಾಡಿಕೊಂಡ ಮರದ ದಿಮ್ಮಿಗಳನ್ನು ಅಲ್ಲಿ ಸಂಗ್ರಹಿಸಿಡಲಾಗಿತ್ತು. ಈ ಕಪ್ಪೆಯು ಮರದ ದಿಮ್ಮಿಗಳೊಂದಿಗೆ ಸೇರಿಕೊಂಡು ಆಕಸ್ಮಿಕವಾಗಿ ಇಲ್ಲಿಗೆ ತಲುಪಿರಬಹುದು ಎಂದು ಸಂದೇಹಪಟ್ಟಿದ್ದರು. ಆದರೆ, ಡಿಎನ್‌ಎ ಅಧ್ಯಯನವೂ ಸೇರಿದಂತೆ ಸಮಗ್ರವಾದ ಪರಿಶೀಲನೆ ನಡೆಸಿದ ಬಳಿಕ ಇದೊಂದು ಹೊಸ ಪ್ರಭೇದ ಎಂಬುದು ಮನದಟ್ಟಾಗಿದೆ ಎಂದು ಏಟ್ರೀ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.