ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಆಯೋಜಿಸಿರುವ ಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಚಾವ್ಲಾ ಅವರು ಪ್ರದರ್ಶನಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ನಟಿ ಹರಿಪ್ರಿಯಾ, ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಎಂ.ಎ. ಸಲೀಂ, ಇಲಾಖೆಯ ನಿರ್ದೇಶಕ ಎಸ್.ಎಚ್. ಶಿವಕುಮಾರ, ಉಪನಿರ್ದೇಶಕ ಮಹಾಂತೇಶ ಮುರಗೋಡ ಹಾಜರಿದ್ದರು.
ಹೂವಿನಿಂದ ನಿರ್ಮಿಸಿದ ಕುದುರೆ, ಆನೆ, ತಬಲ, ಪಿಯಾನೊ, ಬೋನ್ಸಾಯ್ ಹಾಗೂ ಆರ್ಕಿಡ್ ಪ್ರದರ್ಶನದ ಪ್ರಮುಖ ಆಕರ್ಷಣೆ. ಇದರ ಜೊತೆಗೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಪ್ರಾಣಿಗಳ ಸಂರಕ್ಷಣೆ, ಭಾರತೀಯ ವಿಜ್ಞಾನ ಸಂಸ್ಥೆಯಿಂದ ನೀರು ಸಂಗ್ರಹ ಕುರಿತ ಪ್ರಾತ್ಯಕ್ಷಿಕೆ ಇಡಲಾಗಿದೆ.
ನಂದಿಬೆಟ್ಟದ ನಾಗರಾಜ್ ಅವರು ನಾರಿನಲ್ಲಿ ತಯಾರಿಸಿರುವ ವಿವಿಧ ಕಲಾಕೃತಿಗಳು ಹಾಗೂ ಅವರು ಸಂಗ್ರಹಿಸಿರುವ ಹಳೆಯ ನಾಣ್ಯ, ನೋಟುಗಳನ್ನೂ ಇರಿಸಲಾಗಿದೆ. ಪುಷ್ಪ ಪ್ರದರ್ಶನವು ಭಾನುವಾರದವರೆಗೆ ನಡೆಯಲಿದೆ. ಪ್ರವೇಶ ಉಚಿತ.
‘ಉದ್ಯಾನದಲ್ಲಿ ಉದಯರಾಗ’ ಕಾರ್ಯಕ್ರಮ: ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯು ಪ್ರತಿ ಭಾನುವಾರದಂತೆ ಈ ವಾರವೂ ನಗರದ ಕಬ್ಬನ್ ಉದ್ಯಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಬೆಳಿಗ್ಗೆ 6ರಿಂದ 7ರ ವರೆಗೆ ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ ಕಲಾವಿದ ಲಕ್ಷ್ಮಣದಾಸ ಮತ್ತು ತಂಡದವರು ‘ಉದ್ಯಾನದಲ್ಲಿ ಉದಯರಾಗ’ ಕಾರ್ಯಕ್ರಮವನ್ನು ನಡೆಸಿಕೊಡುವರು. 8ರಿಂದ 9ರ ವರೆಗೆ ಕೆಎಸ್‌ಆರ್‌ಪಿ ಒಂದು ಮತ್ತು ಮೂರನೇ ತುಕಡಿಯಿಂದ ಪೊಲೀಸ್ ಬ್ಯಾಂಡ್ ಸಂಗೀತ ಕಾರ್ಯಕ್ರಮ ಜರುಗಲಿದೆ. ಬಳಿಕ ರಮಣಮಹರ್ಷಿ ಆಶ್ರಮದ ಅಂಧ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಲಿದೆ.
10ರಿಂದ 11ರ ವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಸೊಸೈಟಿಯ ಸಹಯೋಗದಲ್ಲಿ ಸಂಗೀತ ಕಛೇರಿ ಆಯೋಜಿಸಲಾಗಿದೆ. ಗೌತಮ್ ಹೆಬ್ಬಾರ್ ಕೊಳಲು ವಾದನ ಕಾರ್ಯಕ್ರಮ ನಡೆಸಿಕೊಡುವರು. ಸಂಜೆ 4ರಿಂದ 5ರ ವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಕವಿ ಎಚ್. ಲಕ್ಷ್ಮೀನಾರಾಯಣ ಸ್ವಾಮಿ ಅವರು ‘ಕಯ್ಯಾರ ಕಿಞ್ಞಣ್ಣ ರೈ’ ಹಾಗೂ ಕವಿ ಮುನಿರಾಜು ಎಂ.ಅರೆಕೆರೆ ಅವರು ‘ಭಾರತದ ಸ್ವಾತಂತ್ರ್ಯಕ್ಕೆ ಕನ್ನಡಿಗರ ಕೊಡುಗೆ’ ವಿಷಯದ ಕುರಿತು ಮಾತನಾಡುವರು.
ಸಂಜೆ 5ರಿಂದ 6ರವರೆಗೆ ‘ಉದ್ಯಾನದಲ್ಲಿ ಸಂಧ್ಯಾರಾಗ’ ಕಾರ್ಯಕ್ರಮವನ್ನು ಎಚ್.ಬಿ. ಓಬಳೇಶ್ ನಡೆಸಿಕೊಡುವರು.
ಯೂನಿವರ್ಸ್ ಆರ್ಟ್ ಫೌಂಡೇಶನ್ ಮತ್ತು ‘ಡೆಸಿಪಲ್ ಭೂಷಣ್ ಡಾನ್ಸ್ ಅಕಾಡೆಮಿ’ ನೃತ್ಯ ಕಾರ್ಯಕ್ರಮ
ಆಯೋಜಿಸಿದೆ. ದಿವ್ಯಶ್ರೀ, ನೇಹಾ ಪ್ರಮೋದ್ ಮತ್ತು ಭೂಮಿಕಾ ಪ್ರಸಾದ್ ಅವರು ಭರತನಾಟ್ಯ ಪ್ರಸ್ತುತಪಡಿಸುವರು.
ಎಂದಿನಂತೆ ಉಚಿತ ಬೈಸಿಕಲ್ ವ್ಯವಸ್ಥೆ, ಹಾಪ್‌ಕಾಮ್ಸ್‌ನಿಂದ ತಾಜಾ ಹಣ್ಣು ಹಾಗೂ ತರಕಾರಿ ಮಾರಾಟ, ದಿ ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿಯಿಂದ ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ ಮತ್ತು ಮಾರಾಟ, ತ್ಯಾಜ್ಯ ನಿರ್ವಹಣೆ ಕುರಿತು ಮಾಹಿತಿ, ಉಚಿತ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.