ADVERTISEMENT

ಕರಾವಳಿ ಪ್ರದೇಶದ ಮಾಲಿನ್ಯದ ಮೇಲೆ ನಿಗಾ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:52 IST
Last Updated 20 ಜುಲೈ 2017, 19:52 IST
ಕಾರ್ಯಾಗಾರದಲ್ಲಿ ಎ.ಎಸ್‌.ಕಿರಣ್‌ ಕುಮಾರ್‌ ಮಾತನಾಡಿದರು –ಪ್ರಜಾವಾಣಿ ಚಿತ್ರ
ಕಾರ್ಯಾಗಾರದಲ್ಲಿ ಎ.ಎಸ್‌.ಕಿರಣ್‌ ಕುಮಾರ್‌ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ ಪೂರ್ವ ಮತ್ತು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಆಗುತ್ತಿರುವ ಮಾಲಿನ್ಯವನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ’ ಎಂದು ಕೇಂದ್ರ ಸರ್ಕಾರದ ಭೂ ವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಡಾ. ಎಂ.ರಾಜೀವನ್ ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಹವಾಮಾನ ಬದಲಾವಣೆ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಭವಿಷ್ಯದ ಭೂಮಿ’ ಕುರಿತ ದಕ್ಷಿಣ ಏಷ್ಯಾ ಪ್ರಾದೇಶಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮುಂದಿನ ದಿನಗಳಲ್ಲಿ ಕರಾವಳಿ ಪ್ರದೇಶದ ಮಾಲಿನ್ಯವು ಪ್ರಮುಖ ವಿಷಯವಾಗಲಿದೆ. ಚೆನ್ನೈನಲ್ಲಿ ಇತ್ತೀಚೆಗೆ ತೈಲ ಸೋರಿಕೆ ಉಂಟಾಗಿತ್ತು. ಅಂತಹ ಸಂದರ್ಭಗಳನ್ನು ನಿಭಾಯಿಸುವುದು ಹಾಗೂ ತಡೆಗಟ್ಟುವ ಬಗ್ಗೆ ಗಮನ ಹರಿಸುತ್ತಿದ್ದೇವೆ’ ಎಂದು ವಿವರಿಸಿದರು.

ADVERTISEMENT

‘ಸಚಿವಾಲಯವು ಇಸ್ರೊ ಸೇರಿದಂತೆ ವಿವಿಧ ಸಂಸ್ಥೆ ಹಾಗೂ ಸಚಿವಾಲಯಗಳ ಸಮನ್ವಯದೊಂದಿಗೆ ಕೆಲಸ ಮಾಡುತ್ತಿದೆ. ಅನೇಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ’ ಎಂದರು.

ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ‘ಮುಂದಿನ ಪೀಳಿಗೆಗೆ ಅಗತ್ಯ ಇರುವ ದತ್ತಾಂಶವನ್ನು ಇಸ್ರೊ ಸಂಗ್ರಹಿಸುತ್ತಿದೆ. ಸೌರಶಕ್ತಿ, ಪವನಶಕ್ತಿಯಂತಹ ಅಸಾಂಪ್ರದಾಯಿಕ ಇಂಧನದ ಬಗೆಗೂ ಗಮನ ಹರಿಸಲಾಗಿದೆ’ ಎಂದು ಹೇಳಿದರು.

‘ಹಿಮಖಂಡವಾದ ಅಂಟಾರ್ಕ್ಟಿಕ್‌ನ  ಪರಿಸರದ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಅಲ್ಲಿನ ಬದಲಾವಣೆಯು ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತದೆ’ ಎಂದರು.

‘ಪ್ರಾಕೃತಿಕ ವೈಪರೀತ್ಯದ ಕುರಿತು ಕಾರ್ಟೊಸ್ಯಾಟ್ ಉಪಗ್ರಹವು ಸಾಕಷ್ಟು ಮಾಹಿತಿಯನ್ನು ನೀಡಿದೆ. ಇದರಿಂದ ಪ್ರವಾಹ, ಚಂಡಮಾರುತ,  ಭೂಕಂಪದಂತಹ ಸಂದರ್ಭಗಳನ್ನು ನಿಭಾಯಿಸಲು ಸಹಕಾರಿ ಆಗಿದೆ. ಈ ಉಪಗ್ರಹದ ಸೆನ್ಸರ್‌ಗಳು 50ಕ್ಕೂ ಹೆಚ್ಚು ನಗರಗಳ ಮೇಲೆ ನಿಗಾ ವಹಿಸಿದ್ದು, ಮಾಹಿತಿಯನ್ನು ರವಾನಿಸುತ್ತಿವೆ. ಉಪಗ್ರಹ ನೀಡುವ ಮಾಹಿತಿ ಹಾಗೂ ವಾಸ್ತವದಲ್ಲಿ ಇರುವ ಅಂಶಗಳನ್ನು ಸೇರಿಸಿ ಸಮಗ್ರ ಅಧ್ಯಯನ ನಡೆಸುತ್ತಿದ್ದೇವೆ’ ಎಂದು ತಿಳಿಸಿದರು.

‘ಇಸ್ರೊ ನೀಡುವ ದತ್ತಾಂಶವು  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಕೈಗೊಳ್ಳಲು ನೆರವಾಗಿದೆ. ಹೈದರಾಬಾದ್‌ ಕೇಂದ್ರದಲ್ಲಿ ಹವಾಮಾನ ಬದಲಾವಣೆ ಕುರಿತು ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ಭವಿಷ್ಯದ ಭೂಮಿಯ ಕಲ್ಪನೆಯನ್ನು ಸಾಕಾರಗೊಳಿಸಬೇಕಾದರೆ ಅದಕ್ಕೆ ಸಾಕಷ್ಟು ಮಾಹಿತಿ ಬೇಕು. ಅಂತಹ ಎಲ್ಲ ಮಾಹಿತಿಯನ್ನು ಕ್ರೋಡೀಕರಿಸಬೇಕು. ಈಗಾಗಲೇ ಭೂಮಿಯನ್ನು ಮಲಿನಗೊಳಿಸಿದ್ದು, ಇದನ್ನು ತಡೆಗಟ್ಟಲು  ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ನೀತಿ ನಿರೂಪಕರು ಯೋಜನೆಗಳನ್ನು ರೂಪಿಸಲು ನಮ್ಮ ಸಂಸ್ಥೆಯ ಸಂಶೋಧನಾ ಮಾಹಿತಿಯನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.