ಬೆಂಗಳೂರು: ಸ್ವಾತಂತ್ರ್ಯ, ಸಮಾನತೆ, ನ್ಯಾಯ ಹಾಗೂ ಘನತೆಯ ಬದುಕಿಗೆ ಆಗ್ರಹಿಸಿ ಸಲಿಂಗಿಗಳು ಮತ್ತು ಲೈಂಗಿಕ ಅಲ್ಪಸಂಖ್ಯಾತರು, ತುಳಸಿ ತೋಟದಿಂದ (ಚಿಕ್ಕ ಲಾಲ್‌ಬಾಗ್) ನಗರದ ಪುರಭವನದವರೆಗೆ ಭಾನುವಾರ ಸ್ವಾಭಿಮಾನ ಮೆರವಣಿಗೆ ನಡೆಸಿದರು.
‘ಬೆಂಗಳೂರು ಪ್ರೈಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬ’ದ ಅಂಗವಾಗಿ ಆಯೋಜಿಸಿದ್ದ ಈ ಮೆರವಣಿಗೆಯಲ್ಲಿ, ದೇಶದ ನಾನಾ ಭಾಗಗಳ ಸಲಿಂಗಿಗಳು ಹಾಗೂ ಲೈಂಗಿಕ ಅಲ್ಪಸಂಖ್ಯಾತರು ಭಾಗವಹಿಸಿದ್ದರು.
‘ನಾವೂ ಮನುಷ್ಯರು. ಘನತೆಯಿಂದ ಬದುಕಲು ಬಿಡಿ’ ಎಂದು ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಮಂದಿ, ಭಾರತೀಯ ದಂಡ ಸಂಹಿತೆ ಕಲಂ 377 ಅನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಒಕ್ಕೂಟದ ಸಹ ಸಂಸ್ಥಾಪಕರಾದ ಅಕ್ಕೈ ಪದ್ಮಸಾಲಿ, ‘ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜ ನಿಕೃಷ್ಟವಾಗಿ ಕಾಣುವುದನ್ನು ನಿಲ್ಲಿಸಬೇಕು’ ಎಂದರು. ‘ಐಪಿಸಿ ಕಲಂ 377 ಸಲಿಂಗಿಗಳು ಮತ್ತು ಲೈಂಗಿಕ ಅಲ್ಪಸಂಖ್ಯಾತರ ವಿರೋಧಿಯಾಗಿದೆ. ಸಲಿಂಗ ಕಾಮ ಅಪರಾಧ ಎಂದು ವ್ಯಾಖ್ಯಾನಿಸುವ ಇದನ್ನು ಸರ್ಕಾರ ತೆಗೆದು ಹಾಕುವ ಮೂಲಕ ನಮ್ಮ ಹಕ್ಕುಗಳನ್ನು ರಕ್ಷಿಸಬೇಕು’ ಎಂದು ಒತ್ತಾಯಿಸಿದರು.
ಕಾಯ್ದೆ ರದ್ದುಗೊಳಿಸಿ: ‘ಲೈಂಗಿಕ ಅಲ್ಪಸಂಖ್ಯಾತರ ಮೇಲೆ ನಿಗಾ ಇಡುವ ಕರ್ನಾಟಕ ಪೊಲೀಸ್ ಕಾಯ್ದೆ– 36(ಎ) ನಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡುವಂತಿದೆ. ಇದರಿಂದಾಗಿ ಪೊಲೀಸರು ನಮ್ಮ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಹಿಂಸಿಸಲು ಪ್ರಚೋದಿಸುತ್ತದೆ’ ಎಂದು ದೂರಿದರು.
‘ಕಳೆದ ವರ್ಷದಲ್ಲಿ ಕನಿಷ್ಠ 15 ಮಂದಿ ಮೇಲೆ ಪೊಲೀಸರು ಸುಳ್ಳು ಕೇಸು ಹಾಕಿದ್ದಾರೆ. ಈ ಪೈಕಿ ಕೆಲವರು 2ರಿಂದ 5 ತಿಂಗಳು ಜೈಲಿನಲ್ಲಿ ನರಕಯಾತನೆ ಅನುಭವಿಸಿದ್ದಾರೆ. ಇಂತಹ ಕಾಯ್ದೆಯನ್ನು ಸರ್ಕಾರ ಕೂಡಲೇ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.
ಕಾರ್ಯಕ್ರಮ ಆಯೋಜಿಸಿದ್ದ ಬೆಂಗಳೂರು ಮೂಲದ ಸಿಎಸ್ಎಂಆರ್ ಸಲಿಂಗಿ, ಉಭಯಲಿಂಗಿ, ತೃತೀಯ ಲಿಂಗಿ ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಪ್ರಾತಿನಿಧಿಕ ಸಂಘಟನೆಯಾಗಿದೆ. ಇದು ಸುಮಾರು 50 ಸಂಘ ಸಂಸ್ಥೆಗಳನ್ನು ಒಳಗೊಂಡಿದೆ.ಈ ಸಂಘಟನೆಯ ಆಶ್ರಯದಲ್ಲಿ 2008ರಿಂದ ‘ಬೆಂಗಳೂರು ಪ್ರೈಡ್ ಮತ್ತು ಕರ್ನಾಟಕ ಕ್ವೀರ್ ಹಬ್ಬ’ವನ್ನು ಆಚರಿಸಿಕೊಂಡು ಬರುತ್ತಿದೆ.
ಸವಾರಿ ಮಾಡುವ ಮಸೂದೆ
‘ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಇತ್ತೀಚೆಗೆ ಮಂಡನೆಯಾಗಿರುವ ‘ತೃತೀಯ ಲಿಂಗಿಗಳ ಹಕ್ಕಗಳ ಮಸೂದೆ– 2014’ರಲ್ಲಿರುವ ಅಂಶಗಳು ಏಕಪಕ್ಷೀಯವಾಗಿದೆ. ಮಸೂದೆಯ ಈಗಿನ ಸ್ವರೂಪ, ಅಧಿಕಾರಿಗಳು ನಮ್ಮ ಮೇಲೆ ಸವಾರಿ ಮಾಡುವಂತಿದೆ’ ಎಂದು ಜೀವಾ ಸಂಸ್ಥೆಯ ಉಮಾ ಅವರು ಅಭಿಪ್ರಾಯಪಟ್ಟರು.
‘ಕರಡು ಸಿದ್ದಪಡಿಸುವುದಕ್ಕೂ ಮುಂಚೆ ಸರ್ಕಾರ ಸಮುದಾಯದ ಪ್ರತಿನಿಧಿಗಳ ಅಭಿಪ್ರಾಯ ಪಡೆಯದಿರುವುದೇ ಇದಕ್ಕೆ ಕಾರಣ. ಸರ್ಕಾರ ಈಗಲಾದರೂ ಸಮುದಾಯದವರ ಜತೆ ಮಾತುಕತೆ ನಡೆಸಿ, ಮಸೂದೆಯನ್ನು ಮತ್ತೆ ಮಂಡಿಸಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.