ADVERTISEMENT

ಕಲಬುರ್ಗಿ ಹತ್ಯೆ: ‘ಶ್ವೇತಪತ್ರ ಹೊರಡಿಸಿ’

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 20:01 IST
Last Updated 30 ಆಗಸ್ಟ್ 2017, 20:01 IST
ವಿವಿಧ ಪ್ರಾಧಿಕಾರಗಳು ಹಾಗೂ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಗೌರವಿಸಲಾಯಿತು. ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎಂ.ತಿಮ್ಮಯ್ಯ, ಅಧ್ಯಕ್ಷ ಮಾಯಣ್ಣ, ಕುಂ.ವೀರಭದ್ರಪ್ಪ ಹಾಗೂ ನಿಕಟಪೂರ್ವ ಅಧ್ಯಕ್ಷ ಟಿ.ತಿಮ್ಮೇಶ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ವಿವಿಧ ಪ್ರಾಧಿಕಾರಗಳು ಹಾಗೂ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಗೌರವಿಸಲಾಯಿತು. ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎಂ.ತಿಮ್ಮಯ್ಯ, ಅಧ್ಯಕ್ಷ ಮಾಯಣ್ಣ, ಕುಂ.ವೀರಭದ್ರಪ್ಪ ಹಾಗೂ ನಿಕಟಪೂರ್ವ ಅಧ್ಯಕ್ಷ ಟಿ.ತಿಮ್ಮೇಶ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ನಡೆದು ಎರಡು ವರ್ಷಗಳು ಕಳೆದರೂ ಇನ್ನೂ ಕೊಲೆಗಾರರನ್ನು ಬಂಧಿಸದಿರುವುದು ದುರ್ದೈವದ ಸಂಗತಿ. ತನಿಖೆ ಪ್ರಗತಿಯ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಆಗ್ರಹಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಲಬುರ್ಗಿ ಅವರು ವೈಚಾರಿಕ ಮನೋಭಾವ ಹೊಂದಿದ್ದ ವ್ಯಕ್ತಿ. ಕನ್ನಡ ಶರಣ ಸಾಹಿತ್ಯಕ್ಕೆ ಹೊಸ ವ್ಯಾಖ್ಯಾನ ಬರೆದ ಮಹನೀಯರು. ಅಂಥವರನ್ನು, ದಯವೇ ಧರ್ಮದ ಮೂಲ ಎಂಬ ಅಂತಃಕರಣಕ್ಕೆ ಹೆಸರಾದ ನಾಡಿನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದು ಅತ್ಯಂತ ಹೀನಾಯ ಕೃತ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ವಿಚಾರವಾದಿಗಳಾದ ಗೋವಿಂದ್ ಪಾನ್ಸಾರೆ ಹಾಗೂ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದ ಆರೋಪಿಗಳೂ ಪತ್ತೆಯಾಗಿಲ್ಲ. ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ವಿನಾಕಾರಣ ವಿಳಂಬವಾಗುತ್ತಿದೆ. ಈ ಬಗ್ಗೆ ಮಾತನಾಡಲು ಆಗದ ವಾತಾವರಣ ನಿರ್ಮಾಣವಾಗಿದೆ. ಇದು ಒಂದು ರೀತಿಯಾಗಿ ಅಘೋಷಿತ ತುರ್ತುಪರಿಸ್ಥಿತಿ ಇದ್ದಂತೆ’ ಎಂದರು.

‘ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ಮುಂದೆ ಹೊಸ ಸವಾಲುಗಳಿವೆ. ಅವುಗಳನ್ನು ಸಮರ್ಥವಾಗಿ ಎದುರಿಸಬೇಕಿದೆ. ಎಲ್ಲ ಕ್ಷೇತ್ರಗಳಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಬೇಕು. ವೈಚಾರಿಕ ಮನೋಭಾವ ಬಿತ್ತುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ತಿಳಿಸಿದರು.

ಅಧ್ಯಕ್ಷ, ಸದಸ್ಯರಿಗೆ ಸನ್ಮಾನ: ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಬೈರಮಂಗಲ ರಾಮೇಗೌಡ, ರಾಜಶೇಖರ ಮಠಪತಿ, ಸಂಗಮೇಶ ಬಾದವಾಡಗಿ, ಕೆ.ವಿ.ರಾಜೇಶ್ವರಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್, ಸದಸ್ಯರಾದ ಆರ್.ವೆಂಕಟರಾಜು, ಬಿ.ವಿಠಲ್, ಬಿ.ಎಸ್.ವಿದ್ಯಾರಣ್ಯ, ರಾಮಕೃಷ್ಣ ಬೆಳ್ತೂರು, ಬೇಲೂರು ರಘುನಂದನ, ಜಾನಪದ ಅಕಾಡೆಮಿಯ ಸದಸ್ಯರಾದ ಬಿ.ಎಸ್.ತ‌ಲ್ವಾಡಿ, ಡಿ.ಆರ್.ನಿರ್ಮಾಲಾ, ಸಂಗೀತ ಹಾಗೂ ನೃತ್ಯ ಅಕಾಡೆಮಿ ಸದಸ್ಯ ಆನಂದ ಮಾದಲಗೆರೆ ಅವರನ್ನು ಸಾಹಿತಿ ಕುಂ.ವೀರಭದ್ರಪ್ಪ ಅವರು ಸನ್ಮಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.