ಬೆಂಗಳೂರು: `ಶ್ರೇಷ್ಠ ಕಲಾಕೃತಿಗಳು ಕೇವಲ ನೋಡುವುದಕ್ಕೆ ಸೀಮಿತವಾಗದೆ ತಮ್ಮನ್ನು ಓದುವಂತೆಯೂ ಮಾಡುತ್ತವೆ. ಕಲಾವಿದ ವಾಸುದೇವ್ ಅವರ ಚಿತ್ರಗಳು ಆ ಸಾಲಿಗೆ ಸಲ್ಲುತ್ತವೆ' ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಅಭಿಪ್ರಾಯಪಟ್ಟರು.
ನಗರದ ಸಿ.ಎಂ.ಎನ್. ಪ್ರಕಾಶನ ಪ್ರಕಟಿಸಿರುವ `ವೃಕ್ಷ ವಾಸುದೇವ್ ಅವರ ಕಲೆ ಮತ್ತು ಬದುಕು' ಕೃತಿಯನ್ನು ಭಾನುವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
`ಚಿತ್ರಕಲೆಯಲ್ಲಿ ನಾನೇನು ಹೆಚ್ಚು ಬಲ್ಲವನಲ್ಲ. ಆದರೆ, ಚಿತ್ರ ಪ್ರದರ್ಶನದಂತಹ ಕಾರ್ಯಕ್ರಮಗಳು ನನಗೆ ಒಳಗಿನಿಂದ ಇರುಸು-ಮುರುಸು ಉಂಟು ಮಾಡುತ್ತವೆ. ಪ್ರತಿ ಚಿತ್ರ ಏನನ್ನಾದರೂ ಹೇಳುತ್ತಿರುತ್ತದೆ. ತುಂಬ ಒಳ್ಳೆಯದಿದ್ದರೆ ಅದನ್ನೇ ನೋಡಬೇಕು ಎನಿಸುತ್ತದೆ. ಆದರೆ, ಪ್ರದರ್ಶನದಲ್ಲಿ ಅದಕ್ಕೆ ಹೆಚ್ಚಿನ ಆಸ್ಪದ ಇಲ್ಲ' ಎಂದು ಹೇಳಿದರು.
`ಯಾವುದೇ ಚಿತ್ರ ನೋಡುವಾಗ ಮನಸ್ಸು ಮತ್ತು ಕಣ್ಣು ಎರಡಕ್ಕೂ ಕೆಲಸ. ಮನಸ್ಸು ಚಿತ್ರವನ್ನು ಓದುತ್ತದೆ. ಕಣ್ಣು ಅದರ ಸೌಂದರ್ಯವನ್ನು ಆಸ್ವಾದಿಸುತ್ತದೆ. ಆದ್ದರಿಂದಲೇ ಯುರೋಪಿನ ಕಲಾ ಶಾಲೆಗಳಲ್ಲಿ ಚಿತ್ರಗಳನ್ನು ಒಂದೆಡೆ ಕುಳಿತುನೋಡುವ ವ್ಯವಸ್ಥೆ ಮಾಡಲಾಗಿರುತ್ತದೆ' ಎಂದು ವಿವರಿಸಿದರು.
`ನನ್ನ ಸಂಸ್ಕಾರ ಕೃತಿಗೆ ಅಂದವಾದ ಮೇಲು ಹೊದಿಕೆಯನ್ನು ಮಾಡಿಕೊಟ್ಟವರು ವಾಸುದೇವ್. ಕನ್ನಡ ಸಾಹಿತ್ಯ ಲೋಕ ಅದುವರೆಗೆ ಕಾಣದಿದ್ದ ಹೊಸತನ ಪುಸ್ತಕದ ಮುಖಪುಟದಲ್ಲಿ ಎದ್ದುಕಂಡಿತ್ತು. ಮೇಲು ಹೊದಿಕೆಯಲ್ಲೂ ಬಣ್ಣಗಳಿಂದ ಆಟವಾಡುವ ಸೃಜನಶೀಲ ಪ್ರಕ್ರಿಯೆ ಆನಂತರದ ದಿನಗಳಲ್ಲಿ ತೀವ್ರವಾಯಿತು' ಎಂದು ಸ್ಮರಿಸಿದರು.
`ವಾಸುದೇವ್ ಅವರು ಸಾಹಿತ್ಯ ಕೃತಿಗಳನ್ನು ಓದುತ್ತಾ, ಸಂಗೀತ ಆಲಿಸುತ್ತಾ ಚಿತ್ರ ಬಿಡಿಸುತ್ತಾರೆ. ಆದ್ದರಿಂದಲೇ ಅವರ ಕಲಾಕೃತಿಗಳಲ್ಲಿ ತೀರಾ ಅಪರೂಪದ ಸೊಬಗಿದೆ. ಅವರ ಮುದ್ದಾದ ಅಕ್ಷರಗಳು ಜೀವಂತಿಕೆ ಹೊಂದಿದ್ದು, ಎರೇಹುಳಗಳ ರೀತಿಯಲ್ಲಿ ಪುಸ್ತಕಗಳಲ್ಲಿ ಹರಿದಾಡಿದಂತೆ ಭಾಸವಾಗುತ್ತದೆ' ಎಂದು ಅವರು ಬಣ್ಣಿಸಿದರು.
`ಕಲಾಕೃತಿಗೆ ಯಾವುದೇ ಭಾಷೆಯ ಚೌಕಟ್ಟಿಲ್ಲ. ಇದು ಕಲಾವಿದನಿಗೆ ಅವಕಾಶವೂ ಹೌದು, ಸವಾಲೂ ಹೌದು. ವಾಸುದೇವ್, ಭಾರತದ ಅಷ್ಟೇ ಏಕೆ ಜಗತ್ತಿನ ದೊಡ್ಡ ಕಲಾವಿದ. ಅವರ ರೇಖೆ ಮತ್ತು ಬಣ್ಣದ ವೈವಿಧ್ಯದಲ್ಲಿ ಅಪೂರ್ವವಾದ ಮಾಧುರ್ಯ ತುಂಬಿದೆ. ವಾಸುದೇವ್ ಬಿಡಿಸಿದ ವೃಕ್ಷದ ಚಿತ್ರ ನೋಡಿ, ಅದರಲ್ಲಿ ಅವರ ವ್ಯಕ್ತಿತ್ವ ಬೆಳೆದು ಬಂದ ಬಗೆಯನ್ನು ನಾನು ಓದಿದ್ದೇನೆ' ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮತ್ತೊಬ್ಬ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಗಿರೀಶ ಕಾರ್ನಾಡ, `ದೃಶ್ಯ ಮಾಧ್ಯಮಕ್ಕೆ ಸಂಬಂಧಿಸಿದಂತೆ ಕನ್ನಡ ಸಾಹಿತ್ಯ ಇದುವರೆಗೆ ಇಂತಹ ಕೃತಿಯನ್ನು ಕಂಡಿರಲಿಲ್ಲ. ಇದೊಂದು ಮೌಲ್ಯಯುತ ದಾಖಲೆಯಾಗಿ ಉಳಿಯಲಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
`ಕಲಾಕೃತಿಗಳು ಎಲ್ಲರಿಗೂ ಸಿಗುವ ಸಾಹಿತ್ಯ ಕೃತಿಗಳಂತೆ ಅಲ್ಲ. ಒಮ್ಮೆ ಮಾರಾಟವಾದರೆ ಯಾರದ್ದೋ ಮನೆಯ ಗೋಡೆ ಅಲಂಕರಿಸುತ್ತವೆ. ಆದರೆ, ಇತ್ತೀಚೆಗೆ ಬೆಳೆದ ಮುದ್ರಣ ತಂತ್ರಜ್ಞಾನದ ಪರಿಣಾಮ ಮೂಲ ಕೃತಿ ಸತ್ವವನ್ನು ಉಳಿಸಿಕೊಂಡೇ ನಕಲು ಮಾಡಬಹುದಾಗಿದೆ. ಕಲೆಯ ದೃಷ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆ' ಎಂದು ಪ್ರತಿಪಾದಿಸಿದರು.
`ಜಗತ್ತಿನ ಕಲಾ ಲೋಕದಲ್ಲಿ ಭಾರತೀಯತೆ ಎದ್ದು ಕಾಣಬೇಕಿದ್ದು, ವಾಸುದೇವ್ ಅವರ ಚಿತ್ರಗಳಿಗೆ ಅಂತಹ ತಾಕತ್ತಿದೆ' ಎಂದು ಹೇಳಿದರು. `ಆಧುನಿಕ ಚಿತ್ರಕಲೆ ಬಗೆಗೆ ಪಂ. ಭೀಮಸೇನ್ ಜೋಶಿ ಅವರಂತಹ ಘಟಾನುಘಟಿಗಳೂ ತಾತ್ಸರದ ಮನೋಭಾವ ಹೊಂದಿದ್ದರು. ಆದರೆ, ಆಧುನಿಕ ಚಿತ್ರಕಲೆಯಲ್ಲಿ ಸೃಜನಶೀಲತೆ ಮಡುಗಟ್ಟಿದೆ' ಎಂದು ತಿಳಿಸಿದರು.
`ವಾಸುದೇವ್ ಅವರಿಗೂ ನನಗೂ 50 ವರ್ಷಗಳಿಂದ ಗೆಳೆತನ. ಮದ್ರಾಸ್ ಪ್ಲೇಯರ್ಸ್ ತಂಡದಿಂದ ಇಂಗ್ಲಿಷ್ ನಾಟಕ ಆಡುವಾಗ ಅವರು ರಂಗಸಜ್ಜಿಕೆ ವಿನ್ಯಾಸ ಮಾಡುತ್ತಿದ್ದರು. ಕೆಸಿಎಸ್ ಫಣಿಕ್ಕರ್ ಮತ್ತು ವಾಸುದೇವ್ ಅವರ ಜೊತೆಗಿನ ಸಂವಾದದಿಂದ ನನ್ನ ಸಾಹಿತ್ಯ ಕೃಷಿಗೆ ಸಾಕಷ್ಟು ನೆರವಾಗಿದೆ' ಎಂದು ನೆನೆದರು.
ಲೇಖಕಿ ಪ್ರತಿಭಾ ನಂದಕುಮಾರ್ `ವಾಸು ಮತ್ತು ಕಪಿ' ಕವನ ವಾಚಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಚ್. ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಕಲಾವಿದರೂ ಆದ ಕೃತಿ ಸಂಪಾದಕ ಎನ್. ಮರಿಶಾಮಾಚಾರ್ ವೇದಿಕೆ ಮೇಲಿದ್ದರು.
ಸಿಟ್ಟು ಮಾಡಿಕೊಂಡ ಬರ್ತ್‌ಡೇ ಬಾಯ್!
`ಕೃತಿ ಬಿಡುಗಡೆ ಸಮಾರಂಭದಲ್ಲಿ ನಾನು ಸಭಿಕನಾಗಿ ಕೆಳಗೆ ಇರಬೇಕಿತ್ತು. ಒತ್ತಾಯದಿಂದ ಮೇಲೆ ಕರೆದ ಕಾರಣ ಬಂದೆ. ಈಗ ಸನ್ಮಾನ ಮಾಡಲು ಹೊರಟಿದ್ದೀರಿ. ಇದು ಅತಿಯಾಯಿತು. ಆದರೆ, ಇದನ್ನೂ ಸಹಿಸಿಕೊಳ್ಳುತ್ತಿದ್ದೇನೆ'
-ಕೃತಿ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಕಲಾವಿದ ವಾಸುದೇವ್ ಸಿಟ್ಟು ತೋರಿದ್ದು ಹೀಗೆ. ಭಾನುವಾರವೇ 73ನೇ ಜನ್ಮದಿನವನ್ನೂ ಆಚರಿಸಿಕೊಂಡ ಅವರಿಗೆ ಈ ಸಮಾರಂಭ ಉಡುಗೊರೆ ರೂಪದಲ್ಲಿ ನಡೆಯಿತು.
`ನಾನು 73ನೇ ವರ್ಷಕ್ಕೆ ಕಾಲಿಟ್ಟದ್ದನ್ನು ನೆನಪಿಸಲಾಗಿದೆ. ಆದರೆ, ನನಗೆ ವಯಸ್ಸು ಆದಂತೆ ಅನಿಸುವುದಿಲ್ಲ. ದಿನದಿಂದ ದಿನಕ್ಕೆ ತರುಣನಾಗುತ್ತಿದ್ದೇನೆ ಎಂಬ ಭಾವ ತುಂಬಿದೆ' ಎಂದ ಅವರು, `ಸಾಹಿತ್ಯ, ಸಿನಿಮಾ, ಸಂಗೀತ, ರಂಗಭೂಮಿ ಮತ್ತು ಚಿತ್ರಕಲೆ ಒಟ್ಟಾಗಿ ನನ್ನ ವ್ಯಕ್ತಿತ್ವ ರೂಪಿಸಿವೆ' ಎಂದು ವಿನೀತರಾಗಿ ಹೇಳಿದರು. `ನನ್ನ ಚಿತ್ರಗಳಲ್ಲಿ ಕನ್ನಡತನವನ್ನು ಅರಳಿಸಲು ಯತ್ನಿಸಿದ್ದೇನೆ' ಎಂದು ವಾಸುದೇವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.