ADVERTISEMENT

ಕವಿತೆ ಚಿರಂಜೀವಿ, ವಿಮರ್ಶೆ ಅಲ್ಪಾಯುಷಿ

ಪುತಿನ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ವಿಮರ್ಶಕ ಎಚ್‌.ಎಸ್‌. ರಾಘವೇಂದ್ರ ರಾವ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2016, 19:30 IST
Last Updated 13 ಅಕ್ಟೋಬರ್ 2016, 19:30 IST
‘ಪುತಿನ ಮಲೆದೇಗುಲ’ ಕೃತಿಯನ್ನು ಎಚ್‌.ಎಸ್‌.ರಾಘವೇಂದ್ರ ರಾವ್‌ (ಎಡದಿಂದ ಎರಡನೆಯವರು) ಬಿಡುಗಡೆ ಮಾಡಿದರು. ಲೇಖಕಿ ಎಲ್‌.ವಿ.ಶಾಂತಕುಮಾರಿ, ಡಾ.ಎನ್‌.ಎಸ್‌. ಲಕ್ಷ್ಮಿನಾರಾಯಣ ಭಟ್ಟ, ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ, ಪುತಿನ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಎಸ್‌.ಅಚ್ಯುತ್‌ ಇದ್ದಾರೆ              –ಪ್ರಜಾವಾಣಿ ಚಿತ್ರ
‘ಪುತಿನ ಮಲೆದೇಗುಲ’ ಕೃತಿಯನ್ನು ಎಚ್‌.ಎಸ್‌.ರಾಘವೇಂದ್ರ ರಾವ್‌ (ಎಡದಿಂದ ಎರಡನೆಯವರು) ಬಿಡುಗಡೆ ಮಾಡಿದರು. ಲೇಖಕಿ ಎಲ್‌.ವಿ.ಶಾಂತಕುಮಾರಿ, ಡಾ.ಎನ್‌.ಎಸ್‌. ಲಕ್ಷ್ಮಿನಾರಾಯಣ ಭಟ್ಟ, ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ, ಪುತಿನ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಎಸ್‌.ಅಚ್ಯುತ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕವಿತೆಗೆ ಸಾವಿಲ್ಲ. ಅದು ಚಿರಂಜೀವಿ ಇದ್ದಂತೆ. ಆದರೆ, ವಿಮರ್ಶೆ ಅಲ್ಪಾಯುಷಿ’ ಎಂದು ವಿಮರ್ಶಕ ಡಾ.ಎಚ್‌.ಎಸ್‌. ರಾಘವೇಂದ್ರ ರಾವ್‌ ಹೇಳಿದರು.
ಡಾ.ಪುತಿನ ಟ್ರಸ್ಟ್‌ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಪುತಿನ ಪುಣ್ಯ ಸ್ಮರಣೆ’ ಕಾರ್ಯಕ್ರಮದಲ್ಲಿ ‘ಮಲೆದೇಗುಲ ಕಾವ್ಯ– ಚಿತ್ರ ಸಂಪುಟ’ವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಪುತಿನ ಅವರ ಕಾವ್ಯದ ಬಗ್ಗೆ 1990ರ ದಶಕದಲ್ಲಿ ನಾನು ಬರೆದ ವಿಮರ್ಶೆ ಈಗ ಬಾಲಿಶ ಎನಿಸುತ್ತಿದೆ. ಈಗ ಅವರ ಕಾವ್ಯವನ್ನು ಓದಿದರೆ ಬೇರೆಯದೇ ಅರ್ಥ, ರಸಾನುಭವ ಆಗುತ್ತದೆ. ಆದ್ದರಿಂದ ಕವಿತೆಗೆ ಬಳಸಲು ಯೋಗ್ಯವಾದ ಅವಧಿ (ಯೂಸ್‌ ಬೈ ಡೇಟ್‌) ಎಂಬುದು ಇಲ್ಲ. ಆದರೆ, ಈ ಮಾತನ್ನು ವಿಮರ್ಶೆಗೆ ಅನ್ವಯ ಮಾಡಲು ಸಾಧ್ಯವಿಲ್ಲ’ ಎಂದರು.

‘ಮಲೆದೇಗುಲ ಕೃತಿಯ ಕವಿತೆಗಳನ್ನು ಆಸ್ತಿಕರು ಮಾತ್ರ ಓದಬೇಕು ಎಂಬ ಮಾತು ಸರಿಯಲ್ಲ. ಈ ಕವಿತೆಗಳನ್ನು ಓದಲು ನಾಸ್ತಿಕತೆ ಅಡ್ಡಿಬರುವುದಿಲ್ಲ. ಪುತಿನ ಅವರ ಚಿಂತನೆಯ ಮೂಲದ್ರವ್ಯ ಇರುವುದು ತಾತ್ವಿಕತೆಯಲ್ಲಿ. ಆದರೆ, ತಾತ್ವಿಕತೆ, ಧಾರ್ಮಿಕತೆ, ಪೂಜೆ, ಭಕ್ತಿ ಎಲ್ಲವೂ ಒಂದೇ ಎನ್ನುವ ಹಾಗೆ ಕಲಸುಮೇಲೋಗರ ಮಾಡಲಾಗಿದೆ’ ಎಂದರು.

ADVERTISEMENT

‘ಪುತಿನ ಅವರ ಕಾವ್ಯವು ಸಂಸ್ಕೃತ ಪದಗಳ ಮೆರವಣಿಗೆ ಇದ್ದಂತೆ. ಅವರ ಕಾವ್ಯವನ್ನು ಒಂದೇ ಬಾರಿಗೆ ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಆಕ್ಷೇಪ ಇದೆ. ಆದರೆ, ಅವರ ಕಾವ್ಯದಲ್ಲಿ ಕನ್ನಡ ಪದಗಳ ವಿಶಿಷ್ಟ ನುಡಿಜೋಡಣೆ ಇದೆ; ಸಮಾಸಗಳಿವೆ. ಆದ್ದರಿಂದ ಅವರ ಕಾವ್ಯದೊಳಗೆ ಪ್ರವೇಶ ಮಾಡದೇ ಇದ್ದರೆ ಅದರ ರಸಸ್ವಾದ ಸಾಧ್ಯವಿಲ್ಲ’ ಎಂದು ಹೇಳಿದರು.

‘ಕಾವ್ಯ ಎಂಬುದು ಪತ್ತೇದಾರಿ ಕಾದಂಬರಿಯಲ್ಲ. ನಿಜವಾದ ಕಾವ್ಯವನ್ನು ಸಮಯ ಕೊಟ್ಟು ಓದಬೇಕು. ಅದರಲ್ಲಿರುವ ಅರ್ಥಗಳ ಬಗ್ಗೆ ತಿಳಿದುಕೊಳ್ಳಬೇಕು’ ಎಂದರು.
ಲೇಖಕಿ ಶಾಂತಕುಮಾರಿ ಅವರ ‘ಹರಿಚರಿತೆ– ಪುತಿನ ರಸದರ್ಶನ’ ಕೃತಿಯನ್ನು ಬಿಡುಗಡೆ ಮಾಡಿದ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಮಾತನಾಡಿ, ‘50 ವರ್ಷಗಳ ಕಾಲ ಕಾವ್ಯದ ಅಧ್ಯಯನ ನಡೆಸಿದ ನನಗೇ ಪುತಿನ ಕಾವ್ಯ ಓದುವಾಗ ತೊಡಕುಗಳು ಎದುರಾದವು. ಆದರೆ, ಆಧುನಿಕ ಕಾವ್ಯವನ್ನೇ ಓದಿಕೊಂಡಿರುವವರಿಗೆ ಪುತಿನ ಕಾವ್ಯವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ’ ಎಂದರು.

­­ಲೇಖಕಿ ಶಾಂತಕುಮಾರಿ ಮಾತನಾಡಿ, ‘ಪುತಿನ ಅವರ ವ್ಯಕ್ತಿತ್ವದಲ್ಲೇ ರಸ ತುಂಬಿತ್ತು. ಅವರ ಪ್ರತಿಯೊಂದು ಕವಿತೆಯಲ್ಲೂ ರಸದರ್ಶನವನ್ನು ಕಾಣಬಹುದು. ಅವರಿಗೆ ಪ್ರಕೃತಿಯ ಪ್ರತಿ ವಸ್ತುವಿನ ಬಗ್ಗೆ ಕುತೂಹಲ ಹಾಗೂ ಆಸಕ್ತಿ ಇತ್ತು’ ಎಂದು ಹೇಳಿದರು.

**

ಪುತಿನ ಒಳ್ಳೆಯ ಭಾಷಣಕಾರರಲ್ಲ. ಆದರೆ, ಸ್ನೇಹಿತರೊಟ್ಟಿಗೆ ಚರ್ಚಿಸುವಾಗ ಅವರೊಬ್ಬ ಪ್ರಖರ ವಾಗ್ಮಿ. ಅವರು ಉದಾತ್ತ ಚಿಂತನೆಗಳನ್ನು ಹೊಂದಿದ್ದರು.
-ಡಾ.ಎನ್‌.ಎಸ್‌. ಲಕ್ಷ್ಮಿನಾರಾಯಣ ಭಟ್ಟ, ಕವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.