ADVERTISEMENT

ಕಸದಿಂದ ವಿದ್ಯುತ್‌: ಶೀಘ್ರ ಚಾಲನೆ

ಮೂರು ಕಂಪೆನಿಗಳಿಂದ ಪ್ರಸ್ತಾವ

ನವೀನ್ ಕುಮಾರ್‌ ಎನ್.
Published 14 ಸೆಪ್ಟೆಂಬರ್ 2017, 20:22 IST
Last Updated 14 ಸೆಪ್ಟೆಂಬರ್ 2017, 20:22 IST
ದೊಡ್ಡಬಿದರಕಲ್ಲು ಗ್ರಾಮದಲ್ಲಿರುವ ಘನತಾಜ್ಯ ಸಂಸ್ಕರಣಾ ಘಟಕ –ಪ್ರಜಾವಾಣಿ ಚಿತ್ರ/ ಸತೀಶ್‌ ಬಡಿಗೇರ
ದೊಡ್ಡಬಿದರಕಲ್ಲು ಗ್ರಾಮದಲ್ಲಿರುವ ಘನತಾಜ್ಯ ಸಂಸ್ಕರಣಾ ಘಟಕ –ಪ್ರಜಾವಾಣಿ ಚಿತ್ರ/ ಸತೀಶ್‌ ಬಡಿಗೇರ   

ಬೆಂಗಳೂರು: ನೆದರ್ಲೆಂಡ್‌ನ ನೆಕ್ಸಸ್‌ ನೋವಾ ಕಂಪೆನಿಯು ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಬಾಗಲೂರಿನಲ್ಲಿ ಘನತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ಘಟಕವನ್ನು ಸ್ಥಾಪಿಸಲಿದೆ.

₹200 ಕೋಟಿ ವೆಚ್ಚದಲ್ಲಿ ಘಟಕ ಆರಂಭವಾಗಲಿದ್ದು, ಇದಕ್ಕಾಗಿ ಕಂಪೆನಿಗೆ ಬಿಬಿಎಂಪಿಯು 9 ಎಕರೆ ಜಾಗವನ್ನು ನೀಡಿದೆ. ಪ್ರತಿದಿನ 600 ಟನ್‌ ಘನತ್ಯಾಜ್ಯದಿಂದ 7 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಉದ್ದೇಶಿಸಲಾಗಿದೆ.

‘ಕಸದಿಂದ ವಿದ್ಯುತ್‌ ಉತ್ಪಾದಿಸಲು ನೆಕ್ಸಸ್‌ ನೋವಾ ಕಂಪೆನಿ, ಇಂಡಿಯಂ ಪ್ರಾಜೆಕ್ಟ್‌ ಹಾಗೂ ಜರ್ಮನಿಯ ಎನ್‌ವಿಜಿ ಗ್ರೂಪ್‌ ಕಂಪೆನಿಗಳು ಪ್ರಸ್ತಾವ ಸಲ್ಲಿಸಿದ್ದವು. ಈ ಪೈಕಿ ನೆಕ್ಸಸ್‌ ಕಂಪೆನಿಯ ಪ್ರಸ್ತಾವಕ್ಕೆ ನಗರಾಭಿವೃದ್ಧಿ ಇಲಾಖೆ ಒಪ್ಪಿಗೆ ನೀಡಿದೆ’ ಎಂದು ಬಿಬಿಎಂಪಿಯ ಜಂಟಿ ಆಯುಕ್ತ (ಆರೋಗ್ಯ ಮತ್ತು ಘನತ್ಯಾಜ್ಯ) ಸರ್ಫರಾಜ್‌ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ವಿದ್ಯುತ್‌ ಉತ್ಪಾದನಾ ಘಟಕವನ್ನು ನೆಕ್ಸಸ್‌ ಕಂಪೆನಿಯೇ ನಿರ್ಮಿಸಲಿದೆ. ಇದಕ್ಕೆ ಬಿಬಿಎಂಪಿ ಯಾವುದೇ ಖರ್ಚು ಮಾಡುವುದಿಲ್ಲ. ಘಟಕದಲ್ಲಿ ತಯಾರಾಗುವ ವಿದ್ಯುತ್‌ ಅನ್ನು ಬೆಸ್ಕಾಂ ಖರೀದಿ ಮಾಡಲಿದೆ. ಬೆಸ್ಕಾಂ ಒಂದು ಯೂನಿಟ್‌ಗೆ ₹7.09 ನೀಡಲಿದೆ’ ಎಂದರು.

100 ಟನ್‌ ಕಸದಿಂದ ವಿದ್ಯುತ್ ಉತ್ಪಾದನೆ: ‘ದೊಡ್ಡಬಿದರಕಲ್ಲು ಗ್ರಾಮದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 100 ಟನ್‌ ಕಸದಿಂದ ವಿದ್ಯುತ್‌ ಉತ್ಪಾದಿಸಲು ಇಂಡಿಯಂ ಪ್ರಾಜೆಕ್ಟ್‌ ಕಂಪೆನಿ ಆಸಕ್ತಿ ತೋರಿಸಿದೆ. ₹40 ಕೋಟಿ ವೆಚ್ಚದಲ್ಲಿ ಘಟಕವನ್ನು ಸ್ಥಾಪಿಸಲಿದ್ದು, ಪ್ರತಿದಿನ 2 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲಿದೆ’ ಎಂದರು.

ಕಾರ್ಯವಿಧಾನ ಹೇಗೆ?: ‘ನಗರದಲ್ಲಿ ಪ್ರತಿದಿನ 4,000ದಿಂದ 4,500 ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ 700 ಟನ್‌ ಕಸವನ್ನು ಈ ಎರಡು ಘಟಕಗಳಿಗೆ ಸಾಗಣೆ ಮಾಡಲಾಗುತ್ತದೆ. ಈ ತ್ಯಾಜ್ಯದಿಂದ ಒಣ ಹಾಗೂ ಹಸಿ ಕಸವನ್ನು ವಿಂಗಡಣೆ ಮಾಡಲಾಗುತ್ತದೆ. ಹಸಿ ಕಸದಲ್ಲಿ ಸಾವಯವ ಗೊಬ್ಬರವನ್ನು ತಯಾರಿಸಲಾಗುತ್ತದೆ. ಒಣ ಕಸದಲ್ಲಿ ಮರುಬಳಕೆ ಮಾಡುವ ವಸ್ತುಗಳನ್ನು ಬೇರ್ಪಡಿಸಿ, ಉಳಿದ ತ್ಯಾಜ್ಯವನ್ನು ವಿದ್ಯುತ್‌ ಉತ್ಪಾದನೆಗೆ ಬಳಸಲಾಗುತ್ತದೆ’ ಎಂದು ವಿವರಿಸಿದರು.

‘500 ಟನ್‌ ತ್ಯಾಜ್ಯದಲ್ಲಿ ಹಸಿಕಸ ಹಾಗೂ ಮರುಬಳಕೆಯ ವಸ್ತುಗಳನ್ನು ಬೇರ್ಪಡಿಸಿದಾಗ ವಿದ್ಯುತ್‌ ಉತ್ಪಾದನೆಗೆ ಬೇಕಾಗುವ ಕಸ 150 ಟನ್‌ನಷ್ಟು ಸಿಗಬಹುದು. ದೆಹಲಿಯಲ್ಲಿ ಕಸದಿಂದ ವಿದ್ಯುತ್‌ ಉತ್ಪಾದಿಸುವ ಮೂರು ಘಟಕಗಳಿವೆ. ಮುಂಬೈ, ಪುಣೆಯಲ್ಲೂ ಘಟಕಗಳಿವೆ. ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದು ಹೇಳಿದರು.

‘ನಗರದಲ್ಲಿ ಏಳು ಘನತ್ಯಾಜ್ಯ ಸಂಸ್ಕರಣಾ ಘಟಕಗಳಿವೆ. ನಗರದಲ್ಲಿ ಉತ್ಪತ್ತಿಯಾಗುವ ಎಲ್ಲ ಕಸವನ್ನು ಈ ಘಟಕಗಳಲ್ಲಿ ಸಂಸ್ಕರಣೆ ಮಾಡಲು ಸಾಧ್ಯವಿಲ್ಲ. ನಿತ್ಯ ಸಂಗ್ರಹಗೊಳ್ಳುವ ಕಸದಲ್ಲಿ ಸ್ವಲ್ಪ ಭಾಗವನ್ನು ಭೂಭರ್ತಿ ಘಟಕಗಳಲ್ಲಿ ಡಂಪ್‌ ಮಾಡಲಾಗುತ್ತಿದೆ. ಅಲ್ಲಿಗೆ ಕಸ ಸಾಗಣೆ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ವಿದ್ಯುತ್‌ ಉತ್ಪಾದನೆಗೆ ಗಮನ ಹರಿಸಲಾಗಿದೆ’ ಎಂದು ತಿಳಿಸಿದರು.

ಮಂಡೂರಿನಲ್ಲಿ ಮತ್ತೆ ಪ್ರಯತ್ನ: 

ಮಂಡೂರಿನಲ್ಲಿ ಸುರಿದಿರುವ ಕಸದಿಂದ ವಿದ್ಯುತ್‌ ಉತ್ಪಾದಿಸುವ ಪ್ರಯತ್ನ ಮತ್ತೆ ಆರಂಭವಾಗಿದೆ. ಇಲ್ಲಿನ ಕಸದಿಂದ ವಿದ್ಯುತ್‌ ಉತ್ಪಾದಿಸಲು ಜರ್ಮನಿಯ ಎನ್‌.ವಿ.ಜಿ ಗ್ರೂಪ್‌ ಮುಂದೆ ಬಂದಿದೆ.

‘ಈ ಕಂಪೆನಿಯು ಸ್ಥಳಾಂತರ ಮಾಡಬಹುದಾದ ಘಟಕವನ್ನು ಸ್ಥಾಪಿಸುವುದಾಗಿ ಹೇಳಿದೆ. ಮೊದಲೇ ಸಿದ್ಧಪಡಿಸಿದ ಘಟಕದ ಬಿಡಿಭಾಗಗಳನ್ನು ತಂದು ನಿರ್ದಿಷ್ಟ ಜಾಗದಲ್ಲಿ ಜೋಡಿಸಲಾಗುತ್ತದೆ. ಅಗತ್ಯ ಬಿದ್ದಾಗ ಅದನ್ನು ತೆಗೆದು ಬೇರೆಡೆಗೆ ಸಾಗಿಸಬಹುದು’ ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

‘ಮಂಡೂರಿನಲ್ಲಿ ಬಿಬಿಎಂಪಿಗೆ ಸೇರಿದ ಜಾಗವಿದೆ. ಅದನ್ನು ಈ ಕಂಪೆನಿಗೆ ನೀಡಲು ಉದ್ದೇಶಿಸಲಾಗಿದೆ. ಪ್ರತಿದಿನ 500 ಟನ್‌ ಕಸದಿಂದ ವಿದ್ಯುತ್‌ ತಯಾರಿಸುವುದಾಗಿ ಕಂಪೆನಿಯು ತಿಳಿಸಿದೆ.

ಅಲ್ಲಿರುವ ಎಲ್ಲ ಕಸದಿಂದ ವಿದ್ಯುತ್‌ ತಯಾರಿಸಿದ ಬಳಿಕ ಘಟಕವನ್ನು ಸ್ಥಳಾಂತರ ಮಾಡಲಾಗುತ್ತದೆ’ ಎಂದು ಹೇಳಿದರು.

10 ವರ್ಷಗಳಿಂದ ಯೋಜನೆ ನನೆಗುದಿ: ಮಂಡೂರಿನಲ್ಲಿ ದಿನಕ್ಕೆ 1,000 ಟನ್ ಕಸ ಸಂಸ್ಕರಿಸಿ 8 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಬಿಬಿಎಂಪಿ 2002ರಲ್ಲಿ ಟೆಂಡರ್‌ ಕರೆದಿತ್ತು. ಈ ಯೋಜನೆಗೆ 2007ರಲ್ಲಿ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿತ್ತು.

ಈ ಯೋಜನೆಯ ಅನುಷ್ಠಾನಕ್ಕಾಗಿ ‘ಶ್ರೀನಿವಾಸ ಗಾಯತ್ರಿ ರಿಸೋರ್ಸಸ್‌ ರಿಕವರಿ ಸಂಸ್ಥೆ’ಯ ಜತೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕಾಗಿ ಬಿಬಿಎಂಪಿ ನಿವೇಶನ ಒದಗಿಸಿದ್ದಲ್ಲದೆ, ₹73.34 ಕೋಟಿ ವೆಚ್ಚ ಮಾಡಿತ್ತು. 20 ತಿಂಗಳಲ್ಲಿ ಯೋಜನೆ ಕಾರ್ಯಗತಗೊಳಿಸಬೇಕು ಎಂದು ಸೂಚಿಸಿತ್ತು. ಆದರೆ, ಯೋಜನೆ ಮಾತ್ರ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈ ಪ್ರಕರಣದ ಬಗ್ಗೆ ಎಸಿಬಿ ತನಿಖೆ ನಡೆಸುವಂತೆ ವಿಧಾನ­ಮಂಡಲದ ಸಾರ್ವಜನಿಕ ಉದ್ಯಮಗಳ ಸಮಿತಿಯು 2017ರ ಜೂನ್‌ನಲ್ಲಿ ಶಿಫಾರಸು ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.