ಬೆಂಗಳೂರು: ಕಸದ ಸಮಸ್ಯೆ ನಿರ್ವಹಿಸುವಲ್ಲಿ ಬಿಬಿಎಂಪಿ ಆದಿಯಾಗಿ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಪರದಾಡುತ್ತಿವೆ. ಆದರೆ, ಈ ಸವಾಲನ್ನು ಸಲೀಸಾಗಿ ಪರಿಹರಿಸುವ ಭರವಸೆಯನ್ನು ಆಧುನಿಕ ತಂತ್ರಜ್ಞಾನವುಳ್ಳ ಯಂತ್ರವೊಂದು ಮೂಡಿಸಿದೆ.
ಯಾವುದೇ ಮಿಶ್ರ ತ್ಯಾಜ್ಯವನ್ನು ಒಂದೇ ದಿನದಲ್ಲಿ ಗೊಬ್ಬರವನ್ನಾಗಿ ಮಾರ್ಪಡಿಸುವುದು ಎನ್ವಿರಾನ್‌ಮೆಂಟಲ್ ರೀಸೈಕ್ಲಿಂಗ್ ಸಿಸ್ಟಮ್ (ಇಆರ್‌ಎಸ್) ಯಂತ್ರದ ವೈಶಿಷ್ಠ್ಯ.ಜಪಾನ್ ತಂತ್ರಜ್ಞಾನ ಒಳಗೊಂಡ ಈ ನೂತನ ಯಂತ್ರವನ್ನು ಜೆಇಆರ್‌ಎಸ್ ಎನ್ವಿರಾನ್‌ಮೆಂಟ್ ಟೆಕ್ನಾಲಜೀಸ್ ಕಂಪೆನಿ ಭಾರತಕ್ಕೆ ಪರಿಚಯಿಸಿದೆ.
ಸದ್ಯ ಕೋರಮಂಗಲದ ಫೋರಂ ಮಾಲ್ ಸಮೀಪದ ಕಸ ರಸ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಈ ಯಂತ್ರವನ್ನು ಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ. ಸಚಿವ ರಾಮಲಿಂಗಾ ರೆಡ್ಡಿ, ಬಿಬಿಎಂಪಿ ಕಾರ್ಯನಿರ್ವಹಕ ಎಂಜಿನಿಯರ್ ಶ್ರೀನಿವಾಸ್ ರೆಡ್ಡಿ, ಬಿಬಿಎಂಪಿ ಜಂಟಿ ಆಯುಕ್ತ ಹೇಮಚಂದ್ರ ಹಾಗೂ ಇತರರು ಗುರುವಾರ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆಯನ್ನು ಪರಿಶೀಲಿಸಿ, ಮಾಹಿತಿ ಪಡೆದರು.
ವಿನ್ಯಾಸ, ಸಾಮರ್ಥ್ಯ: ಈ ಯಂತ್ರವು ಸುಮಾರು 21 ಅಡಿ ಉದ್ದ, 6 ಅಡಿ ಅಗಲ ಹಾಗೂ 8 ಅಡಿಯಷ್ಟು ಎತ್ತರವಿದೆ. ಕಂಟ್ರೋಲ್ ಯೂನಿಟ್, ನಾಲ್ಕು ಮೋಟರುಗಳು, ಕಸವನ್ನು ಗೊಬ್ಬರವಾಗಿಸುವ ಭಾಗ, ಸಿದ್ಧ ಗೊಬ್ಬರ ಹೊರ ಬರುವ ಭಾಗ– ಹೀಗೆ ಒಟ್ಟು ನಾಲ್ಕು ಭಾಗಗಳು ಯಂತ್ರದಲ್ಲಿವೆ.
ಒಂದು ಸಲಕ್ಕೆ 400 ಕೆ.ಜಿ ಕಸವನ್ನು ಈ ಯಂತ್ರ ಗೊಬ್ಬರ ಮಾಡಬಲ್ಲದು. ಹೀಗೆ ಹತ್ತು ಬ್ಯಾಚ್‌ಗಳಲ್ಲಿ ದಿನಕ್ಕೆ 4 ಟನ್ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ. ಪ್ರತ್ಯೇಕವಾಗಿ ಬ್ಯಾಚ್‌ಗಳಲ್ಲಿ ಗೊಬ್ಬರ ಮಾಡಿದರೆ, ಒಣಗಿಸಲು ಸಮಯ ಬೇಕಾಗುತ್ತದೆ. ಆದರೆ, ಹಲವು ಬ್ಯಾಚ್‌ಗಳಲ್ಲಿ ತ್ಯಾಜ್ಯವನ್ನು ಹಾಕುತ್ತ ಹೋಗಿ ಕೊನೆಯಲ್ಲಿ ಒಂದೇ ಬಾರಿ ಒಣಗಿಸಿದರೆ ಸಮಯ, ಇಂಧನ ಉಳಿಯುತ್ತದೆ ಎನ್ನುತ್ತದೆ ಕಂಪೆನಿ. 11 ಎಚ್‌ಪಿಯ ಒಂದು, 5 ಎಚ್‌ಪಿ ಎರಡು ಹಾಗೂ 1.75 ಎಚ್‌ಪಿಯ ಒಂದು ಮೋಟಾರು ಇದ್ದು, ನಿತ್ಯ ಸುಮಾರು 210 ಕಿಲೋ ವ್ಯಾಟ್ ವಿದ್ಯುತ್ ಬೇಕಾಗುತ್ತದೆ.
ಕಾರ್ಯ ವಿಧಾನ: ‘ಯಾವುದೇ ಮಿಶ್ರ ತ್ಯಾಜ್ಯವನ್ನು ಇದು ಗೊಬ್ಬರ ಮಾಡುತ್ತದೆ. ಈ ಯಂತ್ರದಲ್ಲಿ ಶಿಮೋಸ್ 1, 2, ಹಾಗೂ 3 ಎಂಬ ಸೂಕ್ಷ್ಮಾಣು ಜೀವಿಗಳಿವೆ. ಅದರಲ್ಲಿ ಒಂದು ಫಂಗಸ್. ಮತ್ತೆರಡು ಬ್ಯಾಕ್ಟೀರಿಯಾ. ಇದರಲ್ಲಿರುವ ಜೈವಿಕ ತಂತ್ರಜ್ಞಾನವು ಕಸವನ್ನು ಗೊಬ್ಬರವನ್ನಾಗಿಸುತ್ತದೆ’ ಎಂದು ಹೇಳಿದರು ಜೆಇಆರ್‌ಎಸ್ ಕಂಪೆನಿಯ ತಾಂತ್ರಿಕ ಮುಖ್ಯಸ್ಥ ಬಿ.ಶಿವಲಿಂಗಯ್ಯ.
‘ಹಾಕುವ ಕಸವನ್ನು ಯಂತ್ರದ ಒಳಗಿರುವ ಸುರುಳಿಯಾಕಾರದ ಆವರ್ತಕ ಸೂಕ್ಷ್ಮಾಣು ಜೀವಿಗಳೊಂದಿಗೆ ಮಿಶ್ರ ಮಾಡುತ್ತದೆ. ನಿರ್ವಾತ ಸ್ಥಿತಿಯಲ್ಲಿ, 60 ಸೆಂಟಿಗ್ರೇಡ್ ತಾಪಮಾನದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಇದರಿಂದ ಕಸವು ತ್ವರಿತವಾಗಿ ಗೊಬ್ಬರ ಆಗುತ್ತದೆ’ ಎಂದು ಅವರು ವಿವರಿಸಿದರು.
ನಿಗದಿತ ತಾಪಮಾನ ಕಾಯ್ದುಕೊಳ್ಳಲು ಬಾಯ್ಲರ್ ಹಾಗೂ ಕೂಲರ್ ನೆರವು ಪಡೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ತ್ಯಾಜ್ಯದಲ್ಲಿನ ದ್ರವವು ಆವಿರೂಪದಲ್ಲಿ ವಾತಾವರಣ ಸೇರುತ್ತದೆ. ಇದಂದ ದುರ್ವಾಸನೆ ಇಲ್ಲ ಎಂದು ಹೇಳಿದರು.
ಕೊಳೆಯುವ ವಸ್ತುಗಳಿಗೆ ಸೂಕ್ತ: ಮಿಶ್ರ ತ್ಯಾಜ್ಯವನ್ನು ಗೊಬ್ಬರ ಮಾಡುವುದು ಯಂತ್ರಕ್ಕೆ ಕಷ್ಟವೇನಲ್ಲ. ಆದರೆ, ಕೊಳೆಯದ ಪದಾರ್ಥಗಳು ಅದರಲ್ಲಿ ಇದ್ದರೆ, ಗೊಬ್ಬರವಾಗಿ ಹೊರ ಬಂದ ನಂತರ ಜರಡಿ ಹಿಡಿಯಬೇಕಾಗುತ್ತದೆ.
ಅಂತೆಯೇ, ತ್ಯಾಜ್ಯದ ಶೇಕಡ 30–35ರಷ್ಟು ಗೊಬ್ಬರ ಸಿಗುತ್ತದೆ. ತೇವಾಂಶ ಕಡಿಮೆ ಇದ್ದಷ್ಟು ಹೆಚ್ಚು ಗೊಬ್ಬರದ ಪ್ರಮಾಣ ಹೆಚ್ಚಾಗುತ್ತದೆ. ಆದರೆ, ಮಿಶ್ರ ತ್ಯಾಜ್ಯ ಹಾಕಿದರೆ ಸಿಗುವ ಗೊಬ್ಬರದ ಪ್ರಮಾಣ ಕಡಿಮೆ ಎಂದು ಮಾಹಿತಿ ನೀಡಿದರು.
ಬಹುಪಯೋಗಿ ಯಂತ್ರ: ಕೇವಲ ಸಾವಯವ ತ್ಯಾಜ್ಯ ಮಾತ್ರವಲ್ಲದೇ, ಕಸಾಯಿ ಖಾನೆ ತ್ಯಾಜ್ಯ, ಮೀನು ತ್ಯಾಜ್ಯ ಹೀಗೆ ಯಾವುದೇ ಬಗೆಯ ತ್ಯಾಜ್ಯವನ್ನು ಗೊಬ್ಬರ ಮಾಡುವ ಸಾಮರ್ಥ್ಯ ಯಂತ್ರಕ್ಕಿದೆ. ‘ದುರ್ವಾಸನೆಗೆ ಕಾರಣವಾಗುವ ಕಸಾಯಿ ಖಾನೆಯ ಉಳಿಕೆ, ಕೋಳಿ ತ್ಯಾಜ್ಯ, ಮೀನು ತ್ಯಾಜ್ಯ ಮಾತ್ರವಲ್ಲ, ಸತ್ತ ಪ್ರಾಣಿಗಳ ದೇಹವೂ ಯಂತ್ರದಲ್ಲಿ ಕೆಲವೇ ಗಂಟೆಗಳಲ್ಲಿ ಗುಣ ಮಟ್ಟದ ಗೊಬ್ಬರವಾಗಿ ಹೊರಬರುತ್ತದೆ’ ಎಂದು ಕಂಪೆನಿಯ ಕಾರ್ಯನಿರ್ವಾಹಕ ಅಧಿಕಾರಿ ಥನೇಶ್ ಜನಾರ್ದನನ್ ಹೇಳಿದರು.
‘ವಾರ್ಡ್‌ವಾರು ಬಳಕೆ, ಕೈಗಾರಿಕಾ ಬಳಕೆ ಸೇರಿದಂತೆ ನಿರ್ದಿಷ್ಟ ಬಳಕೆಗೆ ವಿಶೇಷ ಯಂತ್ರಗಳನ್ನು ತಯಾರಿಸಬಹುದು. ನಿತ್ಯ 50 ರಿಂದ 100 ಕೆ.ಜಿ ಕಸವನ್ನು ಗೊಬ್ಬರ ಮಾಡುವ ಸಾಮರ್ಥ್ಯದ ಚಿಕ್ಕ ಯಂತ್ರಗಳನ್ನು ಅಭಿವೃದ್ಧಿ ಪಡಿಸಬಹುದು. ಜತೆಗೆ ಮೊಬೈಲ್ ಯಂತ್ರ ಮಾಡಬಹುದು’ ಎಂದು ತಿಳಿಸಿದರು.
ವಿದೇಶಗಳಲ್ಲಿ ಬಳಕೆ: ಭಾರತದ ಮಟ್ಟಿಗೆ ಬಹುತೇಕ ಹೊಸದು ಎನಿಸಿರುವ ಈ ತಂತ್ರಜ್ಞಾನವುಳ್ಳ ಯಂತ್ರಗಳ ಬಳಕೆ ವಿದೇಶದಲ್ಲಿ ವರ್ಷಗಳಿಂದಲೂ ಇದೆ. ಜಪಾನ್, ದಕ್ಷಿಣ ಕೊರಿಯಾ, ಚೀನಾ, ವಿಯೆಟ್ನಾಂ, ಮಲೇಷ್ಯಾ, ಇಂಡೊನೇಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಬಳಕೆಯಲ್ಲಿದೆ. 2012ರಲ್ಲಿ ನವದೆಹಲಿಯಲ್ಲಿ ಈ ಯಂತ್ರದ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು.
ಸೂಕ್ಷ್ಮಾಣು ಜೀವಿಗಳೇ ಗುಟ್ಟು?
ಈ ಯಂತ್ರದಲ್ಲಿ ಕಸವು ಗೊಬ್ಬರವಾಗಲು ಸೂಕ್ಷ್ಮಾಣು ಜೀವಿಗಳ ಪಾತ್ರ ಅಪಾರ. ಇವನ್ನು ಒಮ್ಮೆ ಯಂತ್ರಕ್ಕೆ ಹಾಕಿದರೆ, ಸಾಮಾನ್ಯವಾಗಿ ಎರಡ್ಮೂರು ವರ್ಷಗಳ ಕಾಲ ಬರುತ್ತವೆ. ಆದರೆ, ಯಂತ್ರವನ್ನು ಸಂಪೂರ್ಣ ನೀರಿನಿಂದ ಸ್ವಚ್ಛಗೊಳಿಸಿದರೆ, ಮತ್ತೆ ಒಂದು ಹಿಡಿಯಷ್ಟು ಇಲ್ಲವೆ 250 ಗ್ರಾಂನಷ್ಟು ಸೂಕ್ಷ್ಮಾಣುಗಳು ಬೇಕಾಗುತ್ತವೆ.
‘ಈ ಸೂಕ್ಷ್ಮಾಣುಗಳು ಸ್ಥಳೀಯವಾಗಿಯೇ ಸಿಕ್ಕರೂ, ಅವುಗಳಿಗೆ ಪೇಟೆಂಟ್ ಇದೆ. ಆದ್ದರಿಂದ ನಿರ್ದಿಷ್ಟ ಕಂಪೆನಿಯ ಮೂಲಕವೇ ಹಾಕಿಕೊಳ್ಳಬೇಕಾಗುತ್ತದೆ ಎಂದರು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಈ.ಶಿವಶಂಕರ್.
ಶಿನಿಚಿ ಶಿಮೋಶಿ ಕೊಡುಗೆ: ಈ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದು ಜಪಾನಿನ ಶಿನಿಚಿ ಶಿಮೋಶಿ. ವಿಶಿಷ್ಟವಾದ ಸೂಕ್ಷ್ಮಾಣು ಜೀವಿಗಳನ್ನು ಅಭಿವೃದ್ಧಿಪಡಿಸಿದ್ದು ಕೂಡ ಅವರೇ. ಪೇಟೆಂಟ್ ಅವರ ಹೆಸರಲ್ಲಿದೆ.
3 ಕೋಟಿ ರೂಪಾಯಿ: ಇದು ಮಾದರಿ ಯಂತ್ರವಷ್ಟೇ. ನಿತ್ಯ ನಾಲ್ಕು ಟನ್ ಕಸವನ್ನು ಗೊಬ್ಬರವಾಗಿಸುವ ಸಾಮರ್ಥ್ಯವಿದೆ. ಇದಕ್ಕೆ ಸುಮಾರು 3 ಕೋಟಿ ರೂಪಾಯಿ ವೆಚ್ಚವಾಗಿದೆಯಂತೆ.
ಈ ಯಂತ್ರಕ್ಕೆ ಕಸ ಹಾಕುವುದು ಸೇರಿದಂತೆ ಹಲವು ಕೆಲಸಗಳಿಗೆ ಮಾನವ ಶ್ರಮ ಬೇಡುತ್ತದೆ. ಆದರೆ, ಕಸ ಹಾಕುವುದರಿಂದ ಹಿಡಿದು ಗೊಬ್ಬರ ಪ್ಯಾಕ್ ಆಗುವತನಕ ಎಲ್ಲವೂ ಯಂತ್ರದ ಮೂಲಕ ನಿರ್ವಹಿಸುವ ಸೌಲಭ್ಯವುಳ್ಳ, 50 ಟನ್ ಸಾಮರ್ಥ್ಯದ ಯಂತ್ರಕ್ಕೆ ಸುಮಾರು ₹ 17 ಕೋಟಿಯಷ್ಟಾಗುತ್ತದೆ ಎನ್ನುತ್ತದೆ ಕಂಪೆನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.