ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಮೂರನೇ ಹಂಗಾಮಿ ಕುಲಪತಿ ಅವಧಿಯೂ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಇನ್ನೂ ಕಾಯಂ ಕುಲಪತಿ ನೇಮಕ ಕನಸಾಗಿಯೇ ಉಳಿದಿದೆ.
3.5 ಲಕ್ಷ ವಿದ್ಯಾರ್ಥಿಗಳು, 700 ಸಂಯೋಜಿತ ಕಾಲೇಜುಗಳು ಇರುವ ಬೆಂಗಳೂರು ವಿ.ವಿ.ಯಲ್ಲಿ ಪ್ರೊ.ಬಿ. ತಿಮ್ಮೇಗೌಡ ಅವರ ಮುಗಿದ ನಂತರದಿಂದ ಹಂಗಾಮಿ ಕುಲಪತಿಗಳ ಸರಣಿ ಪ್ರಾರಂಭವಾಗಿದೆ.
‘ಡಿಸೆಂಬರ್ 13ಕ್ಕೆ ಎಚ್.ಎನ್. ರಮೇಶ್ ಅವರ ಅವಧಿ ಮುಗಿಯುತ್ತದೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರೇ ಈ ಬಾರಿಯೂ ಹಂಗಾಮಿ ಕುಲಪತಿ ನೇಮಿಸಲಾಗುವುದು ಎಂದಿದ್ದಾರೆ. ಹಾಗಾಗಿ ಇನ್ನೂ ಕೆಲ ತಿಂಗಳು ವಿ.ವಿ.ಗೆ ಕಾಯಂ ಕುಲಪತಿ ನೇಮಕ ಆಗುವುದಿಲ್ಲ. ಇದು ಹೀಗೆ ಮುಂದುವರಿಯುತ್ತದೆ’ ಎಂದು ವಿ.ವಿ. ಪ್ರಾಧ್ಯಾಪಕರೊಬ್ಬರು ತಿಳಿಸಿದರು.
ಪ್ರೊ.ಬಿ. ತಿಮ್ಮೇಗೌಡ ಅವರ ಅವಧಿ ಫೆಬ್ರುವರಿ 6ಕ್ಕೆ ಮುಗಿದಿತ್ತು. ಅಲ್ಲಿಂದ ಇಲ್ಲಿಯವರೆಗೆ ಮೂರು ಹಂಗಾಮಿ ಕುಲಪತಿಗಳ ಬದಲಾವಣೆ ಆಗಿದೆ. ತಿಮ್ಮೆಗೌಡರ ನಂತರ ಒಂದು ತಿಂಗಳು ಸಮೂಹ ಸಂವಹನ ವಿಭಾಗದ ಡಾ. ಜಗದೀಶ್ ಪ್ರಕಾಶ್ ಅವರು ಹಂಗಾಮಿ ಕುಲಪತಿಯಾಗಿದ್ದರು.
ನಂತರ ವಾಣಿಜ್ಯ ವಿಭಾಗದ ಡೀನ್ ಆಗಿದ್ದ ಡಾ.ಎಂ. ಮುನಿರಾಜು ಅವರು 4 ತಿಂಗಳು ಹಂಗಾಮಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಮೂರನೇ ಬಾರಿಗೆ ಹಂಗಾಮಿ ಕುಲಪತಿಯಾಗಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಡೀನ್ ಪ್ರೊ. ಎಚ್.ಎನ್. ರಮೇಶ್ ನೇಮಕಗೊಂಡಿದ್ದರು.
‘ಹಂಗಾಮಿ ಕುಲಪತಿ ಹಾಗೂ ಕಾಯಂ ಕುಲಪತಿ ವಿಷಯಲ್ಲಿ ಅಧಿಕಾರವಧಿ ಕಡಿಮೆ ಇರುತ್ತದೆ ಎನ್ನುವುದು ಬಿಟ್ಟರೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಹಂಗಾಮಿ ಕುಲಪತಿಯಾಗಿ ಹೆಚ್ಚು ಕೆಲಸ ನಿರ್ವಹಿಸಬೇಕಾಗುತ್ತದೆ. ಅದನ್ನು ನಾನು ಸಮರ್ಪಕವಾಗಿಯೇ ಮಾಡಿದ್ದೇನೆ’ ಎಂದು ಹಂಗಾಮಿ ಕುಲಪತಿ ಎಚ್.ಎನ್. ರಮೇಶ್ ತಿಳಿಸಿದರು.
‘ಜುಲೈ 29ಕ್ಕೆ ನಾನು ಅಧಿಕಾರ ವಹಿಸಿಕೊಂಡೆ, ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಕೆಲಸಕ್ಕೂ ತೊಡಕಾಗದಂತೆ ನೋಡಿಕೊಂಡಿದ್ದೇನೆ. ಡೀನ್ ಆಗಿಯೂ ನನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದ್ದೇನೆ. ಎಲ್ಲಾ ತರಗತಿಗಳನ್ನು ತೆಗೆದುಕೊಂಡಿದ್ದೇನೆ’ ಎಂದು ಹೇಳಿದರು.
ಕುಲಪತಿ ನೇಮಕಾತಿ ಬಿಕ್ಕಟ್ಟು: ಉನ್ನತ ಶಿಕ್ಷಣ ಇಲಾಖೆ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷದಿಂದಾಗಿ ಕಾಯಂ ಕುಲಪತಿ ನೇಮಕ ಪ್ರಕ್ರಿಯೆ ನನೆಗುದ್ದಿಗೆ ಬಿದ್ದಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ಡಾ. ಸಂಗಮೇಶ ಎ. ಪಾಟೀಲ ಅವರ ಹೆಸರನ್ನು ರಾಜ್ಯಪಾಲ ವಜುಭಾಯ್ ವಾಲಾ ಅವರು ತಿರಸ್ಕರಿಸಿದ್ದರು. ಅಲ್ಲದೆ, ಈ ಹುದ್ದೆಗೆ ಡಾ. ವೇಣುಗೋಪಾಲ್ ಅವರನ್ನು ನೇಮಕ ಮಾಡುವಂತೆ ಸೂಚಿಸಿದ್ದಾರೆ.
ರಾಜ್ಯಪಾಲರು ತಿರಸ್ಕರಿಸಿದ್ದ ಶಿಫಾರಸ್ಸು ಪಟ್ಟಿಯನ್ನೇ ಮತ್ತೊಮ್ಮೆ ಉನ್ನತ ಶಿಕ್ಷಣ ಇಲಾಖೆ ಕಳುಹಿಸಿತ್ತು. ಈ ಬಗ್ಗೆ ಇಲಾಖೆಗೆ ಪತ್ರ ಬರೆದಿದ್ದ ರಾಜ್ಯಪಾಲರು, ‘ಒಂದು ಬಾರಿ ಕಳುಹಿಸಲಾದ ಪಟ್ಟಿಯನ್ನು ವಾಪಸ್ ಕಳುಹಿಸಿದರೆ, ಬೇರೆ ಶೋಧನಾ ಸಮಿತಿ ರಚಿಸಿ ಹೊಸ ಹೆಸರುಗಳನ್ನು ನೀಡಬೇಕು ಎಂದು ಕಾನೂನಿನಲ್ಲಿಯೇ ಇದೆ. ಆದರೆ, ಉನ್ನತ ಶಿಕ್ಷಣ ಇಲಾಖೆಯಿಂದ ಹಳೆಯ ಹೆಸರುಗಳನ್ನೇ ಮತ್ತೆ ಕಳುಹಿಸಲಾಗಿದೆ. ನೀವು ಮೊದಲು ಕಾನೂನು ತಿಳಿದುಕೊಳ್ಳಿ’ ಎಂದು ಹೇಳಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹೆಸರು ಶಿಫಾರಸು ಮಾಡಲು ಡಾ.ಎಸ್.ಆರ್.ನಿರಂಜನ ಅಧ್ಯಕ್ಷತೆಯಲ್ಲಿ ಶೋಧನಾ ಸಮಿತಿ ರಚಿಸಲಾಗಿತ್ತು. ಪ್ರೊ.ಆರ್.ಸಿ.ಕುಹಾದ್, ಡಾ.ಎಸ್.ಇಂದುಮತಿ ಹಾಗೂ ಡಾ. ರಮಾನಂದ ಶೆಟ್ಟಿ ಸಮಿತಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.