ಬೆಂಗಳೂರು: ಅಲ್ಲಲ್ಲಿ ಇಣುಕುತ್ತಿದ್ದ ಸೂರ್ಯನ ಕಿರಣಗಳು, ಹಿತವಾದ ಚಳಿಯಿಂದ ರೂಪುಗೊಂಡಿದ್ದ ಆಹ್ಲಾದಕರ ವಾತಾವರಣದ ನಡುವೆ ಭಾನುವಾರ ನಡೆದ ‘ಕಾಲದೊಂದಿಗೆ ಕವಿತೆ’ ಗೋಷ್ಠಿ ಸಹೃದಯರ ಮನಗೆದ್ದಿತು.
‘ನಾವು ಹುಡುಗಿಯರೇ ಹೀಗೆ’ ಎಂದು ನಲ್ವತ್ತು ವರ್ಷಗಳ ಹಿಂದೆ ಕನ್ನಡ ಕಾವ್ಯ ಲೋಕ ಪ್ರವೇಶಿಸಿದ್ದ ಪ್ರತಿಭಾ ನಂದ ಕುಮಾರ್ ಅವರು ‘ಮುದುಕಿಯರಿಗಿದು ಕಾಲವಲ್ಲ...’ ಎಂಬ ಕವಿತೆ ವಾಚಿಸುವ ಮೂಲಕ ಗೋಷ್ಠಿಗೆ ಚಾಲನೆ ನೀಡಿದರು.
ಲೇಖಕ ವಿವೇಕ ಶಾನಭಾಗ ಅವರು ಪೇಜಾವರ ಸದಾಶಿವರಾಯರಿಂದ ಹಿಡಿದು ಕವಿ ಸಿದ್ದಲಿಂಗಯ್ಯ ಅವರವರೆಗೆ ವಿವಿಧ ಕವಿಗಳ ಬಗ್ಗೆ ಪುಟ್ಟ ಟಿಪ್ಪಣಿಗಳನ್ನು ನೀಡುತ್ತಾ ನೆರೆದವರಿಗೆ ಕನ್ನಡ ಕವಿ–ಕಾವ್ಯ ಲೋಕದ ಪರಿಚಯ ಮಾಡಿಕೊಟ್ಟರು.
ಕನ್ನಡದ ಅನೇಕ ಲೇಖಕ–ಕವಿಗಳು ಪ್ರತಿಭಾ ಅವರ ಬರಹಗಳಿಂದ ಪ್ರಭಾವಿತರಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಕಾವ್ಯ ಲೋಕಕ್ಕೆ ಚಂದ್ರಶೇಖರ ಕಂಬಾರರಿಂದ ಜಾನಪದ ಸಂಗೀತದ ಸ್ಪರ್ಶವಾಯಿತು. ಕೆ.ವಿ. ತಿರುಮಲೇಶ್, ಗೋಪಾಲಕೃಷ್ಣ ಅಡಿಗರಿಂದ ಕನ್ನಡ ಕಾವ್ಯಲೋಕ ಹೊಸ ತಿರುವು ಪಡೆಯಿತು ಎಂದರು.
ಗೋಷ್ಠಿಯ ಕೊನೆಯಲ್ಲಿ ಪ್ರತಿಭಾ ನಂದಕುಮಾರ್ ಅವರು ಓದಿದ ‘ಅಡುಗೆ ಮಾಡುತ್ತಿದ್ದೇನೆ’ ಕವಿತೆ ಪ್ರೇಕ್ಷಕರು ನಗೆಗಡಲಿನಲ್ಲಿ ತೇಲುವಂತೆ ಮಾಡಿತು.
‘ಲ್ಯಾಂಬ್ರೆಟಾ ಸ್ಕೂಟರ್’ ಕವಿತೆ ಹುಟ್ಟಿದ ಬಗೆ!: ನಳಿನಿ ದೇಶಪಾಂಡೆ ಹೆಸರಿನಲ್ಲಿ ಬೇರೊಬ್ಬರು ‘ಲ್ಯಾಬ್ರೆಂಟಾ ಸ್ಕೂಟರ್’ ಎನ್ನುವ ಕವಿತೆ ಬರೆದ ಬಗೆಯನ್ನು ಕವಯತ್ರಿ ಪ್ರತಿಭಾ ನಂದಕುಮಾರ್ ಗೋಷ್ಠಿಯಲ್ಲಿ ನೆನಪಿಸಿಕೊಂಡರು.
70ರ ದಶಕದಲ್ಲಿ ಕನ್ನಡ ಕಾವ್ಯಲೋಕದ ಪ್ರಾತಿನಿಧಿಕ ಸಂಕಲನವೊಂದನ್ನು ಹೊರತರಬೇಕೆಂದು ಪಿ. ಲಂಕೇಶ್ ಬಯಸಿದ್ದರು. ಅಂತೆಯೇ ಅವರು ‘ಅಕ್ಷರ ಹೊಸ ಕಾವ್ಯ’ ಎಂಬ ಸಂಕಲನವನ್ನೂ ತಂದರು.
‘ಆ ಕಾಲದಲ್ಲಿ ಮಹಿಳೆಯರು ಅಷ್ಟಾಗಿ ಕವಿತೆ ಬರೆಯುತ್ತಿರಲಿಲ್ಲ. ಈ ಕೊರತೆ ನೀಗಿಸಬೇಕೆಂದು ಪೂರ್ಣಚಂದ್ರ ತೇಜಸ್ವಿಯೋ ಅಥವಾ ಸಮತೀಂದ್ರ ನಾಡಿಗರೋ ಯಾರು ಎಂದು ಸರಿಯಾಗಿ ನೆನಪಿಲ್ಲ, ನಳಿನಿ ದೇಶಪಾಂಡೆ ಎನ್ನುವ ಹೆಸರಿನಲ್ಲಿ ‘ಲ್ಯಾಂಬ್ರೆಟಾ ವೆಸ್ಪಾ ಸ್ಕೂಟರ್’ ಎನ್ನುವ ಕ್ರಾಂತಿಕಾರಿ ಕವಿತೆಯೊಂದನ್ನು ಬರೆದರು. ಈ ಕವಿತೆ ಕನ್ನಡ ಕಾವ್ಯ ಲೋಕದಲ್ಲಿ ಸಂಚಲನ ಸೃಷ್ಟಿಸಿತ್ತು’ ಎಂದು ಪ್ರತಿಭಾ ತಿಳಿಸಿದರು.
‘ಈಗ ಹಿಂದೂ ಧರ್ಮ ಎಂದು ಮಾತನಾಡುವವರಿಗೆ ಈ ಕವಿತೆ ಸೂಕ್ತವಾದ ಉತ್ತರ ನೀಡುತ್ತದೆ’ ಎಂದ ಪ್ರತಿಭಾ, ಲ್ಯಾಂಬ್ರೆಟಾ ಸ್ಕೂಟರ್ ಕವಿತೆಯನ್ನು ಓದಿದಾಗ ಪ್ರೇಕ್ಷಕರು ಚಪ್ಪಾಳೆಯ ಮಳೆ ಸುರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.