ADVERTISEMENT

ಕಿತ್ತಾಟಕ್ಕೆ ದಾಳವಾದ ವಿದ್ಯಾರ್ಥಿನಿಯರು

ಪ್ರಾಧ್ಯಾಪಕರ ನಿಯೋಜನೆ ಖಂಡಿಸಿ ಮಹಾರಾಣಿ ಕಾಲೇಜಿನಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2016, 20:05 IST
Last Updated 28 ಮಾರ್ಚ್ 2016, 20:05 IST
ಕಿತ್ತಾಟಕ್ಕೆ ದಾಳವಾದ ವಿದ್ಯಾರ್ಥಿನಿಯರು
ಕಿತ್ತಾಟಕ್ಕೆ ದಾಳವಾದ ವಿದ್ಯಾರ್ಥಿನಿಯರು   

ಬೆಂಗಳೂರು: ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರನ್ನು ಬೇರೆಡೆಗೆ ನಿಯೋಜಿಸಿರುವುದನ್ನು ಖಂಡಿಸಿ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರು ನಡೆಸಿದ ಪ್ರತಿಭಟನೆಗೆ ಪ್ರಾಂಶುಪಾಲರು ಹಾಗೂ ಕೆಲ ಪ್ರಾಧ್ಯಾಪಕರ ಕಿತ್ತಾಟ ಹಾಗೂ ಅವರು ನೀಡಿದ ಪ್ರಚೋದನೆಯೇ ಕಾರಣ ಎನ್ನಲಾಗಿದೆ.

‘ಪ್ರಾಂಶುಪಾಲರಾದ ಡಾ.ಆರ್‌. ಕೋಮಲ ಅವರ ಪರ ಹಾಗೂ ಅವರಿಗೆ ವಿರುದ್ಧವಾದ ಕೆಲ ಪ್ರಾಧ್ಯಾಪಕರ ಗುಂಪು ಇತ್ತು. ಪ್ರತಿ ವಿಷಯಕ್ಕೂ ಕಿತ್ತಾಡುತ್ತಿದ್ದ ಈ ಗುಂಪು ಪರಸ್ಪರ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದವು’ ಎಂದು ಹಿರಿಯ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಇದೇ ಸಮಯದಲ್ಲಿ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಾರಾಯಣ ಸ್ವಾಮಿ ಹಾಗೂ ಕಲಾ ವಿಭಾಗದ ಡಾ. ಮಧುಮತಿ ಅವರನ್ನು ಕಾಲೇಜು ಶಿಕ್ಷಣ ಇಲಾಖೆ ಬೇರೆಡೆಗೆ ನಿಯೋಜಿತು. ಇಂಥ ಅವಕಾಶಕ್ಕಾಗಿ ಕಾಯುತ್ತಿದ್ದ ಆ ಗುಂಪು, ವಿದ್ಯಾರ್ಥಿನಿಯರ ಮೂಲಕ ಕೋಮಲ ಅವರ ವಿರುದ್ಧ ಕಾರ್ಯಾಚರಣೆ ನಡೆಸಿತು’ ಎಂದು ಅವರು ಹೇಳಿದರು.

ನಿಯೋಜನೆ ಹಿಂದೆ ರಾಜಕೀಯ:  ಅವರು ನೀಡಿದ ವಿವರಣೆಯ ಪ್ರಕಾರ, ‘6 ತಿಂಗಳ ಹಿಂದೆ ಕಾಲೇಜಿನಲ್ಲಿ ರವಿಕುಮಾರ್ ಪ್ರಾಂಶುಪಾಲರಾಗಿದ್ದರು. ಆಗ ನಾರಾಯಣಸ್ವಾಮಿ ಕಾಲೇಜಿನ ವಿದ್ಯಾರ್ಥಿ ನಿಲಯದ ಕ್ಷೇಮಾಭಿವೃದ್ಧಿ ಸಮಿತಿಯಲ್ಲಿದ್ದರು. ತಮ್ಮ ಅವಧಿಯಲ್ಲಿ ಕೆಲ ಸುಧಾರಣೆ ತಂದಿದ್ದರು’.

‘ಬಳಿಕ ಪ್ರಾಂಶುಪಾಲರಾಗಿ ಬಂದ ಕೋಮಲ ಅವರು ನಾರಾಯಣ ಸ್ವಾಮಿ ಅವರನ್ನು ಆ ಸ್ಥಾನದಿಂದ ಕಿತ್ತೊಗೆದರು. ಕಾಲೇಜಿನ ವಿವಿಧ ಸಮಿತಿಗಳಿಗೆ ಪ್ರಾಧ್ಯಾಪಕರನ್ನು ನೇಮಕ ಮಾಡುವಾಗಲೂ ನಾರಾಯಣ ಸ್ವಾಮಿ ಮತ್ತು ಮಧುಮತಿ ಅವರನ್ನು ಪ್ರಾಂಶುಪಾಲರು ಕಡೆಗಣಿಸಿದ್ದರು’.

‘ಅಲ್ಲದೆ, ಕಾಲೇಜಿನಲ್ಲಿರುವ ಸ್ಥಳೀಯ ಅಧ್ಯಾಪಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಾರಾಯಣ ಸ್ವಾಮಿ ಅವರನ್ನು ಸೋಲಿಸಲು ಕೋಮಲ ಶತಾಯಗತಾಯ ಪ್ರಯತ್ನಿಸಿದರು’. ‘ಆದರೆ, ನಾರಾಯಣ ಸ್ವಾಮಿ ಗೆದ್ದು ಸಂಘದ ಕಾರ್ಯದರ್ಶಿಯಾದರು. ಬಳಿಕ ಪ್ರಾಂಶುಪಾಲರ ಪ್ರತಿ ಚಟುವಟಿಕೆಯನ್ನು ಪ್ರಶ್ನಿಸತೊಡಗಿದರು. ಅವರಿಗೆ ಪ್ರಾಂಶುಪಾಲರ ವಿರೋಧಿ ಬಣದ ಬೆಂಬಲ ಸಿಕ್ಕಿತು’.

‘ಈ ಮಧ್ಯೆ ಕಿರು ಪರೀಕ್ಷೆ ನಡೆಸುವ ಸಂಬಂಧ ಕೋಮಲ ಅವರು ಪ್ರಾಧ್ಯಾಪಕರ ಸಭೆ ಕರೆದರು. ಇಲ್ಲಿ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪ್ರತಿ ಸಭೆಯಲ್ಲೂ ಹೀಗೆ ಆಗುತ್ತಿತ್ತು’. ‘ಕಡೆಗೆ ಕೋಮಲ ಅವರು ರಾಜಕೀಯ ಪ್ರಭಾವ ಬಳಸಿ ನಾರಾಯಣ ಸ್ವಾಮಿ ಹಾಗೂ ಅವರ ಪರ ಗುರುತಿಸಿಕೊಂಡಿದ್ದ ಮಧುಮತಿ ಅವರನ್ನು ಬೇರೆ ಕಾಲೇಜುಗಳಿಗೆ ನಿಯೋಜನೆ ಮಾಡಿಸಿದರು’.

‘ಅನುಚಿತ ವರ್ತನೆ ಆರೋಪ ಹೊರಿಸಿ ನಾರಾಯಣ ಸ್ವಾಮಿ ಅವರ ವಿರುದ್ಧ ಪ್ರಾಧ್ಯಾಪಕಿ ಪುಷ್ಪಲತಾ ಎಂಬುವವರ ದೂರು ಹಾಗೂ ಕೆಲ ವಿದ್ಯಾರ್ಥಿಗಳು ನೀಡಿದ್ದ ದೂರನ್ನು ಅವರು ಬಳಸಿಕೊಂಡರು’ ಎಂದು ವಿವರಿಸಿದರು. ಪ್ರತಿಭಟನೆ ಹಿಂದೆ ಪ್ರಚೋದನೆ: ‘ಪ್ರಾಧ್ಯಾಪಕರನ್ನು ಇಲಾಖೆ ಬೇರೆಡೆಗೆ ನಿಯೋಜಿಸಿ ಆದೇಶ ಹೊರಡಿಸಿದ್ದು ಮಾರ್ಚ್ 9ರಂದು.

ಆದರೆ, ವಿದ್ಯಾರ್ಥಿನಿಯರು ಪ್ರತಿಭಟನೆ ಆರಂಭಿಸಿದ್ದು 18ಕ್ಕೆ. ‘ನಾರಾಯಣ ಸ್ವಾಮಿ ಅವರು ತಮ್ಮ ಎಬಿವಿಪಿ ಸಂಪರ್ಕವನ್ನು ಬಳಸಿಕೊಂಡು,   ವಾಣಿಜ್ಯ ವಿಭಾಗದ ಕೆಲ ವಿದ್ಯಾರ್ಥಿನಿಯರ ಬ್ರೈನ್ ವಾಶ್ ಮಾಡಿ ಪ್ರಾಂಶುಪಾಲರ ವಿರುದ್ಧ ಕಾಲೇಜು ಎದುರು ಪ್ರತಿಭಟನೆ ನಡೆಸುವಂತೆ ಪ್ರಚೋದಿಸಿದರು’. ‘ಮೊದಲ ದಿನದ ಪ್ರತಿಭಟನೆ ವೇಳೆ ಪ್ರಾಂಶುಪಾಲರ ಜತೆ ಮಾತನಾಡಿದ ವಿದ್ಯಾರ್ಥಿನಿಯರು, ಇಲಾಖೆಯ ಜಂಟಿ ನಿರ್ದೇಶಕರಿಗೆ ದೂರು ಕೊಟ್ಟು ಪ್ರತಿಭಟನೆ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದರು’.

‘ಆದರೆ, ಪ್ರಾಂಶುಪಾಲರ ವಿರುದ್ಧ ಇದ್ದ ಪ್ರಾಧ್ಯಾಪಕರ ಮತ್ತೊಂದು ಗುಂಪು ಇದೇ ವಿಷಯವನ್ನು ಇಟ್ಟುಕೊಂಡು ಕೋಮಲ ಅವರನ್ನು ಕಾಲೇಜಿನಿಂದ ಎತ್ತಂಗಡಿ ಮಾಡಲು ತಂತ್ರ ರೂಪಿಸಿತು’. ‘ಕರ್ನಾಟಕ ಸರ್ಕಾರಿ ಕಾಲೇಜು ಪ್ರಾಧ್ಯಾಪಕರ ಒಕ್ಕೂಟದ ಕಾರ್ಯಕಾರಿ ಮಂಡಳಿಯಲ್ಲಿದ್ದ ಇಬ್ಬರು, ನಾರಾಯಣ ಸ್ವಾಮಿ ಅವರ ಬೆನ್ನಿಗೆ ನಿಂತರು. ನಿರಂತರ ಪ್ರತಿಭಟನೆ ನಡೆಸುವಂತೆ ವಿದ್ಯಾರ್ಥಿನಿಯರಿಗೆ ಪ್ರಚೋದಿಸಿದರು’.

‘ಇದಕ್ಕೆ ಕೋಮಲ ಪ್ರತಿತಂತ್ರ ರೂಪಿಸಿದರು.  ಅವರಿಗೆ ಎನ್‌ಎಸ್‌ಯುಐ ಹಾಗೂ ಎಸ್‌ಎಫ್‌ಐ ಸಂಘಟನೆಗಳ ಬೆಂಬಲ ದೊರೆಯಿತು. ನಂತರ ಕಾಲೇಜು ಬಳಿ ನಡೆದ ಪ್ರತಿಭಟನೆಯಲ್ಲಿ ಪ್ರಾಂಶುಪಾಲರು ಹಾಗೂ ನಾರಾಯಣ ಸ್ವಾಮಿ ಅವರ ವಿರುದ್ಧವೂ ವಿದ್ಯಾರ್ಥಿಗಳಿಂದ ಧಿಕ್ಕಾರದ ಕೂಗು ಕೇಳಿ ಬರತೊಡಗಿತು’ ಎಂದು ಅವರು ಹೇಳಿದರು.

ಒಕ್ಕೂಟದ ಅಧ್ಯಕ್ಷರಿಗೇ ನೋಟಿಸ್: ‘ಕರ್ನಾಟಕ ಸರ್ಕಾರಿ ಕಾಲೇಜು ಪ್ರಾಧ್ಯಾಪಕರ ಒಕ್ಕೂಟದ ಅಧ್ಯಕ್ಷರಾಗಿರುವ ಕಾಲೇಜಿನ ಪ್ರಾಧ್ಯಾಪಕ ಪ್ರಕಾಶ್ ಅವರು ನಾರಾಯಣ ಸ್ವಾಮಿ ಅವರಿಗೆ ಆತ್ಮೀಯರು. ‘ಪ್ರಾಧ್ಯಾಪಕರ ಸಭೆಯಲ್ಲೊಮ್ಮೆ ಪ್ರಾಂಶುಪಾಲರು ಪ್ರಕಾಶ್ ಅವರನ್ನು ತರಾಟೆಗೆ ತೆಗೆದುಕೊಂಡು ನೋಟಿಸ್ ಕೊಟ್ಟಿದ್ದರು. ಅಂದಿನಿಂದ ಕೋಮಲ ಅವರನ್ನು ಪ್ರಕಾಶ್‌ ದ್ವೇಷಿಸಲಾರಂಭಿಸಿದರು.  ಪ್ರತಿಭಟನೆಯನ್ನು ಪರೋಕ್ಷವಾಗಿ ಅವರೇ ಮುನ್ನಡೆಸತೊಡಗಿದರು’.

‘ವಿದ್ಯಾರ್ಥಿನಿಯರ ಪ್ರತಿಭಟನೆ ತಾರಕಕ್ಕೆ ಏರಿರುವುದು ಗೊತ್ತಿದ್ದರೂ, ಇಲಾಖೆಯ ನಿರ್ದೇಶಕರು, ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿ  ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಒಂದು ವೇಳೆ ಮೂವರನ್ನು ಕರೆಸಿ ಎಚ್ಚರಿಕೆ ನೀಡಿದ್ದರೆ, ಪ್ರತಿಭಟನೆ ಇಷ್ಟೊಂದು ದೊಡ್ಡ ಸ್ವರೂಪ ಪಡೆದುಕೊಳ್ಳುತ್ತಿರಲಿಲ್ಲ’ ಎಂದು’ ಎಂದು ಕಾಲೇಜಿನ ಸಿಬ್ಬಂದಿಯೊಬ್ಬರು ಅಭಿಪ್ರಾಯಪಟ್ಟರು.

ಇಬ್ಬರೂ ಪ್ರಭಾವಿಗಳು:  ಕೋಮಲ ಹಾಗೂ ನಾರಾಯಣ ಸ್ವಾಮಿ ಇಬ್ಬರಿಗೂ ರಾಜಕೀಯ ಮುಖಂಡರ ಹಾಗೂ ವಿದ್ಯಾರ್ಥಿ ಸಂಘಟನೆಗಳ ನಂಟಿದೆ. ರಾಜ್ಯ ವಿಪ್ರ ಮಹಿಳಾ ಸಂಘದ ಅಧ್ಯಕ್ಷರಾಗಿರುವ ಕೋಮಲ ಅವರಿಗೆ ಕಾಂಗ್ರೆಸ್‌ನ ಕೆಲ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ. ಅಂತೆಯೇ ನಾರಾಯಣ ಸ್ವಾಮಿ ತಮ್ಮ ವಿದ್ಯಾರ್ಥಿ ದೆಸೆಯಿಂದಲೂ ಎಬಿವಿಪಿಯಲ್ಲಿ ಗುರುತಿಸಿಕೊಂಡಿದ್ದರು. ಈಗಲೂ ಸಂಘಟನೆಯ ಸಂಪರ್ಕ ಇದೆ. ಬಿಜೆಪಿಯ ಕೆಲ ನಾಯಕರ ಸಂಪರ್ಕ ಹೊಂದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಲು ಯತ್ನಿಸಿದ್ದರು ಎಂದು ಪ್ರಾಧ್ಯಾಪಕರ ಒಕ್ಕೂಟದ ಸದಸ್ಯರೊಬ್ಬರು ತಿಳಿಸಿದರು.

ಸ್ವ ಹಿತಾಸಕ್ತಿಗೆ ಬಳಕೆಯಾದರು
‘ನಮ್ಮ ಸಹಪಾಠಿಗಳು  ಕೆಲವರ ಸ್ವಹಿತಾಸಕ್ತಿಗೆ ಬಳಕೆಯಾದರು. ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ಯಾಪಕರ ನಡುವಿನ ಮುಸುಕಿನ ಗುದ್ದಾಟ ಅರಿಯದೆ ಪ್ರತಿಭಟನೆ ನಡೆಸಿದರು’ ಎಂದು ಇತಿಹಾಸ ವಿಭಾಗದ ವಿದ್ಯಾರ್ಥಿನಿಯೊಬ್ಬರು ಹೇಳಿದರು.

‘4 ಸಾವಿರ ವಿದ್ಯಾರ್ಥಿನಿಯರ ಪೈಕಿ ಸುಮಾರು 150 ಮಂದಿಯಷ್ಟೆ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಕೆಲವರು ಇಡೀ ಮಹಾರಾಣಿ ಕಾಲೇಜು ಪ್ರತಿಭಟನೆ ನಡೆಸುತ್ತಿದೆ ಎಂದು ಬಿಂಬಿಸಿ, ಕಾಲೇಜಿನ ಮರ್ಯಾದೆ ತೆಗೆದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT