ADVERTISEMENT

ಕೀಳರಿಮೆ ಬಿಡದಿದ್ದರೆ ಕನ್ನಡ ಉಳಿಯದು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2018, 19:57 IST
Last Updated 25 ಫೆಬ್ರುವರಿ 2018, 19:57 IST
‘ನನ್ನ ಕವಿತೆ- ನನ್ನ ಹಾಡು’ ಸಾಕ್ಷ್ಯಚಿತ್ರದ ಸಿ.ಡಿ.ಯನ್ನು ಎಸ್‌.ಜಿ. ಸಿದ್ಧರಾಮಯ್ಯ ಬಿಡುಗಡೆಗೊಳಿಸಿದರು (ಎಡದಿಂದ), ಲೇಖಕಿ ಡಾ.ವಿಜಯಾ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮತ್ತು ಲೇಖಕ  ಪ್ರೊ. ಎಂ.ಎಚ್. ಕೃಷ್ಣಯ್ಯ ಇದ್ದಾರೆ –ಪ್ರಜಾವಾಣಿ ಚಿತ್ರ
‘ನನ್ನ ಕವಿತೆ- ನನ್ನ ಹಾಡು’ ಸಾಕ್ಷ್ಯಚಿತ್ರದ ಸಿ.ಡಿ.ಯನ್ನು ಎಸ್‌.ಜಿ. ಸಿದ್ಧರಾಮಯ್ಯ ಬಿಡುಗಡೆಗೊಳಿಸಿದರು (ಎಡದಿಂದ), ಲೇಖಕಿ ಡಾ.ವಿಜಯಾ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮತ್ತು ಲೇಖಕ ಪ್ರೊ. ಎಂ.ಎಚ್. ಕೃಷ್ಣಯ್ಯ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನ್ನಡಿಗರಲ್ಲಿ ಭಾಷಾ ಇಚ್ಛಾಶಕ್ತಿಯ ಕೊರತೆ ಇದೆ. ಕೀಳರಿಮೆ ಬಿಡದಿದ್ದರೆ ಕನ್ನಡ ಉಳಿಯುವುದು ಅಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ಧರಾಮಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಲೇಖಕಿಯರ ಸಂಘವು ಇಲ್ಲಿ ಭಾನುವಾರ ಆಯೋಜಿಸಿದ್ದ ‘ನನ್ನ ಕವಿತೆ–ನನ್ನ ಹಾಡು’ ಕಾರ್ಯಕ್ರಮದಲ್ಲಿ 174 ಲೇಖಕಿಯರ ಸಾಕ್ಷ್ಯಚಿತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಇಂದಿನ ಮಕ್ಕಳು ಕನ್ನಡಕ್ಕೆ ಅಪರಿಚಿತರಾಗುತ್ತಿದ್ದಾರೆ. ನಾಡಿನಲ್ಲಿ ಕನ್ನಡ ಕಣ್ಮರೆಯಾದರೆ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನೂ ಕಳೆದುಕೊಂಡಂತೆ’ ಎಂದರು.

ADVERTISEMENT

‘ಕೇಂದ್ರ ಸರ್ಕಾರ ಎಲ್ಲಾ ಭಾಷೆಗಳಿಗೆ ಸಮಾನವಾದ ಸ್ಥಾನಮಾನ ನೀಡುತ್ತಿಲ್ಲ. ಇದರಿಂದಾಗಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ’ ಎಂದು ದೂರಿದರು. 

‘ಹೊರಗಿನಿಂದ ನಮ್ಮಲ್ಲಿಗೆ ಉದ್ಯೋಗ ಅರಸಿ ಬಂದವರು ಕನ್ನಡದ ಅವನತಿಗೆ ಕಾರಣವಾಗುತ್ತಿದ್ದಾರೆ. ಹೊರರಾಜ್ಯದ ಕೆಲವು ಅಧಿಕಾರಿಗಳು ತಮ್ಮ ರಾಜ್ಯದವರಿಗೆ ಉದ್ಯೋಗ ಒದಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೆಪಿಟಿಸಿಎಲ್‌ನ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಬ್ಯಾಂಕ್‌ ಹುದ್ದೆಗಳು ಕನ್ನಡಿಗರ ಕೈತಪ್ಪುತ್ತಿವೆ. ನಾನು ವಲಸೆ ವಿರೋಧಿಯಲ್ಲ. ಆದರೆ, ಅದಕ್ಕೂ ಮಿತಿ ಇರುತ್ತದೆ’ ಎಂದರು.

ಸಾಕ್ಷ್ಯಚಿತ್ರ ಲೋಕಾರ್ಪಣೆ

ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ನೆಲೆಸಿರುವ 174 ಕನ್ನಡ ಕವಯತ್ರಿಯರ ಸಾಕ್ಷ್ಯಚಿತ್ರ ‘ನನ್ನ ಕವಿತೆ ನನ್ನ ಹಾಡು’ ಅನ್ನು ಲೋಕಾರ್ಪಣೆಗೊಳಿಸಲಾಯಿತು.

ದಿವಂಗತ ಡಿ.ಎಸ್‌.ಸುರೇಶ್‌ ನಿರ್ದೇಶನದ ಈ ಸಾಕ್ಷ್ಯಚಿತ್ರದಲ್ಲಿ ಪ್ರತಿ ಕವಯತ್ರಿಯ 5 ಕವನಗಳು ಹಾಗೂ ಕುಟುಂಬದ ಜೊತೆಗೆ ಅವರ ಒಡನಾಟವನ್ನು 15 ನಿಮಿಷ ಸೆರೆಹಿಡಿಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.