ಬೆಂಗಳೂರು: ಮಾಜಿ ಕ್ರಿಕೆಟಿಗ ಅನಿಲ್‌ಕುಂಬ್ಳೆ ಅವರ ಪತ್ನಿಯ ಪಾನ್‌ಕಾರ್ಡ್ ವಿವರ ದುರುಪಯೋಗ ಮಾಡಿಕೊಂಡು ₹ 32.96 ಲಕ್ಷ ಮೌಲ್ಯದ ಎರಡು ವಾಚ್‌ಗಳನ್ನು ಅನ್ಯವ್ಯಕ್ತಿಗೆ ಮಾರಾಟ ಮಾಡಿರುವ ಆರೋಪದ ಮೇಲೆ ಮುಂಬೈನ ‘ದಿ ಟೈಮ್ ಕೀಪರ್ಸ್ ವಾಚ್ ಬಾಟಿಕ್’ ಮಳಿಗೆ ವಿರುದ್ಧ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಬ್ಳೆ ಪತ್ನಿ ಚೇತನಾ ಅವರು ಬುಧವಾರ ಸಂಜೆ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಅವರ ಕಚೇರಿಗೆ ತೆರಳಿ ದೂರು ಕೊಟ್ಟಿದ್ದಾರೆ. ಪೊಲೀಸರು ನಂಬಿಕೆದ್ರೋಹ (ಐಪಿಸಿ 406) ಹಾಗೂ ವಂಚನೆ (420) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.
ಪ್ರತಿಷ್ಠಿತ ‘ಫ್ರಾಂಕ್ ಮುಲ್ಲರ್’ ಬ್ರಾಂಡ್‌ನ ವಾಚ್ ಖರೀದಿಸಲು ಆಸಕ್ತಿ ಹೊಂದಿದ್ದ ಚೇತನಾ, ಆ ಬಗ್ಗೆ ವಿಚಾರಿಸಲು 2016ರ ಜುಲೈನಲ್ಲಿ ಯುಬಿ ಸಿಟಿಯ ‘ಜಿಮ್ಸನ್ ವಾಚ್ಸ್’ ಮಳಿಗೆಗೆ ತೆರಳಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಸತ್ಯ ವಾಗೀಶ್ವರನ್ ಎಂಬುವರು, ‘ನಮ್ಮ ಮಳಿಗೆಯಲ್ಲಿ ಆ ಬ್ರಾಂಡ್‌ನ ವಾಚ್ ಇಲ್ಲ. ಮುಂಬೈನ ‘ದಿ ಟೈಮ್ ಕೀಪರ್ಸ್ ವಾಚ್ ಬಾಟಿಕ್’ ಮಳಿಗೆಯಲ್ಲಿ ಅದನ್ನು ಮಾರಾಟ ಮಾಡುತ್ತಾರೆ. ಬೇಕೆಂದರೆ ಅಲ್ಲಿಂದ ತರಿಸಿಕೊಡುತ್ತೇನೆ’ ಎಂದು ಹೇಳಿದ್ದರು. ಅದಕ್ಕೆ ಚೇತನಾ ಒಪ್ಪಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕೆಲ ದಿನಗಳ ನಂತರ ವಾಗೀಶ್ವರನ್ ವಾಚ್ ತರಿಸಿದ್ದರು. ಅದರ ವಿನ್ಯಾಸ ಮೆಚ್ಚಿದ ಚೇತನಾ, ಚೆಕ್ ಮೂಲಕ ಮುಂಬೈ ಮಳಿಗೆಗೆ ₹ 8 ಲಕ್ಷ ಸಂದಾಯ ಮಾಡಿ ವಾಚ್ ಖರೀದಿಸಿದ್ದರು. ಈ ವೇಳೆ ಪಾನ್‌ಕಾರ್ಡ್‌ನ ಮಾಹಿತಿಯನ್ನೂ ನೀಡಿದ್ದರು.
‘ಇತ್ತೀಚೆಗೆ ತೆರಿಗೆ ಮಾಹಿತಿಯನ್ನು ನೋಡಿದಾಗ ನನ್ನ ಪಾನ್‌ಕಾರ್ಡ್ ದುರುಪಯೋಗ ಆಗಿರುವುದು ಗೊತ್ತಾಯಿತು. ತೆರಿಗೆ ಇಲಾಖೆ ನೀಡಿದ್ದ ಫಾರಂ ನಂ 26–ಎಎಸ್ ಅನ್ನು ಪರಿಚಿತ ಆಡಿಟರ್ ಎಚ್.ಸಿ.ಕಿಂಚಅವರೂ ಪರಿಶೀಲಿಸಿದರು. ನಾನು ₹32.96 ಲಕ್ಷ ಮೌಲ್ಯದ ಎರಡು ವಾಚ್‌ಗಳನ್ನು ಖರೀದಿಸಿರುವುದಾಗಿ, ಮುಂಬೈನ ಮಳಿಗೆ ₹32,956 ಟಿಸಿಎಸ್(ತೆರಿಗೆ ಸಂಗ್ರಹ) ತೋರಿಸಿರುವುದನ್ನು ಅವರು ಖಚಿತಪಡಿಸಿದರು’ ಎಂದು ಚೇತನಾ ದೂರಿನಲ್ಲಿ ಹೇಳಿದ್ದಾರೆ.
‘ನಂಬಿಕೆಯಿಂದ ಪಾನ್‌ಕಾರ್ಡ್ ಮಾಹಿತಿ ಕೊಟ್ಟರೆ, ವಾಗೀಶ್ವರನ್ ಹಾಗೂ ಮುಂಬೈ ಮಳಿಗೆಯ ನೌಕರರು ನನ್ನ ದಾಖಲೆಗಳನ್ನು ಇಟ್ಟುಕೊಂಡು ಅನ್ಯ ವ್ಯಕ್ತಿಯ ಜತೆ ಹಣಕಾಸಿನ ವ್ಯವಹಾರ ಮಾಡಿದ್ದಾರೆ. ಹೀಗಾಗಿ, ಅವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ವಾಗೀಶ್ವರನ್ ನಾಪತ್ತೆ
‘ಪಾನ್‌ಕಾರ್ಡ್ ವಿವರ ಬೆಂಗಳೂರಿನ ಮಳಿಗೆಯಲ್ಲಿ ದುರುಪಯೋಗ ಆಗಿದೆಯೋ ಅಥವಾ ಮುಂಬೈನಲ್ಲಿ ದುರ್ಬಳಕೆ ಆಗಿದೆಯೋ ಗೊತ್ತಿಲ್ಲ. ವಾಗೀಶ್ವರನ್ ಸಹ ಕೆಲಸ ಬಿಟ್ಟು ಹೋಗಿದ್ದಾರೆ. ಸಿಬ್ಬಂದಿಯ ವಿಶೇಷ ತಂಡ ಅವರ ಶೋಧ ಕಾರ್ಯದಲ್ಲಿ ತೊಡಗಿದೆ. ಮುಂಬೈ ಮಳಿಗೆ ನೌಕರರಿಗೂ ವಿಚಾರಣೆಗೆ ಬರುವಂತೆ ನೋಟಿಸ್ ಕಳುಹಿಸಲಾಗುವುದು’ ಎಂದು ಡಿಸಿಪಿ ಚಂದ್ರಗುಪ್ತ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.