ADVERTISEMENT

ಕೃತಿಚೌರ್ಯ ಪರೀಕ್ಷೆಗೆ ವೆಬ್‌ ಅಪ್ಲಿಕೇಷನ್‌

ಅಮೃತಾ ವಿಶ್ವವಿದ್ಯಾಲಯದಲ್ಲಿ ಕೈಗೊಂಡ ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:47 IST
Last Updated 25 ಮೇ 2017, 19:47 IST
ವಿಜ್ಞಾನಿ ಡಾ. ಎಸ್‌.ಆರ್‌. ನಾಗರಾಜ್ ಅವರು (ಎಡದಿಂದ ಎರಡನೇಯವರು) ಶಾಕ್‌ವೇವ್ಸ್‌ ಮತ್ತು ಹೈಪರ್‌ಸಾನಿಕ್‌ ಯಂತ್ರಗಳ ಬಗ್ಗೆ ವಿವರಿಸಿದರು. ವಿಶ್ವವಿದ್ಯಾಲಯ ನಿರ್ದೇಶಕ ಬಿ.ಆರ್‌. ಧನರಾಜ್‌, ಸಹಾಯಕ ಡೀನ್‌ ಡಾ. ಎಸ್‌.ಜಿ. ರಾಕೇಶ್‌ ಇದ್ದರು –ಪ್ರಜಾವಾಣಿ ಚಿತ್ರ
ವಿಜ್ಞಾನಿ ಡಾ. ಎಸ್‌.ಆರ್‌. ನಾಗರಾಜ್ ಅವರು (ಎಡದಿಂದ ಎರಡನೇಯವರು) ಶಾಕ್‌ವೇವ್ಸ್‌ ಮತ್ತು ಹೈಪರ್‌ಸಾನಿಕ್‌ ಯಂತ್ರಗಳ ಬಗ್ಗೆ ವಿವರಿಸಿದರು. ವಿಶ್ವವಿದ್ಯಾಲಯ ನಿರ್ದೇಶಕ ಬಿ.ಆರ್‌. ಧನರಾಜ್‌, ಸಹಾಯಕ ಡೀನ್‌ ಡಾ. ಎಸ್‌.ಜಿ. ರಾಕೇಶ್‌ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅಂತರರಾಷ್ಟ್ರೀಯ ಸಂಸ್ಥೆ­ಗಳು ಹಾಗೂ ಸರ್ಕಾರಿ ಸಂಸ್ಥೆಗಳು ನಮ್ಮ ವಿಶ್ವವಿದ್ಯಾಲಯದೊಂದಿಗೆ ಕೈಜೋಡಿಸಿದ್ದು, ನಾನಾ ಸಂಶೋಧನೆಗಳನ್ನು ಕೈಗೊಳ್ಳಲು ಸಾಧ್ಯವಾಗಿದೆ’ ಎಂದು ಅಮೃತಾ ವಿಶ್ವವಿದ್ಯಾಲಯದ ಸಹಾಯಕ ಡೀನ್‌ ಡಾ. ಎಸ್‌.ಜಿ. ರಾಕೇಶ್‌ ತಿಳಿಸಿದರು.

ಅಮೃತಾ ವಿಶ್ವವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಅಲ್ಲದೆ, ಕಾಲೇಜಿನಲ್ಲಿ ಕೈಗೊಂಡ ಕೆಲವು ಸಂಶೋಧನೆಗಳನ್ನು ವಿಜ್ಞಾನಿಗಳು ಪ್ರಸ್ತುತ ಪಡಿಸಿದರು.

ಸಹಾಯಕ ಪ್ರಾಧ್ಯಾಪಕಿ ಡಾ.ದೀಪಾ, ‘ಕೃತಿಚೌರ್ಯ ಸದ್ಯ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಪಿಎಚ್.ಡಿ ಹಾಗೂ ಇತರ ಸಂಶೋಧನಾ ಪ್ರಬಂಧಗಳಲ್ಲಿ ಕೃತಿಚೌರ್ಯ ಹಾವಳಿ ಹೆಚ್ಚಾಗಿದ್ದು, ಅದನ್ನು ಪರೀಕ್ಷಿಸಲು ಆನ್‌ಲೈನ್‌ನಲ್ಲಿ ಕೆಲವು ಉಚಿತ ಅಪ್ಲಿಕೇಷನ್‌ಗಳಿವೆ. ಆದರೆ ಅವುಗಳು ಪರಿಣಾಮಕಾರಿಯಾಗಿಲ್ಲ. ವಾಕ್ಯವನ್ನು ಬದಲಾಯಿಸಿ ನೀಡಿದರೆ ಗುರುತಿಸುವುದಿಲ್ಲ’ ಎಂದು ವಿವರಿಸಿದರು.

‘ಈ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು, ಪರಿಣಾಮಕಾರಿಯಾಗಿ ಕೆಲಸ ಮಾಡುವ ವೆಬ್‌ ಆಧಾರಿತ ಅಪ್ಲಿಕೇಷನ್‌ ಅಭಿವೃದ್ಧಿ ಪಡಿಸಿದ್ದೇವೆ. ಅನೇಕ ಹಂತಗಳ ದತ್ತಾಂಶ ಪರೀಕ್ಷೆ ನಡೆಸಲಾಗಿದೆ. ವಿವಿಧ ಸಂಶೋಧನಾ ಗ್ರಂಥಗಳ ದತ್ತಾಂಶವನ್ನು ಇದಕ್ಕೆ ಅಳವಡಿಸುವ ಕೆಲಸ ಬಾಕಿ ಇದ್ದು, ಅದು ಪೂರೈಸಿದ ನಂತರ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು’ ಎಂದು ಹೇಳಿದರು.

ಪ್ರಾಧ್ಯಾಪಕ ಡಾ. ಅಮಲೇಂದು ಜ್ಯೋತಿಷಿ, ‘ಬಹಳಷ್ಟು ಜನರು ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ಅವರಿಗೆ ಆಹಾರವಾಗಿ ಅತ್ಯಂತ ಕಡಿಮೆ ಬೆಲೆಯ ಸಮುದ್ರ ಮೀನುಗಳನ್ನು ಆಹಾರವಾಗಿ ಲಭ್ಯವಾಗುಂತೆ ಮಾಡುವ ಬಗ್ಗೆ ಅಧ್ಯಯನ ನಡೆಸಿದ್ದೇವೆ’ ಎಂದರು.

‘ಬಡತನ ಹೆಚ್ಚಿರುವ ದಕ್ಷಿಣ ಏಷ್ಯಾ ಮತ್ತು ಪಶ್ಚಿಮ ಆಫ್ರಿಕಾ ಪ್ರದೇಶಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಸಂಶೋಧನೆ ನಡೆಸಿದ್ದೇವೆ. ಮೀನು ಬೆಳೆಯುವುದು ಸಣ್ಣ ಪ್ರಮಾಣದ ಉದ್ಯಮವಾಗುವುದರಿಂದ ಆರ್ಥಿಕ ಸ್ಥಿತಿ ಸುಧಾರಣೆ ಆಗುತ್ತದೆ’ ಎಂದು ತಿಳಿಸಿದರು.

ADVERTISEMENT

ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಅಮುದಾ ಅವರು ದೃಷ್ಟಿ ವಿಶ್ಲೇಷಣೆ ಕುರಿತ ಸಂಶೋಧನೆಯನ್ನು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.