ಬೆಳ್ಳಂದೂರು, ವರ್ತೂರು ಕೆರೆ ಸೇರಿದಂತೆ ನಗರದ ಕೆರೆಗಳ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡಿರುವ ಒತ್ತುವರಿಗಳನ್ನು ತೆರವುಗೊಳಿಸಬೇಕು. ಭೂ ಮಾಫಿಯಾ ಬಗ್ಗೆ ಯಾವುದೇ ಅನುಕಂಪ ತೋರಿಸಬಾರದು. ಜನರ ಆರೋಗ್ಯ ಮತ್ತು ನಗರದ ಭವಿಷ್ಯದ ಬಗ್ಗೆ ಯೋಚಿ ಸಬೇಕು ಎಂದು ಸಚಿವರಿಗೆ ಸಲಹೆ ನೀಡಿದರು.
‘ಸರಿಯಾದ ಯೋಜನೆ ಇಲ್ಲದ ನಗರೀಕರಣದಿಂದ ಶೇ 80ರಷ್ಟು ಮರಗಿಡ, ಶೇ 70ರಷ್ಟು ಜಲಮೂಲ ನಾಶವಾಗುತ್ತಿವೆ. ನಮ್ಮ ನಗರ ಅಕ್ಷರಶಃ ಸಾಯುತ್ತಿದೆ. ಗಾಳಿಯಲ್ಲಿ ಆಮ್ಲಜನಕ ಕ್ಷೀಣಿಸುತ್ತಿದೆ. ನೀರಿನಲ್ಲಿ ಭಾರಲೋಹದ ಪ್ರಮಾಣ ಹೆಚ್ಚುತ್ತಿದೆ.
ಆಳದಿಂದ ಮೇಲೆತ್ತುತ್ತಿರುವ ಅಂತರ್ಜಲದಲ್ಲಿನ ಲವಣ ಮತ್ತು ಭಾರಲೋಹ ಕೃಷಿ ಬೆಳೆ ಉತ್ಪನ್ನಗಳಲ್ಲೂ ಸೇರಿಕೊಳ್ಳುತ್ತಿದೆ. ಅಂತರ್ಜಲದ ಬಳಕೆ ಕಡಿಮೆ ಮಾಡಬೇಕು. ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಿದರೆ, ನಗರದ ನೀರಿನ ಸಮಸ್ಯೆ ಶೇ 70ರಷ್ಟು ಪರಿಹಾರವಾಗಲಿದೆ’ ಎಂದರು.
‘ಬೆಳ್ಳಂದೂರು ಕೆರೆಯಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವಷ್ಟು ಮರಳು, ಅಪಾರ ಖನಿಜ ಸಂಪತ್ತು ಶೇಖರಣೆಯಾಗಿದೆ. ಇದನ್ನು ಸದ್ಬಳಕೆ ಮಾಡುವ ಕಡೆಗೂ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.
ಎನ್ವಿರಾನ್‌ಮೆಂಟಲ್ ಸಪೋರ್ಟ್ ಗ್ರೂಫ್ ಸದಸ್ಯ ಲಿಯೊ ಸಲ್ಡಾನಾ ಮಾತನಾಡಿ, ‘ಕೆರೆ ಸಂರಕ್ಷಿಸಬೇಕಾದರೆ ಮೊದಲು ಮಳೆನೀರು ಕಾಲುವೆಗಳನ್ನು ಉಳಿಸಬೇಕು. ರಾಜಕಾಲುವೆಗಳ ಎರಡೂ ಬದಿ ಬಿದಿರು, ಇನ್ನಿತರ ಗಿಡಮರ ಬೆಳೆಸಿ ನೈಸರ್ಗಿಕ ಪರಿಸರ ಕಾಪಾಡಿಕೊಳ್ಳಬೇಕು’ ಎಂದರು.
ವರ್ತೂರಿನ ಕೆ.ಕೆ.ಇಂಗ್ಲಿಷ್ ಶಾಲೆ ಶಿಕ್ಷಕಿ ಅಲಿ ರಾಣಿ ‘ವರ್ತೂರು ಕೆರೆ ದಂಡೆಯಲ್ಲಿ ಜಾಲರಿ ಅಳವಡಿಸಲು ಯಾವ ತಜ್ಞರು ಸಲಹೆ ನೀಡಿದ್ದರು? ಜೋರು ಗಾಳಿಗೆ ಜಾಲರಿ ಕಿತ್ತು ರಸ್ತೆ ಮೇಲೆ ಬಿದ್ದು 3 ತಾಸು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಜನರ ಜೀವಕ್ಕೆ ತೊಂದರೆಯಾಗಿದ್ದರೆ ಯಾರು ಹೊಣೆ’ ಎಂದು ಸಚಿವರನ್ನು ಪ್ರಶ್ನಿಸಿದರು.
‘ಇದು ಸರ್ಕಾರ ತೆಗೆದುಕೊಂಡ ನಿರ್ಧಾರವಲ್ಲ. ತಜ್ಞರ ಸಮಿತಿಯ ಶಿಫಾರಸಿನಂತೆ ಕೆರೆಯಿಂದ ನೊರೆ ರಸ್ತೆಗೆ ಬರದಂತೆ ಜಾಲರಿ ಅಳವಡಿಸಲಾಗಿತ್ತು’ ಎಂದು ಸಚಿವರು ಸಮರ್ಥಿಸಿಕೊಂಡರು.
ಕೆ.ಕೆ. ಪ್ರೌಢಶಾಲೆ ಪ್ರಾಂಶುಪಾಲ ಎಂ.ಎ. ಆನಂದ ‘ವರ್ತೂರು ಕೆರೆಯಲ್ಲಿ ಸಂಗ್ರಹವಾಗಿರುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಲಾರದ ಕೆರೆಗಳನ್ನು ತುಂಬಿಸುವ ₹1500 ಕೋಟಿ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರಕ್ಕೆ ಯಾವ ತಜ್ಞರ ಸಮಿತಿ ವರದಿ ನೀಡಿದೆ? ಇದರ ಹಿಂದೆ ಸರ್ಕಾರದ ಯಾವ ಬುದ್ಧಿವಂತಿಕೆ ಇದೆ’ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಶುದ್ಧೀಕರಿಸಿದ ನೀರನ್ನು ಪುನರ್ ಬಳಕೆ ಮಾಡುವ ಉದ್ದೇಶದಿಂದ ಅಂತರ್ಜಲ ಮರುಪೂರಣಕ್ಕಾಗಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ’ ಎಂದರು.
ಡೆಕ್ಕನ್ ಹೆರಾಲ್ಡ್ ಹಿರಿಯ ಸಂಪಾದಕ ಬಿ.ಎಸ್.ಅರುಣ್ ಪ್ರಾಸ್ತಾವಿಕ ಮಾತನಾಡಿದರು. ವಿಶೇಷ ವರದಿಗಾರ ರಷೀದ್ ಕಪ್ಪನ್ ನಿರೂಪಿಸಿದರು.
****
ಬೆಳ್ಳಂದೂರು ಕೆರೆ, ವರ್ತೂರು ಕೆರೆ ಮಾತ್ರವಲ್ಲ, ನಗರದ ಎಲ್ಲ ಕೆರೆಗಳ ಸಂರಕ್ಷಣೆ ನಮ್ಮ ಸರ್ಕಾರದ ಆದ್ಯತೆ
ಕೆ.ಜೆ.ಜಾರ್ಜ್, ಬೆಂಗಳೂರು ಅಭಿವೃದ್ಧಿ ಸಚಿವ
****
ಬೆಳ್ಳಂದೂರು ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಕೆಂಪು ಪಟ್ಟಿಯಲ್ಲಿರುವ 97 ಕೈಗಾರಿಕೆಗಳ ಪೈಕಿ 76 ಕೈಗಾರಿಕೆಗಳನ್ನು ಮುಚ್ಚಿಸಲಾಗಿದೆ
ಲಕ್ಷ್ಮಣ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
****
ಕೆರೆಗಳ ದುಃಸ್ಥಿತಿ ಒಂದು ನಗರ, ರಾಜ್ಯಕ್ಕೆ ಸೀಮಿತವಾಗಿಲ್ಲ. ಕೆರೆಗಳ ಸಂರಕ್ಷಣೆಗೆ ಸಮಗ್ರ ಅಭಿವೃದ್ಧಿ ಯೋಜನೆ ಅಗತ್ಯವಿದೆ
ಡಾ.ರಿತೇಶ್ ಕುಮಾರ್, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಪ್ರತಿನಿಧಿ
****
ಕೆರೆಗಳ ನೈರ್ಮಲ್ಯ ಕಾಪಾಡದಿದ್ದರೆ ನಗರಕ್ಕೆ ಉಳಿಗಾಲವಿಲ್ಲ. ಭವಿಷ್ಯದಲ್ಲಿ ಜನರು ಇನ್ನಷ್ಟು ದೊಡ್ಡ ಸಮಸ್ಯೆಗೆ ಸಿಲುಕಲಿದ್ದಾರೆ
ಉಷಾ ರಾಜಗೋಪಾಲನ್, ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿ ಟ್ರಸ್ಟ್ ಮುಖ್ಯಸ್ಥೆ