ADVERTISEMENT

ಕೆರೆ ಪಕ್ಕದ ಆಸ್ತಿ ಕೇಳೋರಿಲ್ಲ!

ಲೇಕ್‌ಸೈಡ್‌ ನಿವೇಶನ ಬೇಡ: ಒತ್ತುವರಿ ತೆರವು ಕಾರ್ಯಾಚರಣೆಯಿಂದ ಮೂಡಿದ ಅರಿವು

ಪ್ರವೀಣ ಕುಲಕರ್ಣಿ
Published 21 ಮೇ 2015, 19:42 IST
Last Updated 21 ಮೇ 2015, 19:42 IST

ಬೆಂಗಳೂರು: ‘ಲೇಕ್‌ಸೈಡ್‌, ಲೇಕ್‌ ವ್ಯೂವ್‌, ಲೇಕ್‌ಫ್ರಂಟ್‌’ ಎಂಬ ಪದ ಕೇಳಿದರೆ ಸಾಕು, ಸ್ವಂತದ ಮನೆ ಹೊಂದಬೇಕು ಎಂಬ ಕನಸು ಕಾಣುತ್ತಿರುವ ನಗರದ ಜನ ಬೆಚ್ಚಿಬೀಳುತ್ತಾರೆ. ರಿಯಲ್‌ ಎಸ್ಟೇಟ್‌ ಏಜೆನ್ಸಿಗಳಿಗೆ ಅವರೀಗ ಮೊದಲು ಮುಂದಿಡುವ ಬೇಡಿಕೆಯೇ ‘ನಿವೇಶನ, ಕೆರೆಯಿಂದ ಆದಷ್ಟು ದೂರ ಇರಬೇಕು’ ಎನ್ನುವುದು!

ಉತ್ತರಹಳ್ಳಿ, ಇಟ್ಟಮಡು, ಸಾರಕ್ಕಿ, ಬಾಣಸವಾಡಿ ಮೊದಲಾದ ಕೆರೆ ಪ್ರದೇಶಗಳ ಒತ್ತುವರಿ ತೆರವುಗೊಳಿಸಲು ನಗರ ಜಿಲ್ಲಾಡಳಿತ ಇತ್ತೀಚೆಗೆ ನಡೆಸಿದ ಕಾರ್ಯಾಚರಣೆ ಪರಿಣಾಮ ಇದು.

ತಲೆಕೆಳಗಾದ ಪ್ರವೃತ್ತಿ:  ಕೇವಲ 5–6 ವರ್ಷಗಳ ಹಿಂದಿನ ಮಾತು. ಕೆರೆ ಸುತ್ತಲಿನ ಪ್ರದೇಶದ ನಿವೇಶನ ಇಲ್ಲವೆ ಅಪಾರ್ಟ್‌ಮೆಂಟ್‌ ಎಂದರೆ ಗ್ರಾಹಕರು ಮುಗಿಬೀಳುತ್ತಿದ್ದರು. ತಾಜಾ ಗಾಳಿ ಬೀಸುವ, ವಿಹಾರಕ್ಕೆ ಅವಕಾಶ ಕಲ್ಪಿಸುವ ಹಣೆಪಟ್ಟಿ ಅಂಟಿಸಿಕೊಂಡ ಅಲ್ಲಿನ ಆಸ್ತಿಗಳು ಹೆಚ್ಚಿನ ದರಕ್ಕೆ ಮಾರಾಟ ಆಗುತ್ತಿದ್ದವು. ಜಿಲ್ಲಾಡಳಿತದ ಕಾರ್ಯಾಚರಣೆ ಬಳಿಕ ಅಂತಹ ಪ್ರವೃತ್ತಿ ತಲೆ ಕೆಳಗಾಗಿದೆ. ಕೆರೆ ಸುತ್ತಲಿನ ಆಸ್ತಿಗೆ ಇದ್ದ ಬೇಡಿಕೆ ಚಳಿಗಾಲದ ತಾಪಮಾನದಂತೆ ಸರ್ರನೆ ಕುಸಿದಿದೆ.

‘ಕೆರೆ ಒತ್ತುವರಿ ತೆರವುಗೊಳಿಸಿದ ಬಳಿಕ ಆಸ್ತಿ ಖರೀದಿಗೆ ಸಂಬಂಧಿಸಿದ ವಿಚಾರಣೆಗಳ ಸಂಖ್ಯೆಯಲ್ಲಿ ಅರ್ಧದಷ್ಟು ಕಡಿಮೆಯಾಗಿದೆ. ‘ಬಿ’ ಖಾತಾ ಆಸ್ತಿಗಳ ವಿಷಯ ಹಾಗಿರಲಿ, ಅಧಿಕೃತ ದಾಖಲೆಗಳನ್ನು ಹೊಂದಿರುವ ಆಸ್ತಿಗಳ ಮೌಲ್ಯವೂ ಇಳಿಕೆಯಾಗಿದೆ’ ಎಂದು ಮಾಹಿತಿ ನೀಡುತ್ತಾರೆ, ಜೆ.ಪಿ.ನಗರದ ಗೋಲ್ಡನ್‌ ರಿಯಲ್‌ ಎಸ್ಟೇಟ್‌ನ ಮಾರಾಟ ಪ್ರತಿನಿಧಿಗಳು.

‘ಮನೆ ಖರೀದಿಗಾಗಿ ನೋಂದಣಿ ಮಾಡಿಸಿದ್ದ ಹಲವು ಗ್ರಾಹಕರು ತಮ್ಮ ಆಸ್ತಿ ಖರೀದಿ ಯೋಜನೆಯನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಆಸ್ತಿ ಮಾರಾಟ ದರದಲ್ಲಿ ಶೇ 8ರಿಂದ 10ರಷ್ಟು ಇಳಿಕೆಯಾಗಿದೆ. ಮೊದಲು ಕೆರೆ ಹತ್ತಿರ ಬೇಕು ಎನ್ನುತ್ತಿದ್ದವರು ಈಗ ಬೆಲೆ ಇಳಿದರೂ ಕೆರೆ ಅಕ್ಕ–ಪಕ್ಕದ ಪ್ರದೇಶಗಳಲ್ಲಿ ಮನೆ, ನಿವೇಶನ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೇಳುತ್ತಾರೆ.

ರೇನ್‌ ಟ್ರೀ ಸಂಸ್ಥೆಯ ನಾರಾಯಣ್‌ ಅವರ ವಿಶ್ಲೇಷಣೆ ತುಂಬಾ ಭಿನ್ನವಾಗಿದೆ. ‘ಜಿಲ್ಲಾಡಳಿತದ ಕಾರ್ಯಾಚರಣೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಿದ್ದು, ಪ್ರತಿಯೊಂದು ದಾಖಲೆಯನ್ನೂ ಈಗ ಪರಿಶೀಲನೆ ಮಾಡುತ್ತಿದ್ದಾರೆ. ‘ಕಡಿಮೆ ದುಡ್ಡಿಗೆ ನಿವೇಶನ’ ಎನ್ನುವಂತಹ ಆಮಿಷಗಳಿಗೆ ಬಲಿಯಾಗುತ್ತಿಲ್ಲ’ ಎಂದು ವಿವರಿಸುತ್ತಾರೆ.

‘ಬಾಣಸವಾಡಿ ಕೆರೆಗೆ ತುಂಬಾ ಹತ್ತಿರದಲ್ಲಿ ಅಪಾರ್ಟ್‌ಮೆಂಟ್‌ನ ಕೆಲವು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಬೇಕಿದೆ. ಈ ಕಟ್ಟಡವನ್ನು ಕಾನೂನು ಬದ್ಧವಾಗಿಯೇ ಕಟ್ಟಲಾಗಿದೆ. ಭೂದಾಖಲೆಗಳು ಸಹ ಸರಿಯಾಗಿವೆ. ಆದರೆ, ಗ್ರಾಹಕರಿಗೆ ಏನೋ ಅನುಮಾನ. ಹೀಗಾಗಿ ಫ್ಲ್ಯಾಟ್‌ಗಳ ಮಾರಾಟಕ್ಕೆ ಹರಸಾಹಸ ಪಡಬೇಕಿದೆ’ ಎಂದು ಹೇಳುತ್ತಾರೆ.

ನಗರದ ರಿಯಲ್‌ ಎಸ್ಟೇಟ್‌ ಕ್ಷೇತ್ರದ ವಿಶ್ಲೇಷಕ ರವಿಕಾಂತ್‌ ಸಹ ನಾರಾಯಣ್‌ ಅವರ ಅಭಿಪ್ರಾಯಕ್ಕೆ ದನಿಗೂಡಿಸುತ್ತಾರೆ. ‘ಹೌದು, ಆಸ್ತಿ ಖರೀದಿಯಲ್ಲಿ ಭೌಗೋಳಿಕ ಹಿನ್ನೆಲೆ ಮಹತ್ವದ ಪಾತ್ರ ವಹಿಸುತ್ತದೆ. ದಾಖಲೆಗಳ ನೈಜತೆ ಪರಿಶೀಲಿಸಲು ಜನ ಈಗ ವಕೀಲರು ಮತ್ತು ರಿಯಲ್‌ ಎಸ್ಟೇಟ್‌ ತಜ್ಞರ ಬಳಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದಾರೆ. ಭೂಮಿಯ ಸರ್ವೆ ಸಂಖ್ಯೆಯನ್ನು ತಪ್ಪದೆ ಪರಿಶೀಲಿಸುತ್ತಿದ್ದಾರೆ’ ಎಂದು ಅವರು ಮಾಹಿತಿ ನೀಡುತ್ತಾರೆ.

ನಗರದ ವಿವಿಧ ಕೆರೆಗಳ ಸುತ್ತಲಿನ ಪ್ರದೇಶಗಳಲ್ಲಿ ಸುಮಾರು ಮೂರು ಸಾವಿರ ಅಪಾರ್ಟ್‌ಮೆಂಟ್‌ಗಳಿವೆ ಎನ್ನುವ ಅಂದಾಜಿದೆ. ಅವುಗಳಲ್ಲಿ ಇನ್ನೂ ಸಾವಿರಾರು ಫ್ಲ್ಯಾಟ್‌ಗಳು ಮಾರಾಟ ಆಗದೆ ಉಳಿದಿವೆ. ಒಂದೆಡೆ ಬೆಲೆ ಕುಸಿಯುತ್ತಿದ್ದರೆ, ಇನ್ನೊಂದೆಡೆ ನಿರ್ಮಾಣದ ಖರ್ಚಿಗೆ ಮಾಡಲಾದ ಸಾಲದ ಮೇಲಿನ ಬಡ್ಡಿ ಬೆಳೆಯುತ್ತಿದೆ. ಏನು ಮಾಡುವುದೋ ತಿಳಿಯದಾಗಿದೆ ಎಂದು ಹಲವು ಉದ್ಯಮಿಗಳು ಕೈ–ಕೈ ಹಿಚುಕಿಕೊಳ್ಳುತ್ತಿದ್ದಾರೆ.

‘ಸಾರಕ್ಕಿ ಮತ್ತು ಬಾಣಸವಾಡಿಯಲ್ಲಿ ನಡೆದ ಬೆಳವಣಿಗೆಯಿಂದ ಭಾರತೀಯ ರಿಯಲ್‌ ಎಸ್ಟೇಟ್‌ ಡೆವಲೆಪರ್‌ಗಳ ಸಂಘಗಳ ಒಕ್ಕೂಟ (ಕ್ರೆಡಾಯ್‌)ದ ಸದಸ್ಯರು ಅಭಿವೃದ್ಧಿಪಡಿಸಿದ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಏಕೆಂದರೆ, ನಮ್ಮ ಸದಸ್ಯರು ಅಧಿಕೃತ ದಾಖಲೆಗಳನ್ನು ಹೊಂದದ ಹೊರತು ಯಾವ ಯೋಜನೆಯನ್ನೂ ಆರಂಭಿಸುವುದಿಲ್ಲ’ ಎನ್ನುತ್ತಾರೆ ಕ್ರೆಡಾಯ್‌ ಪ್ರಧಾನ ಕಾರ್ಯದರ್ಶಿ ಸುರೇಶ್‌ ಹರಿ.

‘ಜೆ.ಪಿ. ನಗರದಲ್ಲಿ ಪ್ರತಿ ಚದರ ಅಡಿಗೆ ₹ 9,350ರವರೆಗೆ ಮಾರ್ಗಸೂಚಿ ದರವಿದೆ. ಆದರೆ, ಮಾರುಕಟ್ಟೆ ದರ ಪ್ರತಿ ಚದರ ಅಡಿಗೆ ಕನಿಷ್ಠ ₹ 10,000 ಇದೆ. ಹಾಗೆಯೇ ಬಾಣಸವಾಡಿ ಭಾಗದಲ್ಲಿ ಮಾರ್ಗಸೂಚಿ ದರ ₹ 4,400ವರೆಗೆ ಇದ್ದು, ಮಾರುಕಟ್ಟೆ ಮೌಲ್ಯ ₹ 6,000 ಮೇಲಿದೆ. ಇತ್ತೀಚಿನ ಬೆಳವಣಿಗೆಗಳಿಂದ ಮಾರುಕಟ್ಟೆ ದರದಲ್ಲಿ ಶೇ 10ರಷ್ಟು ಇಳಿಕೆಯಾಗಿದೆ. ಈ ಪರಿಪಾಠ ಇನ್ನೂ ಕೆಲವು ವಾರ ಮುಂದುವರಿಯುವ ಸಾಧ್ಯತೆ ಇದೆ’ ಎಂದು ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹೇಳುತ್ತಾರೆ.

‘ಕಾರ್ಯಾಚರಣೆಯಲ್ಲಿ ನಡೆದ ಘಟನಾವಳಿ ಜನಮಾನಸದಿಂದ ಅಳಿಸುತ್ತಾ ಹೋದಂತೆ ಉದ್ಯಮ ಮತ್ತೆ ಚೇತರಿಸಿಕೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ನೋಡಬೇಕಾದ ಪ್ರಮುಖ ದಾಖಲೆಗಳು
ಯಾವುದೇ ಆಸ್ತಿಯನ್ನು ಖರೀದಿಸುವ ಮುನ್ನ ಗ್ರಾಹಕರು ಮುಖ್ಯವಾಗಿ ಐದು ದಾಖಲೆಗಳನ್ನು ಪರಿಶೀಲಿಸಬೇಕು ಎಂಬ ಸಲಹೆ ನೀಡುತ್ತಾರೆ ರಿಯಲ್‌ ಎಸ್ಟೇಟ್‌ ತಜ್ಞರು. ಅವುಗಳೆಂದರೆ: ಭೂದಾಖಲೆ (ಮುಖ್ಯವಾಗಿ ನಿವೇಶನದ ಸರ್ವೆ ಸಂಖ್ಯೆ), ಕಟ್ಟಡದ ನಕ್ಷೆಗೆ ಬಿಬಿಎಂಪಿ ಇಲ್ಲವೆ ಬಿಡಿಎಯಿಂದ ಮಂಜೂರಾತಿ ಪಡೆದ ಪತ್ರ, ಕಾರ್ಯಾರಂಭದ ಪ್ರಮಾಣಪತ್ರ (ಸಿ.ಸಿ), ವಾಸದ ಪ್ರಮಾಣಪತ್ರ (ಒ.ಸಿ) ಮತ್ತು ಬೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ಕಲ್ಪಿಸಿದ ಬಿಲ್‌. ಆಸ್ತಿಯು ಕೆರೆ ಪ್ರದೇಶದಿಂದ ಹೊರಗಿದೆಯೇ, ಅದಕ್ಕೆ ಸಂಬಂಧಿಸಿದ ಕಾನೂನು

ಬದ್ಧ ಪ್ರಕ್ರಿಯೆಗಳನ್ನೆಲ್ಲ ಪೂರೈಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಈ ದಾಖಲೆಗಳು ಅಗತ್ಯವಾಗಿ ಬೇಕು ಎಂದು
ಅವರು ವಿವರಿಸುತ್ತಾರೆ.

ಯೋಜನೆ ಪೂರ್ಣಗೊಳ್ಳುವ ಮುನ್ನವೇ ಕಟ್ಟಡ ಖರೀದಿಗೆ ಒಪ್ಪಂದ ಮಾಡಿಕೊಂಡರೆ ಪಾವತಿಸಿದ ಮೊತ್ತಕ್ಕೆ ಬಿಲ್ಡರ್‌ಗಳಿಂದ ತಕ್ಷಣ ಬ್ಯಾಂಕ್‌ ಗ್ಯಾರಂಟಿ ಪಡೆಯಬೇಕು ಎಂದು ಅವರು ಸಲಹೆ ನೀಡುತ್ತಾರೆ.

ಮುಖ್ಯಾಂಶಗಳು
* ಕೆರೆಗಳ ಸನಿಹದಲ್ಲಿವೆ 3,000 ಅಪಾರ್ಟ್‌ಮೆಂಟ್‌

* ನೈಜ ದಾಖಲೆಗಳಿದ್ದರೂ ಆಸ್ತಿ ಖರೀದಿಗೆ ಹಿಂದೇಟು
* ಕೆರೆಗಳ ಹತ್ತಿರ ಕುಗ್ಗಿದ ಬೇಡಿಕೆ; ಇಳಿದ ಆಸ್ತಿ ಮೌಲ್ಯ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.