ADVERTISEMENT

ಕೆಲಸದ ಒತ್ತಡ: ಬ್ಯಾಂಕ್‌ ನೌಕರರು ಸುಸ್ತು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2016, 19:55 IST
Last Updated 16 ನವೆಂಬರ್ 2016, 19:55 IST
ಕೆನರಾ ಬ್ಯಾಂಕ್‌ ಶಾಖೆಯಲ್ಲಿ ನೋಟು ಬದಲಾವಣೆ ಮಾಡಿಸಿಕೊಳ್ಳಲು ನೆರೆದಿದ್ದ ಜನ
ಕೆನರಾ ಬ್ಯಾಂಕ್‌ ಶಾಖೆಯಲ್ಲಿ ನೋಟು ಬದಲಾವಣೆ ಮಾಡಿಸಿಕೊಳ್ಳಲು ನೆರೆದಿದ್ದ ಜನ   

ಬೆಂಗಳೂರು: ದೊಡ್ಡ ಮೊತ್ತದ  ನೋಟುಗಳ ರದ್ದು ಮಾಡಿದ್ದರಿಂದಾಗಿ ನಗರದ ಬ್ಯಾಂಕ್‌ಗಳಲ್ಲಿ ಸರತಿ ಸಾಲು ಇನ್ನೂ ಕರಗಿಲ್ಲ. ಕಳೆದೊಂದು ವಾರದಲ್ಲಿ ಕೆಲಸದ ಒತ್ತಡದಿಂದ ಬ್ಯಾಂಕ್‌ ನೌಕರರು ಹೈರಾಣಾಗಿದ್ದಾರೆ.

‘ನೋಟು ಹಿಂದಕ್ಕೆ ಪಡೆಯುವ ಕುರಿತು ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡುವವರೆಗೂ ನಮಗೆ ಈ ಬದಲಾವಣೆ ಬಗ್ಗೆ ಗೊತ್ತಿರಲಿಲ್ಲ. ಅವರ ಹೇಳಿಕೆ ನೊಡಿದ ಬಳಿಕ ಮಾನಸಿಕವಾಗಿ ನಾವು ಸನ್ನದ್ಧರಾದೆವು’ ಎಂದು ಸಿಂಡಿಕೇಟ್‌ ಬ್ಯಾಂಕಿನ ಬಹುಮಹಡಿ ಕಟ್ಟಡ ಶಾಖೆಯ ವ್ಯವಸ್ಥಾಪಕ ಎ. ನಾಗೇಶ್‌ ತಿಳಿಸಿದರು.

‘ನವೆಂಬರ್‌ 9ರಂದು ನಮ್ಮ ಬ್ಯಾಂಕಿನ ಹಿರಿಯ ಅಧಿಕಾರಿಗಳು ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು, ಜನಜಂಗುಳಿಯನ್ನು ಹೇಗೆ ನಿಭಾಯಿಸಬೇಕು ಎಂದು  ಮಾರ್ಗದರ್ಶನ ನೀಡಿದರು. ಆದರೆ, ನಾವು ನಿರೀಕ್ಷೆ ಮಾಡಿದ್ದಕ್ಕಿಂತ 10 ಪಟ್ಟು ಹೆಚ್ಚು ಜನ ಬ್ಯಾಂಕಿಗೆ ಲಗ್ಗೆ ಇಟ್ಟರು. ಹಾಗಾಗಿ ಅವರನ್ನು ನಿಭಾಯಿಸಲು ನಿಜಕ್ಕೂ ಹರಸಾಹಸಪಟ್ಟೆವು’ ಎಂದು ಅವರು ತಿಳಿಸಿದರು.

‘ನಮಗೆ ₹ 4 ಸಾವಿರ ಸಾಲುವುದಿಲ್ಲ. ಮನೆಯಲ್ಲಿ ಮದುವೆ ಇದೆ, ನಮ್ಮ ದುಡ್ಡು ನಮಗೇ ಕೊಡುವುದಿಲ್ಲ ಎಂದರೆ ಹೇಗೆ ಎಂದೆಲ್ಲ ಗ್ರಾಹಕರು ತಗಾದೆ ತೆಗೆದರು. ನಮ್ಮ ಶಾಖೆಯಲ್ಲಿ ಇಬ್ಬರು ಗುಮಾಸ್ತರು, ಒಬ್ಬರು ಅಧಿಕಾರಿ ಹಾಗೂ ವ್ಯವಸ್ಥಾಪಕನಾದ ನಾನು ಮಾತ್ರ ಇದ್ದೇವೆ. ಹಾಗಾಗಿ ಇಷ್ಟೊಂದು ಜನರನ್ನು ನಿಭಾಯಿಸಲು ಕಷ್ಟವಾಯಿತು’ ಎಂದರು.

‘ಆದರೂ ತಾಳ್ಮೆಯಿಂದ ‘ಇದು ಕೇಂದ್ರ ಸರ್ಕಾರದ ನಿರ್ಧಾರ’ ಎಂದು ಜನರನ್ನು ಮನವರಿಕೆ ಮಾಡಿದೆವು. ನಮ್ಮ ಶಾಖೆಗೆ ಬರುವವರ ಪೈಕಿ ಹೆಚ್ಚಿನವರು ಸುಶಿಕ್ಷಿತರು. ಅವರು ಕೇಳುವ ಪ್ರಶ್ನೆಗೆ ಉತ್ತರ ನೀಡಿದರೂ ಜಗಳಕ್ಕೆ ನಿಲ್ಲುತ್ತಿದ್ದರು.  ಇದರಿಂದಾಗಿ ನಮ್ಮ ಸಿಬ್ಬಂದಿ ಸಹಜವಾಗಿ ಒತ್ತಡ ಅನುಭವಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ನಮ್ಮಲ್ಲಿ ದಿನಕ್ಕೆ ಹೆಚ್ಚೆಂದರೆ ₹ 20 ಲಕ್ಷದಷ್ಟು ವ್ಯವಹಾರ ನಡೆಯುತ್ತಿತ್ತು. ಕೋಟ್ಯಂತರ ವ್ಯವಹಾರ ನಡೆಯುವ ಕೆಲವು ಶಾಖೆಗಳಲ್ಲಿ ಸಿಬ್ಬಂದಿ ಮನೆಗೆ ಮರಳುವಾಗ ರಾತ್ರಿ 10 ರಿಂದ 11 ಗಂಟೆ ಆಗುತ್ತಿದೆ.  ಊಟ, ಉಪಾಹಾರಕ್ಕೂ  ಬಿಡುವು ಸಿಗುತ್ತಿಲ್ಲ. ಅರ್ಧ ತಾಸು ವಿರಾಮ ಇರುತ್ತಿತ್ತು ಈಗ 15– 20 ನಿಮಿಷದಲ್ಲಿ ಗಡಿಬಿಡಿಯಲ್ಲಿ ಊಟ ಮುಗಿಸಬೇಕು. ಅಷ್ಟರಲ್ಲಿ ಮಾರುದ್ದ ಸಾಲು ಇರುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.

‘ರಜೆ ಇಲ್ಲದೆ ಇಷ್ಟೊಂದು ಒತ್ತಡದಲ್ಲಿ ಕೆಲಸ ಮಾಡುವುದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ಕಚೇರಿಯ ಒಬ್ಬರು ಸಿಬ್ಬಂದಿ ದೀರ್ಘ ರಜೆ ಹಾಕಿದ್ದರು.  ಆರ್ಥಿಕ ತುರ್ತುಪರಿಸ್ಥಿತಿ  ಸಲುವಾಗಿ  ಅವರ ರಜೆಯನ್ನು ರದ್ದು ಪಡಿಸಿ ವಾಪಸ್‌ ಕರೆಯಿಸಿದ್ದೇವೆ’ ಎಂದು ಅವರು ವಿವರ ನೀಡಿದರು.

ಖೋಟಾನೋಟು ಸಿಕ್ಕಿದೆ: ‘ಹಣವನ್ನು ಯಂತ್ರದಲ್ಲಿ ಲೆಕ್ಕ ಮಾಡಿ ಪಡೆದರೆ ಖೋಟಾನೋಟು ಪತ್ತೆ ಹಚ್ಚುವುದು ಸುಲಭ. ನಾವು ಕೈಯಲ್ಲೇ ಲೆಕ್ಕ ಮಾಡಬೇಕಾಗಿರುವುದರಿಂದ ಖೋಟಾನೋಟುಗಳ ಬಗ್ಗೆಯೂ ಎಚ್ಚರ ವಹಿಸಬೇಕು. ಈವರೆಗೆ ಮೂರು ಖೋಟಾನೋಟು ಸಿಕ್ಕಿವೆ’ ಎಂದು ತಿಳಿಸಿದರು.

ಕೆಟ್ಟದಾಗಿ ಬೈತಾರೆ: ‘ಕೆಲವು ಗ್ರಾಹಕರಂತೂ ತೀರಾ ಅವಾಚ್ಯವಾಗಿ ಬೈಯುತ್ತಾರೆ. ಜನರ ಸಮಸ್ಯೆಯನ್ನು ಮೇಲಧಿಕಾರಿಗಳಿಗೆ ತಿಳಿಸಿ, ದುಡ್ಡಿಲ್ಲದಿದ್ದರೆ ಬ್ಯಾಂಕ್‌ ಏಕೆ ತೆರೆದಿದ್ದೀರಿ ಎಂದೆಲ್ಲಾ ತರಾಟೆಗೆ ತೆಗೆದುಕೊಳ್ಳುತ್ತಾರೆ. ಎಲ್ಲವನ್ನೂ ಸಹಿಸಿಕೊಂಡು ಕೆಲಸ ಮಾಡಬೇಕಿದೆ. ಒತ್ತಡದ ಸಂದರ್ಭದಲ್ಲೂ ನಾವು ಯಾವತ್ತೂ ತಾಳ್ಮೆ ಕಳೆದುಕೊಂಡಿಲ್ಲ’ ಎಂದು ಭಾರತೀಯ ಸ್ಟೇಟ್‌ ಬ್ಯಾಂಕಿನ ಮಲ್ಲೇಶ್ವರ ಶಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮೊದಲ ಎರಡು ದಿನ ಹಣ ಚಲಾವಣೆಗೆ ಸಮಸ್ಯೆ ಆಗಲಿಲ್ಲ. ಆದರೆ,  ಮೂರನೇ ದಿನದಿಂದ ನಮಗೂ 100ರ ನೋಟಿನ ಕೊರತೆ ಎದುರಾಯಿತು. ನಾವು ಗ್ರಾಹಕರಿಗೆ 100ರ ನೋಟು ನೀಡಿದ್ದಕ್ಕೆ ಪ್ರತಿಯಾಗಿ ಗ್ರಾಹಕರಿಂದ ನಮಗೆ ನೋಟುಗಳು ಬರುತ್ತಿಲ್ಲ. ಹಾಗಾಗಿ ಒಬ್ಬ ವ್ಯಕ್ತಿಗೆ ₹ 4,500 ಬದಲಾಯಿಸಲು ಅವಕಾಶ ಇದ್ದರೂ ಅಷ್ಟು ಹಣವನ್ನು ನೀಡಲು ಆಗುತ್ತಿಲ್ಲ. ಹಾಗಾಗಿ ಗ್ರಾಹಕರಿಗೆ ಚಿಲ್ಲರೆ ನೀಡುವುದೂ ಸಮಸ್ಯೆಯಾಗಿದೆ’ ಎಂದು ಅವರು ಹೇಳಿದರು.

‘ಈಗ ನಾವು ಕಚೇರಿ ಆರಂಭಕ್ಕೆ ಒಂದು ತಾಸು ಮುಂಚೆಯ ಹಾಜರಿರುತ್ತೇವೆ. ನಗದು ಲಭ್ಯತೆ, ನಗದು ಬದಲಾವಣೆಗೆ ಸೂಕ್ತ ಅರ್ಜಿ ನಮೂನೆ ಲಭ್ಯ ಇದೆಯೇ ಎಂದೆಲ್ಲ ಪರಿಶೀಲನೆ ಮಾಡಿಕೊಳ್ಳುತ್ತೇವೆ. ಸಂಜೆ ಕಚೇರಿ ಬಿಡುವಾಗಲೂ ವಿಳಂಬವಾಗುತ್ತಿದೆ’ ಎಂದು ಕೆನರಾ ಬ್ಯಾಂಕಿನ ಶ್ರೀರಾಮಪುರ  ಶಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಮೊದಲು ನಾವು ₹ 500 ಹಾಗೂ ₹ 1000 ನೋಟುಗಳನ್ನು ಬದಲಾಯಿಸಲು  ಪಡೆಯುವಾಗ ಅದರ ವಿವರಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕಿರಲಿಲ್ಲ. ಈಗ ಅದನ್ನೂ ಮಾಡಬೇಕು. ಇದಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೂ ಜನ ನಮ್ಮನ್ನು ಬೈಯುತ್ತಾರೆ.  ವ್ಯವಹಾರ ಮುಗಿದ ಬಳಿಕ ಇಡೀ ದಿನದ ವ್ಯವಹಾರದ ಬಗ್ಗೆ ಲೆಕ್ಕಾಚಾರಗಳು ಸರಿಯಾಗಿದೆಯೇ ಪರಿಶೀಲಿಸಬೇಕು’ ಎಂದು  ತಿಳಿಸಿದರು.

‘ಮೊದಲ ಎರಡು ದಿನ ಸಂಜೆ 6.30ರ ವರೆಗೆ ನೋಟು ವಿನಿಮಯ ಮಾಡಿಕೊಟ್ಟೆವು. ಕೆಲಸ ಮುಗಿಸಿ ಮನೆಗೆ ತೆರಳುವಾಗ 12 ಗಂಟೆ ಆಗಿತ್ತು. ಈಗ ಪ್ರತಿನಿತ್ಯ ಮನೆಗೆ ಹೊರಡುವಾಗ ರಾತ್ರಿ 9 ದಾಟಿರುತ್ತದೆ. ಕೆಲಸದ ಒತ್ತಡದಿಂದ ಇಬ್ಬರು ನೌಕರರು ರಜೆ ಹಾಕಿ ಹೋಗಿದ್ದಾರೆ’ ಎಂದು ಕೆನರಾ ಬ್ಯಾಂಕಿನ ಕಂಟೋನ್‌ಮೆಂಟ್‌ ಶಾಖೆಯ ಸಹಾಯಕ ಮುಖ್ಯ ವ್ಯವಸ್ಥಾಪಕ ಪಿ.ವಿ. ಕಾಮತ್‌ ತಿಳಿಸಿದರು.

‘₹2 ಸಾವಿರ ಮುಖಬೆಲೆಯ ನೋಟು ನಮಗೂ ಹೊಸತು. ಲೆಕ್ಕಾಚಾರದಲ್ಲಿ ಹೆಚ್ಚು ಕಡಿಮೆ ಆಗುವುದು ಉಂಟು.  ಲೆಕ್ಕಾಚಾರ ತಪ್ಪಾಗಿ ಕೆಲವು ನೌಕರರು ದಿನಕ್ಕೆ ₹2 ಸಾವಿರದಿಂದ ₹3 ಸಾವಿರದವರೆಗೆ ಭರಿಸುತ್ತಿದ್ದಾರೆ. ಕೆಲಸದ ಒತ್ತಡದ ಜತೆಗೆ ಇದನ್ನೂ ಭರಿಸಬೇಕಿದೆ’ ಎಂದು ಅವರು ಹೇಳಿದರು.

‘ಕೆಲಸದ ಒತ್ತಡದಿಂದ ಕೈಗಳು ನಡುಗಲು ಆರಂಭಿಸಿವೆ. ಇನ್ನೆಷ್ಟು ದಿನ ಇದನ್ನು ಸಹಿಸಿಕೊಳ್ಳಬೇಕೋ ಎಂಬುದು ಗೊತ್ತಾಗುತ್ತಿಲ್ಲ. ರಜೆಗಳು ಸಿಗುತ್ತಿಲ್ಲ’ ಎಂದು ಸಿಂಡಿಕೇಟ್‌ ಬ್ಯಾಂಕಿನ ಗಾಂಧಿನಗರ ಶಾಖೆಯ ನೌಕರರೊಬ್ಬರು ಅಳಲು ತೋಡಿಕೊಂಡರು.

ವ್ಯವಹಾರ ಸ್ಥಗಿತ
ಈಗ ಎಲ್ಲ ಬ್ಯಾಂಕ್‌ಗಳಲ್ಲಿ ದೊಡ್ಡ ಮೊತ್ತದ ನೋಟುಗಳ ವಿನಿಮಯ ನಡೆಯುತ್ತಿದೆ. ಇದರಿಂದಾಗಿ ಸಾಲ ನೀಡುವುದು, ಸಾಲ ವಸೂಲಾತಿ ಮತ್ತಿತರ ದೈನಂದಿನ ವ್ಯವಹಾರಗಳಂತೂ ಬಹುತೇಕ ಸ್ಥಗಿತವಾಗಿವೆ ಎಂದು ಕೆಲವು ಬ್ಯಾಂಕ್‌ಗಳ ಅಧಿಕಾರಿಗಳು ತಿಳಿಸಿದರು.

ಇದ್ದುದು ಒಂದೇ ಯಂತ್ರ
‘ನಮ್ಮ ಶಾಖೆಯಲ್ಲಿ ಹಣ ಎಣಿಸುವ ಒಂದೇ ಯಂತ್ರ ಇದೆ. ಅದನ್ನು ನಗದು ಶಾಖೆಯಲ್ಲಿ  ಬಳಸುತ್ತಿದ್ದೆವು. ಬದಲಿ ನೋಟು ನೀಡುವ ಕೌಂಟರ್‌ಗೆ  ಪ್ರತ್ಯೇಕ ಯಂತ್ರ ಇರಲಿಲ್ಲ. ಹಾಗಾಗಿ  4 ಸಾವಿರ ನಗದು ನೀಡಲು 100ರ 40 ನೋಟುಗಳನ್ನು ಎಣಿಸಬೇಕು. ಲೆಕ್ಕಾಚಾರ ತಪ್ಪಿದರೆ ನಮ್ಮ ಸಂಬಳದಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ. ಈ ಆತಂಕದ ನಡುವೆ ನಾವು ಕೆಲಸ ಮಾಡುತ್ತಿದ್ದೇವೆ. ದಿನವಿಡೀ ಎಚ್ಚರದಿಂದ ಇರಬೇಕಿದೆ’ ಎಂದು ಆ ಶಾಖೆಯ ನೌಕರರೊಬ್ಬರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.