ADVERTISEMENT

ಕೇಂದ್ರ ಗ್ರಂಥಾಲಯ ನವೀಕೃತ ಕಟ್ಟಡ ಉದ್ಘಾಟನೆ

ಎರಡು ವರ್ಷ ತಡವಾದ ಶತಮಾನೋತ್ಸವ ಆಚರಣೆ * 1915ರಲ್ಲಿ ಈ ಗ್ರಂಥಾಲಯ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 20:00 IST
Last Updated 23 ಏಪ್ರಿಲ್ 2017, 20:00 IST
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ ಕುಮಾರ್‌ ಎಸ್‌. ಹೊಸಮನಿ ಅವರು ನವೀಕೃತ ಕಟ್ಟಡದ ಕುರಿತು ಸಚಿವ ತನ್ವೀರ್ ಸೇಠ್‌ ಅವರಿಗೆ ವಿವರಿಸಿದರು. ಬಿಬಿಎಂಪಿ ಸದಸ್ಯ ಆರ್‌. ವಸಂತ್‌ ಕುಮಾರ್‌ ಮತ್ತು  ಗ್ರಂಥಾಲಯ ನಿರೀಕ್ಷಕ ಬಸವರಾಜ್‌ ತಲ್ವಾರ್‌ ಇದ್ದರು  –ಪ್ರಜಾವಾಣಿ ಚಿತ್ರ
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ ಕುಮಾರ್‌ ಎಸ್‌. ಹೊಸಮನಿ ಅವರು ನವೀಕೃತ ಕಟ್ಟಡದ ಕುರಿತು ಸಚಿವ ತನ್ವೀರ್ ಸೇಠ್‌ ಅವರಿಗೆ ವಿವರಿಸಿದರು. ಬಿಬಿಎಂಪಿ ಸದಸ್ಯ ಆರ್‌. ವಸಂತ್‌ ಕುಮಾರ್‌ ಮತ್ತು ಗ್ರಂಥಾಲಯ ನಿರೀಕ್ಷಕ ಬಸವರಾಜ್‌ ತಲ್ವಾರ್‌ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು:  ಶತಮಾನ ಕಂಡ ‘ರಾಜ್ಯ ಕೇಂದ್ರ ಗ್ರಂಥಾಲಯ’ ನವೀಕರಣಗೊಂಡು ಹೊಚ್ಚ ಹೊಸದರಂತೆ ಕಂಗೊಳಿಸುತ್ತಿದೆ. ಇ–ಗ್ರಂಥಾಲಯ ಸೌಲಭ್ಯದೊಂದಿಗೆ ಈಗಿನ ಮಕ್ಕಳ ಅವಶ್ಯಕತೆಗೆ ತಕ್ಕಂತೆ ಇದನ್ನು ಸಜ್ಜುಗೊಳಿಸಲಾಗಿದೆ.

ಕಬ್ಬನ್‌ ಉದ್ಯಾನದಲ್ಲಿ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಭಾನುವಾರ ನಡೆಯಿತು. ಇದೇ ವೇಳೆ ನವೀಕೃತ ಕಟ್ಟಡವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಉದ್ಘಾಟಿಸಿದರು.

1915ರಲ್ಲಿ ಈ ಗ್ರಂಥಾಲಯ ನಿರ್ಮಾಣವಾಗಿತ್ತು. 2015ರಲ್ಲೇ ಗ್ರಂಥಾಲಯ ನೂರು ವರ್ಷ ಪೂರೈಸಿದ್ದು, ಎರಡು ವರ್ಷ ತಡವಾಗಿ ಇಲಾಖೆ ಶತಮಾನೋತ್ಸವ ಕಾರ್ಯಕ್ರಮ ನಡೆಸಿದೆ.

ADVERTISEMENT

ಕೇಂದ್ರ ಗ್ರಂಥಾಲಯ ಯೋಜನೆ ಹಾಗೂ ರಾಜ್ಯ ಸರ್ಕಾರದ ನೆರವಿನೊಂದಿಗೆ ₹ 1.36 ಕೋಟಿ ವೆಚ್ಚದಲ್ಲಿ   ನವೀಕರಣ ಕೆಲಸ ಆಗಿದೆ. ಶತಮಾನದ ಕಟ್ಟಡವಾಗಿರುವುದರಿಂದ ಅದರ ವಿನ್ಯಾಸಕ್ಕೆ ಯಾವುದೇ ಧಕ್ಕೆ ಮಾಡಿಲ್ಲ.  ಹೆಂಚುಗಳ ಬದಲಾವಣೆ, ಬಣ್ಣ ಬಳಿಯುವುದು ಮತ್ತು ಕಟ್ಟಡ ಬಲಪಡಿಸುವ  ಕಾಮಗಾರಿಗಳನ್ನು ಮಾತ್ರ ಕೈಗೊಳ್ಳಲಾಗಿದೆ.

ಇ– ಗ್ರಂಥಾಲಯ: ಕೇಂದ್ರ ಗ್ರಂಥಾಲಯದಲ್ಲಿ 3.64 ಲಕ್ಷ  ಪುಸ್ತಕಗಳು ಹಾಗೂ ಜಿಲ್ಲಾ ಕೇಂದ್ರ ಗ್ರಂಥಾಲಯಗಳಲ್ಲಿ 1 ಲಕ್ಷ ಪುಸ್ತಕಗಳಿವೆ. ಈ ಗ್ರಂಥಾಲಯ
ಗಳಲ್ಲಿರುವ ಮರು ಮುದ್ರಣ ಮಾಡಲು ಸಾಧ್ಯವಾಗದ ಪುಸ್ತಕಗಳನ್ನು ಇ– ಗ್ರಂಥಾಲಯಕ್ಕೆ ಸೇರಿಸುವ ಯೋಜನೆಯನ್ನು ಇಲಾಖೆ ಹೊಂದಿದೆ.
‘ಮೊದಲ ಹಂತದಲ್ಲಿ 50 ಸಾವಿರ ಪುಸ್ತಕಗಳನ್ನು ಅಂತರ್ಜಾಲದಲ್ಲಿ ಅಳವಡಿಸಲಾಗಿದೆ. ವೃತ್ತಿ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಇದಕ್ಕೆ ಸೇರಿಸುತ್ತೇವೆ’ ಎಂದು ಸೇಠ್‌ ತಿಳಿಸಿದರು.

ಕಾಲೇಜುಗಳಲ್ಲಿ ಗ್ರಂಥಾಲಯ: ‘ರಾಜ್ಯದಲ್ಲಿರುವ 1,204 ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪ್ರತ್ಯೇಕ ಗ್ರಂಥಾಲಯ ಸ್ಥಾಪಿಸಲಾಗುತ್ತದೆ. ಮೊದಲ ಹಂತದಲ್ಲಿ 396 ಕಾಲೇಜುಗಳಲ್ಲಿ ಈ ಯೋಜನೆ ಪ್ರಾರಂಭಿಸಲಾಗಿದೆ’  ಎಂದರು.

ಪ್ರತ್ಯೇಕ ಕೇಂದ್ರ ಗ್ರಂಥಾಲಯ: ‘ಚೆನ್ನೈ ಮತ್ತು ಕೊಲ್ಕತ್ತಾ ನಗರಗಳಲ್ಲಿರುವ ಮಾದರಿಯಲ್ಲಿಯೇ ನಗರದಲ್ಲೂ ಪ್ರತ್ಯೇಕ ಸುಸಜ್ಜಿತ ಕೇಂದ್ರ ಗ್ರಂಥಾಲಯ ನಿರ್ಮಿಸುತ್ತೇವೆ. ಈ ಗ್ರಂಥಾಲಯದಲ್ಲಿ  ಪುಸ್ತಕಗಳನ್ನು ಓದಲು ಹಿರಿಯ ನಾಗರಿಕರು, ಮಹಿಳೆಯರು, ಪುರುಷರಿಗೆ  ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ.  ಮಕ್ಕಳಿಗಾಗಿ ಪ್ರತ್ಯೇಕ ವಿಭಾಗ ಆರಂಭಿಸುವ ಆಲೋಚನೆ ಇದೆ’ ಎಂದು ಹೇಳಿದರು.

ಅಂತರ್ಜಾಲ ಕೇಂದ್ರವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಹಳೆಯ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ಇ- ಗ್ರಂಥಸೂಚಿಯ ಸಿ.ಡಿ., ಶತಮಾನೋತ್ಸವ ಗೀತೆಯ ಸಿ.ಡಿ., ‘ಜ್ಞಾನದೇಗುಲ 100’ ಸಾಕ್ಷ್ಯಚಿತ್ರದ ಸಿ.ಡಿ., ಶತಮಾನೋತ್ಸವ ಸ್ಮರಣಾರ್ಥ ಅಂಚೆ ಚೀಟಿ ಮತ್ತು ವಿಶೇಷ ಲಕೋಟೆ ಬಿಡುಗಡೆ ಮಾಡಲಾಯಿತು.

ಪಾಲಿಕೆಗಳಿಂದ ಸೆಸ್ ಬಾಕಿ ಬಂದಿಲ್ಲ
‘ರಾಜ್ಯದ 214 ಸ್ಥಳೀಯ ಸಂಸ್ಥೆ ಹಾಗೂ 11 ಪಾಲಿಕೆಗಳಲ್ಲಿ ಸಂಗ್ರಹವಾಗುವ ಒಟ್ಟು ಆಸ್ತಿ ತೆರಿಗೆ ಮೇಲೆ  ಶೇ 6ರಷ್ಟು ಗ್ರಂಥಾಲಯ ಸೆಸ್‌ ಪಡೆಯಲು ಅವಕಾಶ ಇದೆ. ರಾಜ್ಯದಲ್ಲಿ ಒಟ್ಟು ₹422 ಕೋಟಿ ಸೆಸ್ ಬಾಕಿ ಇದೆ’ ಎಂದು ತನ್ವೀರ್ ಸೇಠ್‌ ಹೇಳಿದರು.

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದರಿಂದಲೇ (ಬಿಬಿಎಂಪಿ) ₹380 ಕೋಟಿ ಬಾಕಿ ಇದೆ. ಕಳೆದ ವರ್ಷ ಪಾಲಿಕೆ ₹50 ಕೋಟಿ ಪಾವತಿಸಿದೆ’ ಎಂದರು.

₹19 ಕೋಟಿ ವೆಚ್ಚದಲ್ಲಿ ಪುಸ್ತಕ ಖರೀದಿ
‘ವರ್ಷದಿಂದ ವರ್ಷಕ್ಕೆ ಪುಸ್ತಕಗಳ ಖರೀದಿಯನ್ನು ಹೆಚ್ಚಿಸುತ್ತಿದ್ದೇವೆ. 2016–17ನೇ ಸಾಲಿನಲ್ಲಿ ₹19 ಕೋಟಿ ವೆಚ್ಚದಲ್ಲಿ ಪುಸ್ತಕಗಳನ್ನು ಖರೀದಿಸಿದ್ದೇವೆ’ ಎಂದು ತನ್ವೀರ್‌ ಸೇಠ್‌ ತಿಳಿಸಿದರು.

‘ಪುಸ್ತಕಗಳ ಖರೀದಿಗಾಗಿ ಗ್ರಂಥಾಲಯ ಪ್ರಾಧಿಕಾರದಲ್ಲಿ ಸಮಿತಿ ರಚಿಸಲಾಗಿದ್ದು, ಮಾರ್ಚ್‌ ತಿಂಗಳಲ್ಲಿ ಖರೀದಿ ಪ್ರಕ್ರಿಯೆ ಮುಗಿದಿದೆ. ಕನ್ನಡ ಭಾಷೆಯ ದೊಡ್ಡ ಗ್ರಂಥಗಳನ್ನು ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.