ADVERTISEMENT

ಕೈಗಾರಿಕೆಗಳ ವಿರುದ್ಧ ಪ್ರಕರಣ

ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ವಿಫಲ

​ಪ್ರಜಾವಾಣಿ ವಾರ್ತೆ
Published 17 ಮೇ 2019, 19:40 IST
Last Updated 17 ಮೇ 2019, 19:40 IST
   

ಬೆಂಗಳೂರು: ರಾಸಾಯನಿಕಯುಕ್ತ ಕಲುಷಿತ ನೀರು ಹಾಗೂ ತ್ಯಾಜ್ಯ ನೀರನ್ನುನಿಯಮಾನುಸಾರ ಸಂಸ್ಕರಿಸದ 331 ಕೈಗಾರಿಕೆ ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ವಿರುದ್ಧ ‌ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಪ್ರಕರಣ ದಾಖಲಿಸಿ, ನೋಟಿಸ್ ಜಾರಿಮಾಡಿದೆ.ಅದೇ ರೀತಿ, ನಿಯಮ ಉಲ್ಲಂಘಿಸುತ್ತಿರುವರಿಗೆ ದಂಡದ ಬಿಸಿ ಮುಟ್ಟಿಸಲು ಮುಂದಾಗಿದೆ.

ಕೈಗಾರಿಕೆಗಳು ಹೊರಹಾಕುವ ರಾಸಾಯನಿಕಯುಕ್ತ ನೀರು ಸಂಸ್ಕರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ 2018ರಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶ ಹೊರಡಿಸಿತ್ತು. ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಪರಿಶೀಲನೆ ಮಾಡುವಂತೆಯೂ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್‌ಪಿಸಿಬಿ 44 ಅಧಿಕಾರಿಗಳ ವಿಶೇಷ ತಂಡವನ್ನು ರಚಿಸಿತ್ತು. ಕಳೆದ ಆರು ತಿಂಗಳಲ್ಲಿ ಅಧಿಕಾರಿಗಳು 5,656 ಘಟಕಗಳ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳು ನೀಡಿದ ವರದಿಯನ್ನು ಕೆಎಸ್‌ಪಿಸಿಬಿಯು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿದೆ. ಅನುಮೋದನೆ ಪಡೆದ ಕೈಗಾರಿಕೆಗಳಲ್ಲಿ 3,265 ಕೈಗಾರಿಕೆಗಳು ಸಂಸ್ಕರಣಾ ಘಟಕಗಳನ್ನು ಹೊಂದಿದೆ. 203 ಕೈಗಾರಿಕೆಗಳು ಈವರೆಗೂ ಘಟಕವನ್ನು ನಿರ್ಮಿಸಿಕೊಂಡಿಲ್ಲ. ಅದೇ ರೀತಿ, 68 ಘಟಕಗಳು ನಿಯಮವನ್ನು ಅನುಸರಿಸುತ್ತಿಲ್ಲ.‌

ADVERTISEMENT

ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ತ್ಯಾಜ್ಯ ನೀರಿನ ಸಂಸ್ಕರಣೆ ಕೂಡ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. 2,586 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿದ್ದು, 59 ಅನುಪಯುಕ್ತವಾಗಿವೆ. ಕಳೆದ ವರ್ಷ ಮಂಡಳಿಯು 99 ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿಗೆ ನೋಟಿಸ್ ಜಾರಿ ಮಾಡಿತ್ತು. ಕಲುಷಿತ ನೀರನ್ನು ನೇರವಾಗಿ ಜಲಮೂಲಗಳಿಗೆ ಬಿಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.

‘ಕೈಗಾರಿಕೆಗಳ ಕೊಳಚೆ ನೀರು ಸಂಸ್ಕರಣಾ ಘಟಕಗಳಲ್ಲಿ ಹೆಚ್ಚಾಗಿ ನಿಯಮ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಿಯಮ ಉಲ್ಲಂಘಿಸಿದವರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ’ ಎಂದು ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಮನೋಜ್ ಕುಮಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.