ADVERTISEMENT

ಕ್ಯೂಬಾ: ಸಮಸ್ಯೆಗಳ ನಡುವೆಯೂ ಲವಲವಿಕೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 20:10 IST
Last Updated 5 ಮಾರ್ಚ್ 2011, 20:10 IST

ಬೆಂಗಳೂರು: ‘ಸಮಾಜವಾದಿ ವ್ಯವಸ್ಥೆ ಹೊಂದಿರುವ ಕ್ಯೂಬಾ ದೇಶದಲ್ಲಿ ಬಡತನ ಇದೆ, ಅನೇಕ ಸಮಸ್ಯೆಗಳಿವೆ, ಕೆಲವೆಡೆ ತಾರತಮ್ಯವೂ ಇದೆ. ಆದರೆ ಅಲ್ಲಿನ ಜನ ಬಹಳ ಲವಲವಿಕೆಯಿಂದಿದ್ದಾರೆ. ಹಾಡುತ್ತ, ಕುಣಿಯುತ್ತ ಬದುಕನ್ನು ಅನುಭವಿಸುತ್ತಿದ್ದಾರೆ.’

ಶಿಕ್ಷಣ ತಜ್ಞ ಡಾ.ಜಿ. ರಾಮಕೃಷ್ಣ ಅವರು ಕ್ಯೂಬಾ ದೇಶದ ಇಂದಿನ ಪರಿಸ್ಥಿತಿಯನ್ನು ತಮ್ಮ ಮಾತುಗಳಲ್ಲಿ ಹಿಡಿದಿಟ್ಟ ಪರಿ ಇದು. ಭಾರತ ಕಮ್ಯುನಿಸ್ಟ್ ಪಕ್ಷ ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಿದ್ದ ‘ದಕ್ಷಿಣ ಅಮೆರಿಕ ಮತ್ತು ಕ್ಯೂಬಾ ದೇಶಗಳಲ್ಲಿನ ರಾಜಕೀಯ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಕುರಿತು ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಮ್ಮ ಕ್ಯೂಬಾ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು.

ಅಲ್ಲಿನ ಸಮಾಜದಲ್ಲಿ ಕಷ್ಟ ಇರಬಹುದು, ಆದರೆ ಕಾನೂನು ಪಾಲನೆ, ಊರು-ನಗರಗಳನ್ನು ಅಚ್ಚುಕಟ್ಟಾಗಿಡುವ ವಿಷಯದಲ್ಲಿ ಅವರು ಮುಂದಿದ್ದಾರೆ. ಅಲ್ಲಿನ ಆರೋಗ್ಯ ವ್ಯವಸ್ಥೆ ಪ್ರಪಂಚದಲ್ಲಿಯೇ ಅತ್ಯುತ್ತಮವಾದುದು. ಇದನ್ನು ವಿಶ್ವಸಂಸ್ಥೆ ಕೂಡಾ ಒಪ್ಪಿಕೊಂಡಿದೆ. ಸುಮಾರು 40-50 ದೇಶಗಳಿಂದ ವೈದ್ಯಕೀಯ ವಿಜ್ಞಾನ ಓದಲು ವಿದ್ಯಾರ್ಥಿಗಳು ಕ್ಯೂಬಾಕ್ಕೆ ಬರುತ್ತಾರೆ ಎಂದರು.

‘ಹೊಸತು’ ಮಾಸಪತ್ರಿಕೆಯ ಕೆ.ಎಸ್. ಪಾರ್ಥಸಾರಥಿ ಮಾತನಾಡಿ, ‘ಕ್ಯೂಬಾ ದೇಶ ಅಮೆರಿಕದ ದಬ್ಬಾಳಿಕೆಯ ವಿರುದ್ಧದ ಹೋರಾಟಕ್ಕೆ ಸ್ಫೂರ್ತಿಯಾಗಿದೆ’ ಎಂದರು. ಸಿಪಿಐನ ರಾಜ್ಯ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್ ಮತ್ತಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.