ADVERTISEMENT

ಕ್ಷಿಪಣಿ ತಯಾರಿಕೆಯಲ್ಲಿ ಸ್ವಾವಲಂಬನೆ ಅಗತ್ಯ...

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2011, 19:30 IST
Last Updated 16 ಏಪ್ರಿಲ್ 2011, 19:30 IST

ಬೆಂಗಳೂರು: ಭಾರತವು ಕ್ಷಿಪಣಿಗಳ ತಯಾರಿಕೆಯಲ್ಲಿ ಸ್ವಾವಲಂಬಿಯಾಗುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಹೆಚ್ಚು ಕಾಲ ವಿದೇಶಗಳ ಮೇಲೆ ಅವಲಂಬನೆಯಾಗುವುದು ಸರಿಯಲ್ಲ ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ಡಾ.ವಿ.ಕೆ. ಸಾರಸ್ವತ್ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.
 

ವಾಯುಪಡೆ ಒಕ್ಕೂಟದ ಕರ್ನಾಟಕ ಶಾಖೆ, ಏರೊನಾಟಿಕಲ್ ಸೊಸೈಟಿ ಆಫ್ ಇಂಡಿಯಾ ಮತ್ತು ಎಚ್‌ಎಎಲ್‌ನ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಏರ್‌ಚೀಫ್ ಮಾರ್ಷಲ್ ಎಲ್.ಎಂ.ಕತ್ರೆ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ‘21ನೇ ಶತಮಾನದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ’ ಕುರಿತು ಮಾತನಾಡಿದ ಅವರು, ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಗೆ ಅಗತ್ಯವಿರುವ ಕ್ಷಿಪಣಿಗಳ ತಯಾರಿಕೆಗೆ ಬೇಕಾಗುವ ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನು ಭಾರತದಲ್ಲಿಯೇ ತಯಾರಿಸುವಂತಾಗಬೇಕು ಎಂದರು.
 

ಸದ್ಯ ಕ್ಷಿಪಣಿಗಳ ತಯಾರಿಗೆ ಬೇಕಾಗುವ ಬಿಡಿ ಭಾಗಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವುದರಿಂದ ದುಬಾರಿ ವೆಚ್ಚವಾಗುತ್ತಿದೆ. ಅವುಗಳನ್ನು ನಮ್ಮಲ್ಲಿಯೇ ತಯಾರಿಸಿದರೆ ಕಡಿಮೆ ವೆಚ್ಚವಾಗುವುದರ ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಬಹುದಾಗಿದೆ. ಆದ್ದರಿಂದ ಸ್ಥಳೀಯವಾಗಿ ತಯಾರಿಸಲು ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರತಿಪಾದಿಸಿದರು.
 

ADVERTISEMENT

ಮುಂಬರುವ ದಿನಗಳಲ್ಲಿ ಭಾರತಕ್ಕೆ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಲಭ್ಯತೆ ಸವಾಲಾಗಿ ಪರಿಣಮಿಸಲಿದೆ. ವಿನ್ಯಾಸ ಸಾಮರ್ಥ್ಯ, ಮೂಲಸೌಕರ್ಯ, ಮೆಟಿರಿಯಲ್ ಮತ್ತು ಸೆನ್ಸಾರ್ ತಂತ್ರಜ್ಞಾನದಲ್ಲಿ ಹೆಚ್ಚಿನ ಮಾನವ ಸಂಪನ್ಮೂಲದ ಅಗತ್ಯವಿದೆ. ಆದ್ದರಿಂದ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ರಾಷ್ಟ್ರಗಳೊಂದಿಗೆ ಒಪ್ಪಂದ ಮಾಡಿಕೊಂಡು ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಆರಂಭಿಸುವ ಅಗತ್ಯವಿದೆ ಎಂದರು.
 

ಖಂಡಾಂತರ ಕ್ಷಿಪಣಿ ದಾಳಿಯನ್ನು ಎದುರಿಸುವ ಸಾಮರ್ಥ್ಯವುಳ್ಳ ಎರಡು ಹೊಸ ಕ್ಷಿಪಣಿಗಳನ್ನು ಭಾರತವು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಲಿದ್ದು (ಎಡಿ-1 ಮತ್ತು ಎಡಿ-2) ಇದು ಐದು ಸಾವಿರ ಕಿ.ಮೀ. ವ್ಯಾಪ್ತಿವರೆಗೂ ಕಾರ್ಯಾಚರಣೆ ನಡೆಸಲಿದೆ. 2014ರ ವೇಳೆಗೆ ಇದಕ್ಕೊಂದು ಸ್ಪಷ್ಟ ರೂಪ ಸಿಗಲಿದೆ ಎಂದರು.
 

ವಾಯುಪಡೆ ಒಕ್ಕೂಟದ ಕರ್ನಾಟಕ ಶಾಖೆಯ ಅಧ್ಯಕ್ಷ ಬಿ.ಯು.ಚೆಂಗಪ್ಪ ಸ್ವಾಗತಿಸಿದರು. ಏರೊನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ಅಧ್ಯಕ್ಷ ಮೋಹನ ರಾವ್, ಎಚ್‌ಎಎಲ್ ನಿರ್ದೇಶಕ ಅಗರವಾಲ್ ಇನ್ನಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.