ಬೆಂಗಳೂರು: ‘ಗದ್ಯದ ಮೂಲಕ ಅನುಭವ, ನೋವು, ದುಃಖವನ್ನು ವಿವರಿಸುವುದು ನಿಕಷಕ್ಕೆ ಒಡ್ಡಿಕೊಂಡಂತೆ’ ಎಂದು ಕವಿ ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು.
ಅವಿರತ ಪುಸ್ತಕ ಪ್ರಕಾಶನವು ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಟಿ.ಎಸ್. ದಕ್ಷಿಣಾಮೂರ್ತಿ ಅವರ ‘ನೆನೆವ ಮನ ಕಿರಿದಲ್ಲ’ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
‘ಸತ್ಯ ಹೇಳಲು ಅಸಾಮಾನ್ಯ ಧೈರ್ಯ, ಪ್ರಾಮಾಣಿಕತೆ ಬೇಕಾಗುತ್ತದೆ. ಅದು ದಕ್ಷಿಣಾಮೂರ್ತಿ ಅವರಲ್ಲಿದೆ. ತಾವು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವಾಗ ಅನುಭವಿಸಿದ ದುಃಖ, ಸಮಸ್ಯೆಗಳ ಕುರಿತು ಅವರು ಯಾವುದೇ ಮುಜುಗರವಿಲ್ಲದೇ ಕೃತಿಯಲ್ಲಿ ಬರೆದಿದ್ದಾರೆ’ ಎಂದರು.
‘ಕವಿತೆ ಬರೆಯುವುದು ನಿಗೂಢವಾದ ಕತ್ತಲು ಬೆಳಕಿನ ಆಟ. ಕವಿತೆಯಲ್ಲಿ ಸತ್ಯವನ್ನು ಹೇಳಿಯೂ ಹೇಳದಂತೆ ಪಾರಾಗಬಹುದು. ಆದರೆ, ಗದ್ಯದಲ್ಲಿ ಎಲ್ಲವನ್ನೂ ಸ್ಪಷ್ಟವಾಗಿ ಹೇಳಬೇಕಾಗುತ್ತದೆ’ ಎಂದು ಹೇಳಿದರು.
‘ದಕ್ಷಿಣಾಮೂರ್ತಿ ಅವರ ಹಿಂದಿನ ‘ಅಕಾಡೆಮಿಯ ಒಳಗು ಹೊರಗು’ ಕೃತಿ ಓದಿದ್ದೆ. ಅದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ರೀತಿಯ ಬರವಣಿಗೆ’ ಎಂದು ಅಭಿಪ್ರಾಯಪಟ್ಟರು. ವಿಮರ್ಶಕ ಗಿರಡ್ಡಿ ಗೋವಿಂದರಾಜ ಮಾತನಾಡಿ, ‘ನಾನು ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿದ್ದ ವೇಳೆ ದಕ್ಷಿಣಾಮೂರ್ತಿ ಅವರಂತಹ ಅಧಿಕಾರಿಗಳು ಇದ್ದುದರಿಂದಾಗಿ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು’ ಎಂದು ಹೇಳಿದರು.
‘ಪ್ರಸ್ತುತ ಎಲ್ಲ ಅಕಾಡೆಮಿಗಳಿಗೂ ಒಂದು ಕೋಟಿಗೂ ಹೆಚ್ಚು ಅನುದಾನ ಬರುತ್ತಿದೆ. ಆದರೆ, ಇಷ್ಟು ಪ್ರಮಾಣದ ಅನುದಾನ ಆಗ ಬರುತ್ತಿರಲಿಲ್ಲ. ಇರುವ ಅನುದಾನದಲ್ಲೇ ಉತ್ತಮ ಯೋಜನೆಗಳನ್ನು ರೂಪಿಸಿದ್ದೆವು’ ಎಂದರು. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ‘ದಕ್ಷಿಣಾಮೂರ್ತಿ ಅವರದು ನಿಷ್ಠುರವಾದ ವ್ಯಕ್ತಿತ್ವ. ಕೆಲಸದ ವಿಷಯದಲ್ಲಿ ಅವರು ಎಂದೂ ರಾಜಿಯಾಗುತ್ತಿರಲಿಲ್ಲ’ ಎಂದು ಹೇಳಿದರು.
‘ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾದಾಗ ಕೆಲವರು, ಈ ಹೆಣ್ಣುಮಗಳಿಂದ ಇಲಾಖೆಯನ್ನು ನಿರ್ವಹಿಸಲು ಸಾಧ್ಯವೇ? ಎಂದು ಹೀಗಳೆದರು. ದಕ್ಷಿಣಾಮೂರ್ತಿ ಅವರಂತಹ ದಕ್ಷ ಅಧಿಕಾರಿಗಳ ನೆರವಿನಿಂದಾಗಿ ಅದನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು’ ಎಂದರು.
‘ಪ್ರಸ್ತುತ ಅಕಾಡೆಮಿಗಳಿಗೆ ಬರುವ ಅನುದಾನ ಹೆಚ್ಚಾಗಿದೆ. ಆದರೆ, ಕಾರ್ಯಕ್ರಮಗಳು ಮಾತ್ರ ಸಮರ್ಪಕವಾಗಿ ನಡೆಯುತ್ತಿಲ್ಲ. ಅಲ್ಲದೇ, ಕಲಾವಿದರಿಗೂ ಅನುದಾನ ಸರಿಯಾಗಿ ತಲುಪುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.