ADVERTISEMENT

‘ಗಾಂಧಿ ಇ–ಮ್ಯೂಸಿಯಂಗೆ ₹10 ಕೋಟಿ’

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 20:33 IST
Last Updated 2 ಅಕ್ಟೋಬರ್ 2017, 20:33 IST
ಎಚ್‌.ಎಸ್‌.ದೊರೆಸ್ವಾಮಿ ಮತ್ತು ಎಚ್‌.ಕೆ. ಪಾಟೀಲ ಅವರು ಚರಕವನ್ನು ತಿರುಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ.ಪಿ.ಕೃಷ್ಣ, ಡಾ.ಪಾಟೀಲ ಪುಟ್ಟಪ್ಪ ಇದ್ದರು
ಎಚ್‌.ಎಸ್‌.ದೊರೆಸ್ವಾಮಿ ಮತ್ತು ಎಚ್‌.ಕೆ. ಪಾಟೀಲ ಅವರು ಚರಕವನ್ನು ತಿರುಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ.ಪಿ.ಕೃಷ್ಣ, ಡಾ.ಪಾಟೀಲ ಪುಟ್ಟಪ್ಪ ಇದ್ದರು   

ಬೆಂಗಳೂರು: ‘ಗಾಂಧಿ ಭವನದಲ್ಲಿ ಗಾಂಧೀಜಿ ಬದುಕಿನ ಸಮಗ್ರ ಚಿತ್ರಣ ಒದಗಿಸುವ  ಇ–ಮ್ಯೂಸಿಯಂ ಆರಂಭಿಸುತ್ತೇವೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗಾಂಧಿ ಸ್ಮಾರಕ ನಿಧಿಯು ಇಲ್ಲಿ ಸೋಮವಾರ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ವಿಶ್ವ ಅಹಿಂಸಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಯುವಜನರಿಗೆ ಮತ್ತು ಮಕ್ಕಳಿಗೆ ಮಹಾತ್ಮನನ್ನು ಪರಿಚಯಿಸುವ ಸಲು
ವಾಗಿ 11,000 ಚದರ ಅಡಿ ವಿಸ್ತೀರ್ಣದಲ್ಲಿ ಇ–ಮ್ಯೂಸಿಯಂ ಸ್ಥಾಪಿಸಲಾಗುತ್ತದೆ. ಇದಕ್ಕೆ ₹ 10 ಕೋಟಿ ಅನುದಾನ ನೀಡಲಾಗುವುದು. ದೇಶದಲ್ಲೇ ರಾಷ್ಟ್ರಪಿತನ ಕುರಿತ ಮೊದಲ ಇ–ಮ್ಯೂಸಿಯಂ ಇದಾಗಲಿದೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಮಾಹಿತಿ ಒದಗಿಸಲಾಗುವುದು’ ಎಂದರು.

ADVERTISEMENT

‘ಗಾಂಧೀಜಿ ಅವರ 150ನೇ ವರ್ಷಾ ಚರಣೆ ಪ್ರಯುಕ್ತ 2018ರ ಅಕ್ಟೋಬರ್‌ ನಿಂದ 2019ರ ಅಕ್ಟೋಬರ್‌ ನಡುವೆ ಅವರ ವಿಚಾರಗಳಿಗೆ ಸಂಬಂಧಿ
ಸಿದ 150 ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದೇವೆ. ಅವರ ವೈಯುಕ್ತಿಕ ಬದುಕು ಹಾಗೂ ಗಾಂಧಿ ಯುಗಕ್ಕೆ ಸಂಬಂಧಿಸಿದ ಕನ್ನಡ ಪುಸ್ತಕಗಳ ಮರುಮುದ್ರಣ, ಪರಿಷ್ಕರಣೆ ಹಾಗೂ ಹೊಸ ಪುಸ್ತಕಗಳ ಪ್ರಕಟಣೆ ಇದರಲ್ಲಿ ಸೇರಿದೆ’ ಎಂದರು.

‘ರಾಜ್ಯದ ಮೂರು ಸಾವಿರ ಗ್ರಾಮ ಪಂಚಾಯಿತಿಗಳು ಇಂದಿನಿಂದ ಬಹಿರ್ದೆಸೆ ಮುಕ್ತ ಗ್ರಾಮಗಳಾಗಲಿವೆ. 2018ರ ಮಾರ್ಚ್‌ ಒಳಗಾಗಿ ಸಂಪೂರ್ಣ ರಾಜ್ಯವನ್ನು ಬಯಲು ಶೌಚ ಮುಕ್ತ ರಾಜ್ಯವನ್ನಾಗಿ ರೂಪಿಸುತ್ತೇವೆ’ ಎಂದು ಅವರು ಭರವಸೆ ನೀಡಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್.ದೊರೆಸ್ವಾಮಿ, ‘ದೇಶದಲ್ಲಿ ಕನಿಷ್ಠ ಕಾನೂನುಗಳಿರಬೇಕು ಎಂಬುದು ಗಾಂಧೀಜಿಯ ಆಶಯವಾಗಿತ್ತು. ಆದರೆ, ಇಂದು ಹೆಚ್ಚುತ್ತಿರುವ ನ್ಯಾಯಾಲಯ
ಗಳು, ಜೈಲುಗಳು ನಮ್ಮ ವ್ಯಕ್ತಿತ್ವದ ಮಾಪಕಗಳಾಗಿವೆ. ವಿನೋಬಾ ಭಾವೆ ಅವರು ದೇಹದಲ್ಲಿ ಮಲ ಎಷ್ಟಿದೆಯೋ ದೇಶದಲ್ಲಿ ಅಷ್ಟು ಕಾನೂನುಗಳಿರಬೇಕು ಎಂದಿದ್ದರು. ಆದರೆ, ಇಂದು ದೇಹವೆಲ್ಲಾ ಮಲವಾಗಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಹೆಚ್ಚುತ್ತಿರುವ ಆಸ್ಪತ್ರೆಗಳು, ನ್ಯಾಯಾಲಯಗಳು, ಜೈಲುಗಳು ಅಭಿವೃದ್ಧಿಯ ಸಂಕೇತವಲ್ಲ. ಅವುಗಳ ಪ್ರಮಾಣ ಕಡಿಮೆಯಾಗುವುದೇ ಗಾಂಧಿ ಪರಿಕಲ್ಪನೆಯ ನಿಜವಾದ ಪ್ರಗತಿ. ಆ ದಿಶೆಯ ಅಭಿವೃದ್ಧಿ ನಮ್ಮ ಗುರಿಯಾಗಬೇಕು’ ಎಂದು ಅವರು ಹೇಳಿದರು.

ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ, ‘ರಾಜ್ಯದಲ್ಲಿ ಗಾಂಧಿ ಆದರ್ಶದಂತೆ ಮದ್ಯಪಾನವನ್ನು ನಿಷೇಧಿಸಿದ ಮೊದಲ ‌ವ್ಯಕ್ತಿ ಟಿಪ್ಪು ಸುಲ್ತಾನ್‌. ಆದರೆ ಇಂದು ಅನೇಕ ಸಂಶೋಧಕರು ಆತನನ್ನು ಟೀಕಿಸುತ್ತಿದ್ದಾರೆ’ ಎಂದು ಆವರು ಬೇಸರ ವ್ಯಕ್ತಪಡಿಸಿದರು.

ಜಯಶ್ರೀ ಟ್ರಸ್ಟ್‌ ಪುರಸ್ಕಾರ

ನಾಗರಾಜ ಚಿಕ್ಕನಾಯಕನಹಳ್ಳಿ ಅವರು ರಚಿಸಿದ ‘ಗಾಂಧೀಜಿಯ ನೂರು ಆದರ್ಶಗಳ ನೆನಪುಗಳು’ ಕೃತಿಗೆ 2017ನೇ ಸಾಲಿನ  ಜಯಶ್ರೀ ಟ್ರಸ್ಟ್‌ ‍ಪುರಸ್ಕಾರವನ್ನು ಸಚಿವ ಎಚ್‌.ಕೆ.ಪಾಟೀಲ ಪ್ರದಾನ ಮಾಡಿದರು. ‘ಬಾಪು ಪ್ರಪಂಚ’ ವಿಶೇಷ ಸಂಚಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.