ಬೆಂಗಳೂರು: ‘ಕವಿ ಗೋಪಾಲಕೃಷ್ಣ ಅಡಿಗರಿಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಅರ್ಹವಾಗಿ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ’ ಎಂದು ಲೇಖಕ ಬಿ.ವೆಂಕಟಕೃಷ್ಣ ಕೆದ್ಲಾಯ ಬೇಸರ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಕನ್ನಡಿಗರ ಸಂಘವು ಬುಧವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧನ್ವಂತರಿ ಪುರಸ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
‘ಸಾಹಿತಿಗಳ ಎಲ್ಲ ಬರಹಗಳು ಸರಳವಾಗಿರುವುದಿಲ್ಲ. ಕೆಲವೊಂದು ಸಂಕೀರ್ಣವಾಗಿಯೂ ಇರುತ್ತವೆ. ಇದು ಸರ್ವೇಸಾಮಾನ್ಯ. ಅಂತೆಯೇ, ಅಡಿಗರ ಒಂದಷ್ಟು ಕಾವ್ಯಗಳು ಸಂಕೀರ್ಣವಾಗಿರುವುದು ನಿಜ. ಅವರು ಕೂಡ ಸರಳ ಸುಂದರ ಸಾಹಿತ್ಯದ ಮೂಲಕ ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಆದರೆ, ಅವರ ಕವಿತೆಗಳು ಜನರಿಗೆ ಅರ್ಥವಾಗುವುದೇ ಇಲ್ಲ ಎಂದು ಸಾಹಿತ್ಯದ ಒಂದು ವಲಯ ಅಪಪ್ರಚಾರ ನಡೆಸಿತು’ ಎಂದರು.
‘ಅಡಿಗರ ಕವನಗಳಲ್ಲಿ ಕರಾವಳಿ ಕರ್ನಾಟಕ ಭಾಗದ ಸಾಂಸ್ಕೃತಿಕ ಮತ್ತು ಭೌಗೋಳಿಕ ಸನ್ನಿವೇಶಗಳ ದೃಷ್ಟಾಂತಗಳು ಹೆಚ್ಚಾಗಿ ಬಳಕೆಯಾಗಿವೆ. ದಕ್ಷಿಣ ಕನ್ನಡದ ಜನರ ಸಂಸ್ಕೃತಿ ಮತ್ತು ಭಾರತದ ಮಹಾಕಾವ್ಯಗಳ ಪರಿಚಯವಿರುವವರಿಗೆ ಅವರ ಕವನಗಳು ಸುಲಭವಾಗಿ ಅರ್ಥವಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.