ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳ ಸುಳಿವು ಸಿಗದೇ ಕಂಗಾಲಾಗಿದ್ದ ಎಸ್‌ಐಟಿ ಅಧಿಕಾರಿಗಳ ಕೈ ಹಿಡಿದಿದ್ದು ‘ಕರಪತ್ರ’.
2017ರ ಸೆಪ್ಟೆಂಬರ್ 5ರಂದು ಗೌರಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆರೋಪಿಗಳ ಪತ್ತೆಗಾಗಿ ರಚಿಸಲಾದ ಎಸ್‌ಐಟಿ, ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೂ ಸಣ್ಣ ಸುಳಿವು ಸಿಕ್ಕಿರಲಿಲ್ಲ.
ಆಗ ಎಸ್‌ಐಟಿ ಅಧಿಕಾರಿಗಳು, ಕರಪತ್ರಗಳ ಮೊರೆ ಹೋಗಿದ್ದರು. ‘ಹತ್ಯೆ ನಡೆದ ದಿನದಂದು ಹಾಗೂ ಅದರ ನಂತರ ಮನೆ ಖಾಲಿ ಮಾಡಿದ ಬಾಡಿಗೆದಾರರ ಹಾಗೂ ಅತಿಥಿಗಳ ಬಗ್ಗೆ ಮನೆ ಮಾಲೀಕರು ಮಾಹಿತಿ ನೀಡಿ’ ಎಂಬ ಬರಹವನ್ನು ಕರಪತ್ರದಲ್ಲಿ ಮುದ್ರಿಸಿದ್ದರು.
ಆ ಕರಪತ್ರಗಳನ್ನು ರಾಜರಾಜೇಶ್ವರಿನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಹಂಚಿದ್ದರು. ಮನೆಗಳು, ಹೋಟೆಲ್‌ಗಳು, ಪೇಯಿಂಗ್ ಗೆಸ್ಟ್ ಕಟ್ಟಡಗಳು, ಲಾಡ್ಜ್‌ಗಳು, ಹಾಸ್ಟೆಲ್‌ಗಳು, ಧಾರ್ಮಿಕ ವಸತಿ ಕೇಂದ್ರಗಳು, ಅಪಾರ್ಟ್‌ಮೆಂಟ್ ಸಮುಚ್ಚಯಗಳು, ರೆಸಾರ್ಟ್‌ಗಳು ಹಾಗೂ ಎಲ್ಲ ಮಾದರಿಯ ವಸತಿ ಗೃಹಗಳಿಗೂ ಪೊಲೀಸರು ಕರಪತ್ರಗಳನ್ನು ತಲುಪಿಸಿದ್ದರು.
ಆ ಕರಪತ್ರವನ್ನು ನೋಡಿದ್ದ ಸುಂಕದಕಟ್ಟೆಯ ನಿವಾಸಿ ಸುರೇಶ್, ತಮ್ಮ ಮನೆಯಲ್ಲಿದ್ದ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅದರ ಬೆನ್ನುಬಿದ್ದ ಅಧಿಕಾರಿಗಳು, ಪ್ರಕರಣ ನಡೆದ 9 ತಿಂಗಳ ನಂತರ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್‌ಐಟಿಗೆ ಸುರೇಶ್ ಹೇಳಿದಿಷ್ಟು: ಮನೆ ಮಾಲೀಕ ಸುರೇಶ್, ಆರೋಪಿಗಳ ಬಗ್ಗೆ ಎಸ್‌ಐಟಿಗೆ ಹೇಳಿಕೆ ಕೊಟ್ಟಿದ್ದಾರೆ. ಅದನ್ನೇ ಎಸ್‌ಐಟಿ ಅಧಿಕಾರಿಗಳು, ನ್ಯಾಯಾಲಯಕ್ಕೆ ನೀಡಿದ್ದಾರೆ.
‘ಸುಂಕದಕಟ್ಟೆಯಲ್ಲಿ ನನ್ನ ಮನೆ ಇದೆ. ಮನೆ ಮೇಲೆ ಕೊಠಡಿ ಇದ್ದು, ಪ್ರವೀಣ್ ಅಲಿಯಾಸ್ ಸುಜಿತ್ ಮತ್ತು ಪರಶುರಾಮ್ ವಾಘ್ಮೋರೆ ಕೆಲ ದಿನ ಅಲ್ಲಿಯೇ ಬಾಡಿಗೆಗಿದ್ದರು. ಗೌರಿ ಹತ್ಯೆ ನಡೆದ ರಾತ್ರಿಯೇ ಅವರಿಬ್ಬರು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ’ ಎಂದು ಹೇಳಿಕೆಯಲ್ಲಿ ಸುರೇಶ್ ತಿಳಿಸಿದ್ದರು.
‘ಸ್ನೇಹಿತರೊಬ್ಬರ ಮೂಲಕ ಪ್ರವೀಣ್ ಪರಿಚಯವಾಗಿದ್ದ. ಹೀಗಾಗಿ, ಆತನಿಗೆ ಕೊಠಡಿ ಬಾಡಿಗೆಗೆ ಕೊಟ್ಟಿದ್ದೆ. ಕೆಲವು ದಿನಗಳ ನಂತರ ಆತ, ಪರಶುರಾಮ್‌ನನ್ನು ಕೊಠಡಿಗೆ ಕರೆದುಕೊಂಡು ಬಂದಿದ್ದ. ಆತ ಸಹ ತನ್ನೊಂದಿಗೆ ಕೊಠಡಿಯಲ್ಲಿ ಇರುತ್ತಾನೆಂದು ಹೇಳಿದ್ದ. ನಾನೂ ಒಪ್ಪಿಕೊಂಡಿದ್ದೆ’ ಎಂದಿದ್ದರು.
‘ಮೊದಲಿಗೆ ವಾರದಲ್ಲಿ ಮೂರು ದಿನ ಮಾತ್ರ ಪರಶುರಾಮ್ ಕೊಠಡಿಯಲ್ಲಿ ಇರುತ್ತಿದ್ದ. ಕಳೆದ ಆಗಸ್ಟ್‌ನಲ್ಲಿ ಕಾಯಂ ಆಗಿ ಕೊಠಡಿಯಲ್ಲೇ ಉಳಿದುಕೊಂಡಿದ್ದ. ಅವರಿಬ್ಬರು ಮರಾಠಿ ಹಾಗೂ ಹಿಂದಿ ಮಾತ್ರ ಮಾತನಾಡಿಕೊಳ್ಳುತ್ತಿದ್ದರು. ಈ ಇಬ್ಬರನ್ನು ಭೇಟಿಯಾಗಲು ನವೀನ್, ಅಮೋಲ್ ಕಾಳೆ ಹಾಗೂ ಹಲವರು ಆಗಾಗ ಕೊಠಡಿಗೆ ಬಂದು ಹೋಗುತ್ತಿದ್ದರು. ಅವರನ್ನು ನೋಡಿದರೆ ಗುರುತು ಹಿಡಿಯುತ್ತೇನೆ’ ಎಂದು ತಿಳಿಸಿದ್ದರು.
‘ಸೆಪ್ಟೆಂಬರ್ 5ರ ಬೆಳಗ್ಗೆ 10 ಗಂಟೆಗೆ ಕೊಠಡಿಯಿಂದ ಹೊರ ಹೋಗಿದ್ದ ಪ್ರವೀಣ್ ಹಾಗೂ ಪರಶುರಾಮ್, ಮಧ್ಯಾಹ್ನ 12 ಗಂಟೆಗೆ ವಾಪಸ್ ಬಂದಿದ್ದರು. ಒಂದು ಗಂಟೆ ಬಳಿಕ ಪುನಃ ಹೊರ ಹೋಗಿ ಸಂಜೆ 4 ಗಂಟೆಗೆ ವಾಪಸ್ ಬಂದಿದ್ದರು. ಸಂಜೆ 6 ಗಂಟೆಗೆ ಹೊರಹೋಗಿ 9 ಗಂಟೆಗೆ ವಾಪಸ್ಸಾಗಿದ್ದ ಅವರು, ಮನೆ ಖಾಲಿ ಮಾಡಿಕೊಂಡು ಹೋಗಿದ್ದರು. ಅದಾದ ನಂತರ ಅವರಿಬ್ಬರು ಸಂಪರ್ಕಕ್ಕೇ ಸಿಗಲಿಲ್ಲ’ ಎಂದು ಸುರೇಶ್ ಹೇಳಿದ್ದರು.
ಕಾದು ಹಿಡಿದ ಅಧಿಕಾರಿಗಳು: ಪ್ರವೀಣ್ ಹಾಗೂ ಪರಶುರಾಮ್ ಬಗ್ಗೆ ಮೊದಲೇ ಮಾಹಿತಿ ಕಲೆಹಾಕಿದ್ದ ಎಸ್‌ಐಟಿ ಅಧಿಕಾರಿಗಳು, ಅವರನ್ನು ಬಂಧಿಸುವ ಮುನ್ನ ಪುರಾವೆಗಳನ್ನು ಸಂಗ್ರಹಿಸಲು ತನಿಖೆ ಚುರುಕುಗೊಳಿಸಿದ್ದರು.
ಆರೋಪಿಗಳು ಕಾಯಿನ್ ಬೂತ್ ಮೂಲಕ ಪರಸ್ಪರ ಸಂಪರ್ಕದಲ್ಲಿರುವ ಮಾಹಿತಿ ಸಿಕ್ಕ ಕೂಡಲೇ, ಆ ಕರೆಗಳ ಸಂಭಾಷಣೆಯನ್ನು ಅಧಿಕಾರಿಗಳು ಆಲಿಸಲಾರಂಭಿಸಿದರು. ಆವಾಗಲೇ ಮದ್ದೂರಿನ ಕೆ.ಟಿ.ನವೀನ್‌ಕುಮಾರ್‌ನ ಮಾಹಿತಿ ಸಿಕ್ಕಿತು. ಆತನನ್ನು 15 ದಿನಗಳವರೆಗೆ ಹಿಂಬಾಲಿಸಿದ್ದ ಎಸ್‌ಐಟಿ ಸಿಬ್ಬಂದಿ, ಆನಂತರ ಬಂಧಿಸಿದ್ದರು.
ಪೊಲೀಸರ ವಶದಲ್ಲಿದ್ದಾಗಲೇ ನವೀನ್‌ನ ಮೊಬೈಲ್‌ಗೆ ಪ್ರವೀಣ್, ಕಾಯಿನ್ ಬೂತ್‌ನಿಂದ ಕರೆ ಮಾಡಿದ್ದ. ಬಳಿಕ ಶಿವಮೊಗ್ಗಕ್ಕೆ ಹೋಗಿದ್ದ ತಂಡ ಆತನನ್ನೂ ಬಂಧಿಸಿತು. ಬಳಿಕ, ಉಳಿದೆಲ್ಲ ಆರೋಪಿಗಳು ಸಿಕ್ಕಿಬಿದ್ದರು.
ನಾಲ್ಕು ತಂಡಗಳಾಗಿ ಕೆಲಸ: ಹತ್ಯೆಗೆಂದೇ ಒಂದೂವರೆ ವರ್ಷದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಆರೋಪಿಗಳು, ನಾಲ್ಕು ತಂಡಗಳಲ್ಲಿ ಕೆಲಸ ಮಾಡಿದ್ದರು ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.
ಮೊದಲ ತಂಡವು ಒಂದೂವರೆ ವರ್ಷದಿಂದ ಗೌರಿ ಅವರ ಬರಹಗಳನ್ನು ಸಂಗ್ರಹಿಸಲಾರಂಭಿಸಿತ್ತು. ಗೌರಿ ಲಂಕೇಶ್ ಪತ್ರಿಕೆಗಳ ಸಂಚಿಕೆಗಳು, ಅವರ ಭಾಷಣದ ವಿಡಿಯೊ ಹಾಗೂ ಹಿಂದೂ ಧರ್ಮದ ವಿರುದ್ದ ನೀಡಿದ್ದ ಹೇಳಿಕೆಗಳನ್ನು ಸಂಗ್ರಹ ಮಾಡಿತ್ತು. ಅದನ್ನೆಲ್ಲ ಎರಡನೇ ತಂಡಕ್ಕೆ ಕೊಟ್ಟಿತ್ತು.
‘ಎರಡನೇ ತಂಡದವರು, ಹೆಚ್ಚುವರಿ ಮಾಹಿತಿ ಸೇರಿಸಿ ಮೂರನೇ ತಂಡಕ್ಕೆ ರವಾನಿಸಿದ್ದರು. ಮೂರನೇ ತಂಡದಲ್ಲಿದ್ದ ಇಬ್ಬರು ಆರೋಪಿಗಳು, ಆರು ತಿಂಗಳು ಗೌರಿ ಅವರನ್ನು ಹಿಂಬಾಲಿಸಿ ದಿನಚರಿ ತಿಳಿಕೊಂಡಿದ್ದರು. ಮನೆ ಹಾಗೂ ಸುತ್ತಮುತ್ತ ಸಿ.ಸಿ.ಟಿ.ವಿ ಕ್ಯಾಮೆರಾ ಬಗ್ಗೆ ಮಾಹಿತಿ ಕಲೆಹಾಕಿ ನಾಲ್ಕನೇ ತಂಡಕ್ಕೆ ನೀಡಿದ್ದರು’ ಎಂದರು.
‘ಗುಂಡು ಹಾರಿಸಿ ಹತ್ಯೆ ಮಾಡುವ ಹೊಣೆಯನ್ನು ನಾಲ್ಕನೇ ತಂಡದಲ್ಲಿ ಪ್ರವೀಣ್, ಪರಶುರಾಮ್ ಹಾಗೂ ನಿಹಾಲ್ ದಾದಾ ವಹಿಸಿಕೊಂಡಿದ್ದರು. ಹತ್ಯೆಗೂ ತಿಂಗಳ ಮುನ್ನ ನಗರಕ್ಕೆ ಬಂದಿದ್ದ ಮೂವರು, ಹತ್ಯೆ ಮಾಡಲು ಯಾವ ರಸ್ತೆಯಲ್ಲಿ ಹೋಗಬೇಕು. ಆಮೇಲೆ ಪರಾರಿಯಾಗುವುದು ಹೇಗೆ ಎಂಬುದನ್ನು ತಿಳಿದುಕೊಂಡಿದ್ದರು. ಸೆಪ್ಟೆಂಬರ್ 4ರಂದೇ ಗೌರಿ ಅವರನ್ನು ಹತ್ಯೆ ಮಾಡಲು ಅವರು ಸಿದ್ಧರಾಗಿದ್ದರು. ಅದು ಸಾಧ್ಯವಾಗಿರಲಿಲ್ಲ. ಮರುದಿನವೇ ಕೃತ್ಯ ಎಸಗಿ ಪರಾರಿಯಾಗಿದ್ದರು’ ಎಂದರು.
‘ಗುಂಡು ಹೊಡೆದದ್ದು ನಾನೇ; ಹೇಳಿದ್ದು ಆ ಮೂವರು’
ಬೆಂಗಳೂರು: ‘ಗೌರಿ ಲಂಕೇಶ್‌ರನ್ನು ಹತ್ಯೆ ಮಾಡಿದ್ದು ನಾನೇ. ಆ ಮೂವರು ಹೇಳಿದ್ದಕ್ಕೆ ಗುಂಡು ಹೊಡೆದೆ’ ಎಂದು ಆರೋಪಿ ಪರಶುರಾಮ್ ವಾಘ್ಮೋರೆ, ಎಸ್‌ಐಟಿ ಅಧಿಕಾರಿಗಳ ಎದುರು ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿಯ ಹೇಳಿಕೆಯನ್ನು ವಿಡಿಯೊ ಚಿತ್ರೀಕರಣ ಮಾಡಿರುವ ಅಧಿಕಾರಿಗಳು, ಅದನ್ನು ಪೆನ್‌ಡ್ರೈವ್‌ನಲ್ಲಿ (8 ಜಿ.ಬಿ) ಹಾಕಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಿದ್ದಾರೆ.
‘ಕೃತ್ಯವೆಸಗಲು ತನಗೆ ನಿರ್ದೇಶನ ನೀಡಿದ ಹಾಗೂ ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರ ವಿವರಗಳನ್ನು ಆತ ಹಂಚಿಕೊಂಡಿದ್ದಾನೆ’ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
‘ಆ ಮೂವರು ಯಾರು ಎಂಬುದನ್ನು ಆರೋಪಿ ಬಾಯ್ಬಿಡುತ್ತಿಲ್ಲ. ಮುಖ ಚಹರೆಯನ್ನಷ್ಟೇ ವಿವರಿಸಿದ್ದಾನೆ. ಅದರ ಆಧಾರದಲ್ಲಿ 6 ರೇಖಾಚಿತ್ರಗಳನ್ನು ಸಿದ್ಧಪಡಿಸಿ, ಅವರ‍್ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ. ಅಮೋಲ್‌ನನ್ನು ಬೆಳಗಾವಿಗೆ ಕರೆದೊಯ್ದು ಮಾಹಿತಿ ಸಂಗ್ರಹಿಸಿದ್ದೇವೆ’ ಎಂದಿದ್ದಾರೆ.
ಪ್ರತ್ಯೇಕ ಕೊಠಡಿಯಲ್ಲಿ ವಾಸ: ’ಹತ್ಯೆಗೆ ಸಂಚು ರೂಪಿಸಿದ್ದ ಅಮೋಲ್ ಕಾಳೆ, ಪರಶುರಾಮ್ ಹಾಗೂ ಅಮಿತ್ ಜತೆಯಲ್ಲಿ ಬೆಂಗಳೂರಿಗೆ ಬಂದಿದ್ದ. ಆ ಮೂವರು ಮೊದಲಿಗೆ ಯಶವಂತಪುರ ವೃತ್ತ ಬಳಿಯ ಶ್ರೀ ಕೃಷ್ಣ ದೇವಸ್ಥಾನದ ಹತ್ತಿರದ ಮನೆಯೊಂದರಲ್ಲಿ ಉಳಿದುಕೊಂಡಿದ್ದರು’ ಎಂದು ನ್ಯಾಯಾಲಯಕ್ಕೆ ಅಧಿಕಾರಿಗಳು ತಿಳಿಸಿದ್ದಾರೆ.
‘ಹತ್ಯೆಗೂ ಎರಡು ತಿಂಗಳ ಮುನ್ನ ಆ ಮನೆ ತೊರೆದಿದ್ದ ಆರೋಪಿಗಳು, ಮೂರು ತಂಡಗಳಾಗಿ ನಗರದ ಬೇರೆ ಬೇರೆ ಕಡೆಗಳಲ್ಲಿ ನೆಲೆಸಿದ್ದರು. ಉಳಿದವರು ಬಂದು ಜತೆಯಾದರು. ಅಮೋಲ್ ಕಾಳೆ, ತನ್ನಿಬ್ಬರು ಸಹಚರರ ಜತೆ ಮಾಗಡಿ ಮುಖ್ಯರಸ್ತೆಯ ದಾಸನಪುರ ಹೋಬಳಿಯ ಸೀಗೇಹಳ್ಳಿ ಗೇಟ್ ಬಳಿಯ ಪೊಲೀಸಪ್ಪನ ಬಿಲ್ಡಿಂಗ್‌ನ ಮನೆಯಲ್ಲಿ ಬಾಡಿಗೆಗಿದ್ದ’.
‘ಇನ್ನೊಂದು ತಂಡ, ಮಾಗಡಿ ರಸ್ತೆಯ ಕಡಬಗೆರೆಯ ಸಾಯಿಲಕ್ಷ್ಮಿ ಲೇಔಟ್‌ನ ಅಂಗಡಿಯ ಕೊಠಡಿಯಲ್ಲಿ ಉಳಿದುಕೊಂಡಿತ್ತು. ಪರಶುರಾಮ್ ಹಾಗೂ ಪ್ರವೀಣ್, ಸುಂಕದಕಟ್ಟೆಯ ಸುರೇಶ್ ಅವರ ಮನೆಯಲ್ಲಿ ವಾಸವಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಾಮೀನು ನೀಡದಂತೆ ಮನವಿ: ‘ಕೃತ್ಯ ಎಸಗಿರುವುದಾಗಿ ಒಪ್ಪಿಕೊಳ್ಳುತ್ತಿರುವ ಆರೋಪಿಗಳು, ಆ ಸಂಬಂಧ ಮಾಹಿತಿಗಳನ್ನು ಮುಚ್ಚಿಡುತ್ತಿದ್ದಾರೆ. ಅವರಿಂದ ಮತ್ತಷ್ಟು ಮಾಹಿತಿ ಕಲೆಹಾಕಬೇಕು. ಜಾಮೀನು ನೀಡಬಾರದು’ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
‘ಹತ್ಯೆಗೆ ಬಳಸಿರುವ ಶಸ್ತ್ರವನ್ನು ಪತ್ತೆ ಮಾಡಬೇಕು. ಬೈಕ್ ಜಪ್ತಿ ಮಾಡಬೇಕು. ಆರೋಪಿಗಳು ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯವರಾಗಿದ್ದು, ಜಾಮೀನು ಸಿಕ್ಕರೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ’ ಎಂದಿದ್ದಾರೆ.
ಪರಶುರಾಮ್‌ನನ್ನು ಕಂಡು ಹಣೆ ಚಚ್ಚಿಕೊಂಡ ಕಾಳೆ
‘ಪ್ರಕರಣದ ಆರೋಪಿಗಳನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದೆವು. ಆರೋಪಿಗಳನ್ನು ಬುಧವಾರ ಸಂಜೆ ಮುಖಾಮುಖಿಯಾಗಿಸಿದೆವು. ಪರಶುರಾಮ್‌ನನ್ನು ನೋಡಿದ ಅಮೋಲ್ ಕಾಳೆ, ಪಕ್ಕದಲ್ಲೇ ಇದ್ದ ಗೋಡೆಗೆ ಹಣೆ ಚಚ್ಕಿಕೊಂಡ. ಗಾಯಗೊಂಡ ಆತನಿಗೆ ಚಿಕಿತ್ಸೆ ಕೊಡಿಸಿದ್ದೇವೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.
‘ಬಂಧಿತ ಆರೋಪಿಗಳು, ತಮ್ಮನ್ನು ಬಿಟ್ಟರೆ ಬೇರೆ ಯಾರನ್ನೂ ಬಂಧಿಸಲಾಗುವುದಿಲ್ಲವೆಂದು ತಿಳಿದುಕೊಂಡಿದ್ದಾರೆ. ಈಗ ಬಂಧಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಅವರಲ್ಲಿ ಆತಂಕ ಮೂಡಿದೆ. ಹೀಗಾಗಿಯೇ ಕಾಳೆ ಹಣೆ ಚಚ್ಚಿಕೊಂಡಿದ್ದಾನೆ’ ಎಂದರು.
‘ಪಿಸ್ತೂಲ್ ಕಸಿದುಕೊಂಡು ಹೋದ’
‘ಹತ್ಯೆ ಬಳಿಕ ನನ್ನ ಕೈಯಲ್ಲಿದ್ದ ಪಿಸ್ತೂಲನ್ನು ಬೈಕ್ ಸವಾರನೇ ಕಸಿದುಕೊಂಡು ಹೋದ. ಆತ ಯಾರು ಎಂಬುದು ನನಗೆ ಗೊತ್ತಿಲ್ಲ’ ಎಂದು ಆರೋಪಿ ಪರಶುರಾಮ್ ಎಸ್‌ಐಟಿ ಅಧಿಕಾರಿಗಳಿಗೆ ಹೇಳುತ್ತಿದ್ದಾನೆ.
‘ನಾನು ಗೌರಿ ಮನೆಗೆ ಹೋಗಲು ಸಿದ್ಧವಾಗಿ ನಿಂತಿದ್ದೆ. ಬೈಕ್‌ನಲ್ಲಿ ಬಂದಿದ್ದ ವ್ಯಕ್ತಿ, ಕೋಡ್ ಹೇಳಿದ್ದ. ನಾನೂ ಕೋಡ್ ಹೇಳಿ ಬೈಕ್ ಹತ್ತಿದೆ. ಆತ, ಗೌರಿ ಮನೆಗೆ ಕರೆದೊಯ್ದ. ಗೌರಿ, ಕಾರಿನಿಂದ ಇಳಿಯುತ್ತಿದ್ದಂತೆ ಗುಂಡು ಹಾರಿಸಿದೆ. ಅವರು ಮೃತಪಟ್ಟರೆಂಬುದು ಖಾತ್ರಿ ಆಗುತ್ತಿದ್ದಂತೆ ಅಲ್ಲಿಂದ ಪರಾರಿಯಾದೆವು’ ಎಂದಷ್ಟೇ ಹೇಳುತ್ತಿರುವ ಆರೋಪಿ, ‘ಆ ನಂತರ ಏನಾಯಿತು’ ಎಂಬುದನ್ನು ಬಾಯ್ಬಿಡುತ್ತಿಲ್ಲವೆಂದು ಎಸ್ಐಟಿ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.