ಬೆಂಗಳೂರು: ‘ಗ್ರಾಮಗಳ ಅಭಿವೃದ್ಧಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೆಚ್ಚು ಹಸ್ತಕ್ಷೇಪ ಮಾಡಬಾರದು. ಗ್ರಾಮಗಳೇ ಗಣರಾಜ್ಯವಾಗಬೇಕು’ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.
ಶೃಂಗಾರ ಪ್ರಕಾಶನ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಲೇಖಕ ಎನ್.ದಯಾನಂದ ಅವರು ರಚಿಸಿದ ‘ಡಿಸ್ಕವರಿಂಗ್ ಪೀಸ್ ಆ್ಯಂಡ್ ಸೈಲೆನ್ಸ್ ಮತ್ತು ಬಾಪು: ದಿ ಹಂಬಲ್ ಮಾಸ್ಟರ್’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
‘ಊರಿನ ಸ್ವಚ್ಛತೆ, ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಸರ್ಕಾರಗಳ ಪಾಲ್ಗೊಳ್ಳುವಿಕೆ ಕಡಿಮೆ ಇರಬೇಕು. ಗ್ರಾಮೀಣರು ಮಾಡಲಾಗದ ಕಾರ್ಯಗಳನ್ನು ಸರ್ಕಾರ ಮಾಡಲಿ. ಗಾಂಧೀಜಿಯ ಆಶಯವೂ ಇದೇ ಆಗಿತ್ತು’ ಎಂದು ಅವರು ತಿಳಿಸಿದರು.
‘ಇಂದು ಗ್ರಾಮ ಪಂಚಾಯಿತಿಗಳಿಗೆ ಕೋಟಿಗಳ ಮೊತ್ತದ ಅನುದಾನ ನೀಡಲಾಗುತ್ತಿದೆ. ಆದರೆ ಭ್ರಷ್ಟ ಅಧಿಕಾರಿಗಳಿಂದ ಅಭಿವೃದ್ಧಿ ಆಗುತ್ತಿಲ್ಲ. ಪಂಚಾಯಿತಿಗಳಲ್ಲಿ ಮಹಿಳಾ ಸದಸ್ಯರ ಬದಲಾಗಿ ಅವರ ಗಂಡಂದಿರು ಭಾಗವಹಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಇಂದು ಬಿಡುಗಡೆಯಾದ ಮಹಾತ್ಮ ಗಾಂಧೀಜಿ ಅವರ ಆದರ್ಶಗಳ ಕುರಿತಾದ ಪುಸ್ತಕ ಮಾರ್ಗದರ್ಶಕವಾಗಲಿ’ ಎಂದು ಆಶಯ ವ್ಯಕ್ತಪಡಿಸಿದರು.
ವಿಮರ್ಶಕ ಸಿ.ಎನ್.ರಾಮಚಂದ್ರನ್ ‘ಡಿಸ್ಕವರಿಂಗ್ ಪೀಸ್ ಆ್ಯಂಡ್ ಸೈಲೆನ್ಸ್’ ಕೃತಿ ಬಗ್ಗೆ ಮಾತನಾಡಿ,‘ಕೃತಿಯು ಯುರೋಪ್ ದೇಶಗಳ ಪ್ರವಾಸದ ಅನುಭವ ಮಾತ್ರ ಒಳಗೊಂಡಿಲ್ಲ, ಇದರಲ್ಲಿ ಬದುಕಿನ ರೀತಿ, ಪ್ರಗತಿ, ಅರ್ಥಶಾಸ್ತ್ರ, ಜಾಗತಿಕ ಭಯೋತ್ಪಾದನೆ ಹಾಗೂ ತತ್ವಶಾಸ್ತ್ರದ ವಿಷಯಗಳು ಇವೆ. ಓದುಗರು ಬಯಸುವ ಪ್ರವಾಸದ ರೋಚಕ ಸಂಗತಿ ಮತ್ತು ಕುತೂಹಲಕರ ಅಂಶಗಳಿವೆ. ಪಾಶ್ಚಾತ್ಯರು ಪಂಚೇಂದ್ರಿಯ ಸುಖಕ್ಕೆ ಯಾಕೆ ಹೆಚ್ಚು ಒತ್ತು ಕೊಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ದಾಖಲಿಸಿದ್ದಾರೆ’ ಎಂದು ಅವರು ತಿಳಿಸಿದರು.