ಬೆಂಗಳೂರು: ‘ಸಂಶೋಧನಾ ವಿಧಾನ ಮತ್ತು ನಿರೂಪಣೆ ಸಂಶೋಧನೆಯ ಮೌಲ್ಯವನ್ನು ನಿರ್ಧರಿಸುತ್ತವೆ’ ಎಂದು ಇತಿಹಾಸ ತಜ್ಞ ಪ್ರೊ.ಷ.ಶೆಟ್ಟರ್ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶುಕ್ರವಾರ ಸಾಹಿತಿ ಡಾ.ಸರಸ್ವತಿ ವಿಜಯಕುಮಾರ್ ಅವರಿಗೆ ‘ಚಾವುಂಡರಾಯ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿ,‘ಸಂಶೋಧನೆಗೆ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಂಡರೆ ಸಂಶೋಧನಾ ಕೃತಿಗೆ ಗಟ್ಟಿತನ ಬರುತ್ತದೆ. ನಿರೂಪಣಾ ವಿಧಾನವನ್ನು ಕರಗತ ಮಾಡಿಕೊಂಡವನೆ ನಿಜವಾದ ಪಂಡಿತ. ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಸರಳವಾದ ನಿರೂಪಣಾ ವಿಧಾನ ಇರಬೇಕು. ಆಗ ಮಾತ್ರ ಕೃತಿಯ ಮೌಲ್ಯ ಹೆಚ್ಚುತ್ತದೆ’ ಎಂದರು.
ಸರಸ್ವತಿ ವಿಜಯಕುಮಾರ್ ಅವರ ಕೃತಿಗಳನ್ನು ಗಮನಿಸಿದರೆ ಶ್ರದ್ಧೆ, ಪ್ರಯತ್ನಪೂರ್ವಕವಾಗಿ ಸಾಮಾನ್ಯ ಜನರಿಗೆ ನಿಲುಕುವ ಹಾಗೆ ನಿರೂಪಣಾ ಶೈಲಿಯನ್ನು ಅಳವಡಿಸಿಕೊಂಡಿರುವುದು ತಿಳಿಯುತ್ತದೆ ಎಂದು ಹೇಳಿದರು.
ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಪರಿಷತ್ತಿನಲ್ಲಿ ಚಾವುಂಡರಾಯನ ಹೆಸರಿನಲ್ಲಿ ಸ್ಥಾಪಿಸಿರುವ ₨2 ಲಕ್ಷ ದತ್ತಿ ನಿಧಿಯಿಂದ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಪ್ರಶಸ್ತಿಯು ₨20 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಇತರ ಪ್ರಶಸ್ತಿಗಳು ಲಕ್ಷಾಂತರ ರೂಪಾಯಿಗಳ ಗೌರವಧನವನ್ನು ನೀಡುತ್ತಿರುವುದರಿಂದ ಈ ಪ್ರಶಸ್ತಿಯ ದತ್ತಿ ಹೆಚ್ಚಿಸಬೇಕು ಎಂದು ಶ್ರೀಮಠಕ್ಕೆ ಒತ್ತಾಯ ಮಾಡಲಾಗಿತ್ತು. ಅದನ್ನು ಪರಿಗಣಿಸಿ ಹೆಚ್ಚಿನ ₨2 ಲಕ್ಷಗಳ ದತ್ತಿಯನ್ನು ನೀಡಿದ್ದಾರೆ. ಮುಂದಿನ ವರ್ಷದಿಂದ ಪ್ರಶಸ್ತಿ ಮೊತ್ತವನ್ನು ₨ 40 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದರು.
ಸಾಹಿತಿ ಡಾ.ಎಂ.ಎ.ಜಯಚಂದ್ರ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.