ADVERTISEMENT

ಚುನಾವಣೆಗೆ ಮುನ್ನವೇ ನಿವೇಶನ ಹಂಚಿಕೆಗೆ ಬಿಡಿಎ ಸಿದ್ಧತೆ

ನಾಡಪ್ರಭು ಕೆಂಪೇಗೌಡ ಬಡಾವಣೆ: ಸಿದ್ಧವಾಗಿದೆ ಜ್ಯೇಷ್ಠತಾ ಪಟ್ಟಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 20:23 IST
Last Updated 13 ಮಾರ್ಚ್ 2018, 20:23 IST
ಚುನಾವಣೆಗೆ ಮುನ್ನವೇ ನಿವೇಶನ ಹಂಚಿಕೆಗೆ ಬಿಡಿಎ ಸಿದ್ಧತೆ
ಚುನಾವಣೆಗೆ ಮುನ್ನವೇ ನಿವೇಶನ ಹಂಚಿಕೆಗೆ ಬಿಡಿಎ ಸಿದ್ಧತೆ   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ 5,000 ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ವಿಧಾನಸಭಾ ಚುನಾವಣೆಗೆ ಮುನ್ನವೇ ಪೂರ್ಣಗೊಳಿಸಲು ಬೆಂಗಳೂರು ಅಭಿವೃದ್ಧಿ ‍ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ.

ಇಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು 2017ರ ಡಿ. 29ರಂದು ಬಿಡಿಎ ಅವಕಾಶ ಕಲ್ಪಿಸಿತ್ತು. 2018ರ ಫೆಬ್ರುವರಿ 9ರ ಗಡುವು ನಿಗದಿಪಡಿಸಿತ್ತು. ನಿರೀಕ್ಷಿತ ಪ್ರತಿಕ್ರಿಯೆ ಬಾರದ ಕಾರಣ ಗಡುವನ್ನು ಫೆಬ್ರುವರಿ 23ರವರೆಗೆ ವಿಸ್ತರಿಸಿತ್ತು. ನಿವೇಶನ ಬಯಸಿ ಒಟ್ಟು 15,746 ಮಂದಿ ಅರ್ಜಿ ಹಾಕಿದ್ದಾರೆ.

‘ಚುನಾವಣೆಗೂ ನಿವೇಶನ ಹಂಚಿಕೆಗೂ ಸಂಬಂಧವಿಲ್ಲ. ಆದರೂ ಅರ್ಜಿ ಸಲ್ಲಿಸಿದವರನ್ನು ಕಾಯಿಸಬಾರದು ಎಂಬ ಕಾರಣಕ್ಕೆ ನಾವು ಆದಷ್ಟು ಬೇಗ ಈ ಪ್ರಕ್ರಿಯೆಯನ್ನು ಮುಗಿಸಲಿದ್ದೇವೆ’ ಎಂದು ಬಿಡಿಎ ಅಧ್ಯಕ್ಷ ಕೆ.ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅರ್ಜಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಲಾಗುತ್ತಿದೆ. ಒಂದೆರಡು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇದಾದ ತಕ್ಷಣವೇ ಹಂಚಿಕೆ ಮಾಡಲಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಡಿಎ ಬಡಾವಣೆಗಳಲ್ಲಿ ನಿವೇಶನ ಪಡೆಯಲು ಐದಾರು ಬಾರಿ ಅರ್ಜಿ ಸಲ್ಲಿಸಿಯೂ ವಿಫಲರಾದವರಿದ್ದಾರೆ. ಹಂಚಿಕೆ ವೇಳೆ ಇಂತಹವರಿಗೆ ಆದ್ಯತೆ ನೀಡಬೇಕಾಗುತ್ತದೆ. ಈ ಹಿಂದೆ ಅರ್ಜಿ ಸಲ್ಲಿಸಿ ನಿವೇಶನ ಸಿಗದವರ ಜ್ಯೇಷ್ಠತಾ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಿಕೊಂಡಿದ್ದೇವೆ. ಈ ಬಾರಿ ಬಂದ ಅರ್ಜಿಗಳ ಸಂಖ್ಯೆಯೂ ಕಡಿಮೆ ಇದೆ. ಹಾಗಾಗಿ ಈ ಬಾರಿ ಅರ್ಜಿ ಸಲ್ಲಿಸಿದವರಲ್ಲಿ 5 ಸಾವಿರ ಮಂದಿಯನ್ನು ಜ್ಯೇಷ್ಠತೆ ಆಧಾರದಲ್ಲಿ ಆಯ್ಕೆ ಮಾಡುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ’ ಎಂದರು.

ಈ ಹಿಂದೆ ಬಿಡಿಎ ನಿವೇಶನ ಪಡೆಯಲು ಪ್ರಯತ್ನಿಸಿದವರು ಈ ಬಾರಿ ಮತ್ತೆ ಅರ್ಜಿ ಸಲ್ಲಿಸಿದ್ದರೆ ಮಾತ್ರ ಅವರ ಹೆಸರನ್ನು ಪರಿಗಣಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬಡಾವಣೆಗೆ ಜಾಗ ಬಿಟ್ಟುಕೊಟ್ಟ ರೈತರಿಗೆ ಅಭಿವೃದ್ಧಿಪಡಿಸಿದ 3000 ನಿವೇಶನಗಳನ್ನು ಪ್ರಾಧಿಕಾರವು ನೀಡಲಿದೆ. 

ಈ ಬಡಾವಣೆಯಲ್ಲಿ ಮೊದಲ ಹಂತದಲ್ಲಿ ನಿವೇಶನ ಹಂಚಿಕೆಗೆ 2015ರ ನ.1ರಂದು ಅಧಿಸೂಚನೆ ಪ್ರಕಟಿಸಲಾಗಿತ್ತು. ಒಟ್ಟು 31,369 ಮಂದಿ ಅರ್ಜಿ ಸಲ್ಲಿಸಿದ್ದರು. 5,000 ಮಂದಿಗೆ 2017ರಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಬಡಾವಣೆಗೆ ಜಾಗ ಬಿಟ್ಟುಕೊಟ್ಟ ರೈತರಿಗೆ ಒಟ್ಟು 2,174 ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನೀಡಲಾಗಿತ್ತು.

**

50x80 ಅಡಿ ನಿವೇಶನಕ್ಕೆ ಬೇಡಿಕೆ ಕಡಿಮೆ

ಎರಡನೇ ಹಂತದಲ್ಲಿ 50x80 ಅಡಿ ವಿಸ್ತೀರ್ಣದ ಒಟ್ಟು 300 ನಿವೇಶನಗಳನ್ನು ಹಂಚಿಕೆ ಮಾಡಲು ಬಿಡಿಎ ನಿರ್ಧರಿಸಿತ್ತು. ಆದರೆ,  ಇವುಗಳಿಗೆ 272 ಅರ್ಜಿಗಳು ಮಾತ್ರ ಬಂದಿವೆ. ಹಾಗಾಗಿ, ಇವುಗಳಿಗೆ ಅರ್ಜಿ ಸಲ್ಲಿಸಿದವರಿಗೆಲ್ಲ ನಿವೇಶನಗಳು ಸಿಗಲಿವೆ.

ಈ ನಿವೇಶನಗಳಿಗೆ ₹ 96.88 ಲಕ್ಷ ಶುಲ್ಕ ಪಾವತಿಸಬೇಕಾಗುತ್ತದೆ. ಬೇರೆ ವಿಸ್ತೀರ್ಣದ ನಿವೇಶನಗಳಿಗೆ ಹೋಲಿಸಿದರೆ, ಇವುಗಳ ಬೆಲೆ ತುಸು ದುಬಾರಿ. ಹಾಗಾಗಿ ಜನ ಇವುಗಳ ಖರೀದಿಗೆ ಆಸಕ್ತಿ ವಹಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆರ್ಥಿಕ ದುರ್ಬಲ ವರ್ಗದವರಿಗೆ 20 x 30 ಅಡಿ ವಿಸ್ತೀರ್ಣದ 1000 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಇವುಗಳಿಗೆ ಅತಿಹೆಚ್ಚು (8,257) ಅರ್ಜಿಗಳು ಬಂದಿವೆ.

ಯಾವ ನಿವೇಶನಕ್ಕೆ ಎಷ್ಟು ಅರ್ಜಿ, ಎಷ್ಟು ಶುಲ್ಕ?

ವಿಸ್ತೀರ್ಣ (ಅಡಿ), ಸಂಖ್ಯೆ, ಬಂದ ಅರ್ಜಿ, ನಿವೇಶನದ ಮೌಲ್ಯ (₹ ಲಕ್ಷಗಳಲ್ಲಿ ), ಪ್ರತಿ ಚದರ ಅಡಿ ದರ (₹ಗಳಲ್ಲಿ)

20x30 (ಆರ್ಥಿಕ ದುರ್ಬಲ ವರ್ಗ), 1000, 8257, 5.23, 872

20x30 (ಸಾಮಾನ್ಯ ವರ್ಗ), 500, 1227, 10.46, 1744

30x40, 2500, 4574, 23.25, 1938

60x40, 700, 1416, 52.31, 2180

50x80, 300, 272, 96.88, 2422

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.