ಬೆಂಗಳೂರು: ಹೆಸರಘಟ್ಟ ಹೋಬಳಿ ಐವರಕಂಡಪುರ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾದ ಮಕ್ಕಳ ಜನನ ಪ್ರಮಾಣ ಪತ್ರಕ್ಕಾಗಿ ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಹಿಂದೆ ವೈದ್ಯರಾಗಿದ್ದ ಡಾ.ನಳಿನಿ ಅವರ ಬಗ್ಗೆ ಗ್ರಾಮಸ್ಥರಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಅವರನ್ನು ಬೇರೆ ಕಡೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
‘ಡಾ.ನಳಿನಿ ಅವರ ಸ್ಥಾನಕ್ಕೆ ಬಂದ ವೈದ್ಯರಿಗೆ ಯಾವುದೇ ಕರ್ತವ್ಯವನ್ನು ಹಸ್ತಾಂತರಿಸಿಲ್ಲ. ಅವರ ಅವಧಿಯಲ್ಲಿ ಹೆರಿಗೆಯಾದ ಮಕ್ಕಳ ಜನನ ಪ್ರಮಾಣ ಪತ್ರಕ್ಕೂ ಸಹಿ ಹಾಕಿಲ್ಲ. ಈಗ ಬಂದಿರುವ ವೈದ್ಯರು ನನಗೆ ಯಾವುದೇ ಕರ್ತವ್ಯ ಹೊಣೆಯನ್ನು ನೀಡದ ಕಾರಣ ಪ್ರಮಾಣ ಪತ್ರಕ್ಕೆ ನಾನು ಸಹಿ ಮಾಡಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ಅಸಮಾಧಾನ ತೋಡಿಕೊಂಡರು ಗ್ರಾಮಸ್ಥರು.
‘ಭಾಗ್ಯಲಕ್ಷ್ಮೀ ಬಾಂಡ್‍ಗೆ ಅರ್ಜಿ ಹಾಕಬೇಕಾದರೆ ಜನನ ಪ್ರಮಾಣ ಪತ್ರ ಕಡ್ಡಾಯ. ಆದರೆ, ಪ್ರಮಾಣ ಪತ್ರ ಸಿಗದೇ ತೊಂದರೆಗೊಳಗಾಗಿದ್ದೇವೆ’ ಎಂದು ಮತ್ಕೂರು ಗ್ರಾಮದ ನಿವಾಸಿ ಗೀತಾ ಬೇಸರ ವ್ಯಕ್ತಪಡಿಸಿದರು.
ಯಲಹಂಕ ಉತ್ತರವಲಯದ ವೈದ್ಯಾಧಿಕಾರಿ ಪ್ರಕಾಶ್ ಅವರು ಪ್ರತಿಕ್ರಿಯಿಸಿ ‘ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು ಕೂಡಲೇ ಕ್ರಮ ಕೈಗೊಳ್ಳುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.