ಪೀಣ್ಯ ದಾಸರಹಳ್ಳಿ: ಬಾಗಲಗುಂಟೆ ಬಸ್‌ನಿಲ್ದಾಣದ ಹತ್ತಿರದ ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಫಲಕವನ್ನು ಬಿಬಿಎಂಪಿ ಮಂಗಳವಾರ ತೆಗೆಸಿದೆ. ಪಾಲಿಕೆಯ ಈ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
ಜನೌಷಧಿ ಕೇಂದ್ರವನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಭಾನುವಾರ ಉದ್ಘಾಟಿಸಿದ್ದರು. ಇದು ಸಾರ್ವಜನಿಕರಿಗೆ ಗೊತ್ತಾಗಲೆಂದು ಕೇಂದ್ರದ ಮೇಲೆ ಫಲಕ ಹಾಕಲಾಗಿತ್ತು. ಪಾಲಿಕೆಯ ಪ್ರಹರಿ ದಳದವರು ನಾಮಫಲಕವನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರು. ‘ಅಧಿಕಾರಿಗಳು ಈ ಕೇಂದ್ರದ ಬೋರ್ಡ್ ಮಾತ್ರ ಕೀಳಲು ಆದೇಶಿಸಿದ್ದಾರೆ’ ಎಂದು ಪ್ರಹರಿ ದಳದವರು ಉತ್ತರಿಸಿದರು.
ಪಾಲಿಕೆಯ ಜಂಟಿ ಆಯುಕ್ತ ಡಾ.ಅಶೋಕ್ ಪ್ರತಿಕ್ರಿಯಿಸಿ, ‘ಹೈಕೋರ್ಟ್ ಆದೇಶದಂತೆ ಸಾರ್ವಜನಿಕ ಪ್ರದೇಶದಲ್ಲಿರುವ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ತೆಗೆಸುತ್ತಿದ್ದೇವೆ. ಫ್ಲೆಕ್ಸ್ ಹಾಕಲು ಜನೌಷಧಿ ಮಳಿಗೆಯವರು ಅನುಮತಿ ಪಡೆದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವಿರುವ ಬ್ಯಾನರ್ ತೆಗೆದಿಲ್ಲ. ಸದಾನಂದ ಗೌಡ ಹಾಗೂ ಬಿಜೆಪಿ ಮುಖಂಡ ಮುನಿರಾಜು ಚಿತ್ರಗಳಿರುವ ಫ್ಲೆಕ್ಸ್‌ಗಳನ್ನು ತೆಗೆಸಿದ್ದೇವೆ’ ಎಂದು ಸ್ಪಷ್ಟಪಡಿಸಿದರು.
ವಿಷಯ ತಿಳಿದು ಸಾರ್ವಜನಿಕರು ಜನೌಷಧಿ ಕೇಂದ್ರದ ಬಳಿ ತೆರಳಿ ಪಾಲಿಕೆ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ, '24 ಗಂಟೆಯೊಳಗಾಗಿ ಫಲಕ ಹಾಕದಿದ್ದರೆ ಬಿಬಿಎಂಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ಎಚ್ಚರಿಸಿದರು.
‘ಅಕ್ಕಪಕ್ಕದಲ್ಲೇ ಬಾರ್, ಹೋಟೆಲ್ ಹಾಗೂ ಅಂಗಡಿಗಳ ಬೋರ್ಡ್‌ಗಳು ರಾರಾಜಿಸುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಸದಾನಂದ ಗೌಡ, ‘ನಾನು ಉದ್ಘಾಟಿಸಿರುವ ಜನೌಷಧಿ ಕೇಂದ್ರದ ಫಲಕವನ್ನು ಪ್ರಹರಿ ದಳದವರು ಕಿತ್ತುಕೊಂಡು ಹೋಗಿರುವುದು ಯಾವ ಕಾರಣಕ್ಕೆ ಎಂದು ತಿಳಿಸಿರಿ. ಬಡ ಜನರಿಗೋಸ್ಕರ ಇರುವ ಈ ಸೌಲಭ್ಯವನ್ನು ತಿಳಿಸುವ ನಾಮಫಲಕ ಕೀಳಿಸಿದ ರೋಗಗ್ರಸ್ತ ಮನಸು ಯಾವುದು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿರುವ ಬಡವರ ಯೋಜನೆಗೆ ಅಡ್ಡಿ ಬಂದರೆ ನಿಮ್ಮ ಮುಖ್ಯಮಂತ್ರಿ ಹೆಸರಿನ ನಾಮಫಲಕವನ್ನು ಇದೇ ಜನಸಾಮಾನ್ಯರು ಜನಾದೇಶದ ಮೂಲಕ ಇಳಿಸುತ್ತಾರೆ ಎಂಬ ಆಲೋಚನೆ ನಿಮ್ಮ ಪಕ್ಷದ ಶಾಸಕರಿಗೆ ಇಲ್ಲದಿರುವುದು ದುರದೃಷ್ಟಕರ' ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.