ಬೆಂಗಳೂರು: ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮೂಲಕ ಸಂಗ್ರಹಿಸಿದ ಮಾಹಿತಿ ಕ್ರೋಡೀಕರಿಸುವ ಕೆಲಸ ಇನ್ನು 15 ದಿನಗಳಲ್ಲಿ ಪೂರ್ಣವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸಮೀಕ್ಷೆಯಲ್ಲಿ ದೊರೆತ ಶೇಕಡ 90ರಷ್ಟು ಮಾಹಿತಿ ಕ್ರೋಡೀಕರಣ ಮುಗಿದಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ವೆಬ್‌ಸೈಟ್ ಮೂಲಕ ಸಾರ್ವಜನಿಕರ ಪರಿಶೀಲನೆಗೆ ಮುಕ್ತಗೊಳಿಸುವ ಬಗ್ಗೆ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕು. ಅದು ಆಯೋಗದ ವ್ಯಾಪ್ತಿಗೆ ಸೇರಿದ್ದಲ್ಲ. ಸಮೀಕ್ಷೆ ನಡೆಸಿ ವರದಿ ಸಲ್ಲಿಸುವುದು ಆಯೋಗದ ಕೆಲಸ ಎಂದು ಅವರು ಸ್ಪಷ್ಟಪಡಿಸಿದರು.
ಸಾರ್ವಜನಿಕರ ಜಾತಿ ಸೇರಿದಂತೆ ಸಾಮಾಜಿಕ ಮತ್ತು ಆರ್ಥಿಕ ವಿವರಗಳನ್ನು ಸಂಗ್ರಹಿಸಿದ ನಂತರ ಅವುಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ತಾವು ನೀಡಿದ ಮಾಹಿತಿ ಸರಿಯಾಗಿ ದಾಖಲಾಗಿದೆಯೇ, ಇಲ್ಲವೇ ಎಂಬುದನ್ನು ಸಾರ್ವಜನಿಕರು ಪರಿಶೀಲಿಸಿ, ತಿದ್ದುಪಡಿ ಸೂಚಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಈ ಮೊದಲು ತಿಳಿಸಿತ್ತು.
ಜೂನ್ ಆರಂಭದಲ್ಲಿ ಈ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ಇಲಾಖೆ, ಹೈಕೋರ್ಟ್ ಸೂಚನೆ ಆಧರಿಸಿ ಮಾಹಿತಿ ಹಿಂಪಡೆಯಿತು.
‘ಮಾಹಿತಿ ಪ್ರಕಟಿಸಬಹುದು ಎಂದಾದರೆ, ಯಾವ ಮಾಹಿತಿಯನ್ನು ಪ್ರಕಟಿಸಬೇಕು ಎಂಬ ಬಗ್ಗೆಯೂ ಮುಖ್ಯಮಂತ್ರಿಯವರ ಜೊತೆ ಚರ್ಚಿಸಬೇಕು’ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.
‘ಮಹಿಳೆಯರ ವೈಯಕ್ತಿಕ ಮಾಹಿತಿ ಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಡಿ ಎಂದು ನ್ಯಾಯಾಲಯ ನೀಡಿದ ಆದೇಶ ಮತ್ತು ಜಾತಿ ಸಮೀಕ್ಷೆಯ ವಿವರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬಹುದೇ ಎಂಬ ಬಗ್ಗೆ ಅಡ್ವೊಕೇಟ್ ಜನರಲ್ ಅವರಿಂದ ಅಭಿಪ್ರಾಯ ಪಡೆಯಲಾಗಿದೆ. ಸಮೀಕ್ಷೆಯ ಕೆಲವು ವಿವರ ಪ್ರಕಟಿಸಬಹುದು ಎಂಬ ಅಭಿಪ್ರಾಯ ಬಂದಿದೆ’ ಎಂದು ಮಾಹಿತಿ ನೀಡಿದರು.
‘ನಾನು ನೀಡಿದ ಮಾಹಿತಿಯನ್ನು ಗಣತಿದಾರರು ತಪ್ಪಾಗಿ ನಮೂದಿಸಿರಬಹುದು ಎಂಬ ಅನುಮಾನ ಇದ್ದೇ ಇರುತ್ತದೆ. ಪರಿಶೀಲನೆಗೆ ಅವಕಾಶ ಕಲ್ಪಿಸಿದ್ದರೆ ಒಳ್ಳೆಯದಿತ್ತು’ ಎಂದು ಬೆಂಗಳೂರು ನಿವಾಸಿ ನಾರಾಯಣ ತಿಳಿಸಿದರು.
* ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬಹುದೇ ಎಂಬ ಬಗ್ಗೆ ಸಿ.ಎಂ ಜೊತೆ ಚರ್ಚಿಸಿ ತೀರ್ಮಾನಿಸಬೇಕು
-ಎಚ್. ಆಂಜನೇಯ
ಸಮಾಜ ಕಲ್ಯಾಣ ಸಚಿವ
ಅಂಕಿ–ಅಂಶ
1.41 ಕೋಟಿ ಕುಟುಂಬಗಳಿಂದ ಮಾಹಿತಿ ಸಂಗ್ರಹ
2,581 ಕುಟುಂಬಗಳು ಮಾಹಿತಿ ನೀಡಲು ನಿರಾಕರಿಸಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.