ಬೆಂಗಳೂರು: ನಮ್ಮ ಬೆಂಗಳೂರು ಪ್ರತಿಷ್ಠಾನದ ವತಿಯಿಂದ ಐಐಎಸ್ಸಿಯ ವಿಜ್ಞಾನಿ ಟಿ.ವಿ. ರಾಮಚಂದ್ರ ಅವರಿಗೆ ಭಾನುವಾರ ‘2016ನೇ ಸಾಲಿನ ವರ್ಷದ ನಮ್ಮ ಬೆಂಗಳೂರಿಗ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹2 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.
ರಾಮಚಂದ್ರ ಮಾತನಾಡಿ, ‘ಬೆಂಗಳೂರು ನಗರವನ್ನು ಜಮೀನು, ನೀರು ಮತ್ತು ತ್ಯಾಜ್ಯ ಮಾಫಿಯಾಗಳು ಆಳುತ್ತಿವೆ. ಅವುಗಳ ವಿರುದ್ಧ ಧ್ವನಿ ಎತ್ತಿದಾಗ ಹಲವಾರು ಬೆದರಿಕೆ ಕರೆಗಳು ಬಂದಿದ್ದವು. ಅವುಗಳಿಗೆ ಬಗ್ಗದೆ ನಗರದ ಶ್ರೇಯೋಭಿವೃದ್ಧಿಗೆ ಸಮಾಜಮುಖಿ ಕೆಲಸವನ್ನು ಮುಂದುವರಿಸುತ್ತೇನೆ’ ಎಂದು ಹೇಳಿದರು.
‘ಪ್ರಶಸ್ತಿಯ ಹಣದಿಂದ ಶಾಲೆಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗಾಗಿ ಘಟಕ ಸ್ಥಾಪನೆ ಮಾಡುತ್ತೇನೆ’ ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ ಮಾತನಾಡಿ, ‘ಬೆಂಗಳೂರು ಅತ್ಯಂತ ಕ್ರಿಯಾಶೀಲ ಹಾಗೂ ವೇಗವಾಗಿ ಬದಲಾಗುತ್ತಿರುವ ನಗರ ಎಂಬ ಖ್ಯಾತಿ ಪಡೆದಿದೆ. ಆದರೆ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ನಗರದ ಎರಡು ನಕಾರಾತ್ಮಕ ಅಂಶಗಳಾಗಿವೆ. ಮುಂದಿನ ಪೀಳಿಗೆಯು ಈ ಸಮಸ್ಯೆಗಳಿಂದ ಮುಕ್ತವಾಗಲು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದು ಸಲಹೆ ನೀಡಿದರು.
‘ನಮ್ಮ ಬೆಂಗಳೂರು ವಾರ್ಷಿಕ ಪ್ರಶಸ್ತಿ’ ಪುರಸ್ಕೃತರು (ಪ್ರಶಸ್ತಿ ಮೊತ್ತ ತಲಾ ₹ ಲಕ್ಷ): ಜಗನ್ನಾಥ್ ರಾವ್ (ಸರ್ಕಾರಿ ಅಧಿಕಾರಿ), ಗೀತಾ ಮೆನನ್ (ವರ್ಷದ ನಾಗರಿಕ), ಹರ್ಷಿಲ್ (ಉದಯೋನ್ಮುಖ ತಾರೆ), ಜಾಸ್ಮಿನ್ ಪತೇಜಾ (ಸಾಮಾಜಿಕ ಉದ್ಯಮಿ), ಧನ್ಯಾ ರಾಜೇಂದ್ರನ್ (ಮಾಧ್ಯಮ ವ್ಯಕ್ತಿ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.