ADVERTISEMENT

ಟಿ.ವಿ ಜ್ಯೋತಿಷಿಗಳ ಮಾತು ನಂಬಬೇಡಿ

ನಂಬಿಕೆ–ಹುಸಿನಂಬಿಕೆ ವಿಚಾರ ಸಂಕಿರಣದಲ್ಲಿ ಮನೋವೈದ್ಯ ಡಾ.ಸಿ.ಆರ್‌.ಚಂದ್ರಶೇಖರ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 20:16 IST
Last Updated 26 ಜುಲೈ 2017, 20:16 IST
ಡಾ.ಸಿ.ಆರ್‌.ಚಂದ್ರಶೇಖರ್‌ ಉಪನ್ಯಾಸ ನೀಡಿದರು –ಪ್ರಜಾವಾಣಿ ಚಿತ್ರ
ಡಾ.ಸಿ.ಆರ್‌.ಚಂದ್ರಶೇಖರ್‌ ಉಪನ್ಯಾಸ ನೀಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಟಿ.ವಿ ಮಾಧ್ಯಮಗಳಲ್ಲಿ ಜ್ಯೋತಿಷ ಹೇಳುವ ಸ್ವಾಮೀಜಿಗಳ ಮಾತು ನಂಬಬೇಡಿ. ಅವರು ಜನರ ನಂಬಿಕೆ ಬಂಡವಾಳ ಮಾಡಿಕೊಂಡು ಮುಗ್ಧರನ್ನು ಶೋಷಣೆ ಮಾಡುತ್ತಿದ್ದಾರೆ’ ಎಂದು  ಮನೋವೈದ್ಯ ಹಾಗೂ  ಲೇಖಕ ಡಾ.ಸಿ.ಆರ್‌.ಚಂದ್ರಶೇಖರ್‌ ತಿಳಿಸಿದರು.

ಬೆಂಗಳೂರು ವಿಜ್ಞಾನ ವೇದಿಕೆ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ನಂಬಿಕೆಗಳು ಮತ್ತು ಹುಸಿ ನಂಬಿಕೆಗಳು’ ವಿಚಾರಸಂಕಿರಣದಲ್ಲಿ ಮಾತನಾಡಿದರು.
‘ನಿಮ್ಮ ಗ್ರಹಚಾರ ಸರಿ ಇಲ್ಲ. ಅದೃಷ್ಟ ಸರಿ ಇಲ್ಲ, ಇದಕ್ಕೆ ನಿಮ್ಮ ಜನ್ಮಕುಂಡಲಿಯಲ್ಲಿ ದೋಷವಿದೆ ಎನ್ನುತ್ತಾರೆ.

ನಿಮ್ಮ ಆರ್ಥಿಕ ಪರಿಸ್ಥಿತಿ, ಆರೋಗ್ಯ ಸರಿಯಾಗಬೇಕಾದರೆ ನವಗ್ರಹ ಪೂಜೆ, ಶಾಂತಿ, ಹೋಮ ಮಾಡಿಸಿ, ಅದೃಷ್ಟದ ತಾಯತ, ಬಳೆ, ಉಂಗುರ ಧರಿಸಿ ಎನ್ನುವ ಸಲಹೆ ಕೊಡುತ್ತಾರೆ. ಟಿ.ವಿ ಗಳಲ್ಲಿ ಬಂದು ಕೂರುವ ಜ್ಯೋತಿಷಿಗಳು, ಪೂಜಾರಿಗಳ ಮಾತು ನಂಬಲೇಬೇಡಿ. ಅವರು ಟಿ.ವಿ ಮಾಧ್ಯಮಗಳೊಂದಿಗೆ ಹಣಕಾಸು ಒಪ್ಪಂದ ಮಾಡಿಕೊಂಡು, ಲಾಭದ ವ್ಯವಹಾರ ನಡೆಸುತ್ತಿದ್ದಾರೆ. ಅವರಿಗೆ ಜ್ಯೋತಿಷ ಗೊತ್ತಿಲ್ಲ’ ಎಂದು ಎಚ್ಚರಿಸಿದರು.

ADVERTISEMENT

‘ನಮ್ಮ ಸಮಾಜದಲ್ಲಿ ಕೆಲವು ‘ಭಯೋತ್ಪಾದಕ ದೇವಸ್ಥಾನಗಳು’ ಇವೆ. ಅಲ್ಲಿರುವ ದೇವರುಗಳಿಗೆ ರಕ್ತಬಲಿ ಕೊಡಬೇಕು. ಇಲ್ಲದಿದ್ದರೆ ಸಾಂಕ್ರಾಮಿಕ ರೋಗ ಹರಡಿ ಜನರ ಜೀವ ಬಲಿ ಪಡೆಯುತ್ತವೆ ಎನ್ನುವ ಹುಸಿ ನಂಬಿಕೆಗಳನ್ನು ಸಮಾಜಕ್ಕೆ ಬಿತ್ತಲಾಗಿದೆ.

ಪ್ರಾಣಿಬಲಿಗೆ ಕಾನೂನಾತ್ಮಕ  ನಿಷೇಧ ವಿದ್ದರೂ ಭಯೋತ್ಪಾದಕ ದೇವರುಗಳಿಗೆ ಕುರಿ, ಕೋಳಿ, ಕೋಣ ಬಲಿ ಕೊಡು ವುದು ನಿರಂತರ ನಡೆಯುತ್ತಿದೆ. ಜನರ ಮೇಲಿನ ದೆವ್ವ ಬಿಡಿಸುವುದಾಗಿಯೂ ದೇವಸ್ಥಾನ, ಮಂದಿರ, ಚರ್ಚ್‌, ದರ್ಗಾಗಳು ರಾಜಾರೋಷವಾಗಿ ಶೋಷಣೆ ಮಾಡುತ್ತಿವೆ’ ಎಂದು ಕಿಡಿಕಾರಿದರು.

***

ಕೊಲೆ, ಸುಲಿಗೆ, ದೌರ್ಜನ್ಯ, ಅತ್ಯಾಚಾರ ನಿರಂತರ ನಡೆಯುತ್ತಿವೆ. ದೇವರು ಏಕೆ ಇದನ್ನು ತಡೆದು ನಿಲ್ಲಿಸುತ್ತಿಲ್ಲ. ಸಮಾಜಘಾತಕ ಶಕ್ತಿಗಳನ್ನು ಏಕೆ ಶಿಕ್ಷಿಸುತ್ತಿಲ್ಲ
ಡಾ.ಸಿ.ಆರ್‌.ಚಂದ್ರಶೇಖರ್‌, ಮನೋವೈದ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.