ADVERTISEMENT

ತುಳು ಭಾಷೆ ನಿರ್ಲಕ್ಷ್ಯ ನಾಚಿಕೆಗೇಡು: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:57 IST
Last Updated 21 ಏಪ್ರಿಲ್ 2013, 19:57 IST

ಬೆಂಗಳೂರು: `ಒಂದು ಕೋಟಿ ಜನರ ಭಾಷೆಯಾಗಿರುವ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಲು ಸಾಧ್ಯವಾಗದೇ ಇರುವುದು ನಾಚಿಕೆಗೇಡಿನ ಸಂಗತಿ' ಎಂದು ಬರಹಗಾರ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು ತುಳುಕೂಟ ನಗರದಲ್ಲಿ ಭಾನುವಾರ ಆಯೋಜಿಸಿದ್ದ `ಬಿಸು ಹಬ್ಬ' ಕಾರ್ಯಕ್ರಮದಲ್ಲಿ `ತೌಳ ವಶ್ರೀ' ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

`22 ಲಕ್ಷ ಮಂದಿಯ ಭಾಷೆಯಾಗಿರುವ ನೇಪಾಳಿ, ಸಿಂಧಿ ಭಾಷೆಗಳನ್ನು ಪರಿಚ್ಛೇದದಲ್ಲಿ ಸೇರ್ಪಡೆ ಮಾಡಲಾಗಿದೆ. ಆದರೆ, ಬಹುಜನರ ಭಾಷೆ ಯಾದ ತುಳುವನ್ನು ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಸೀತಾಕಾಂತ ಮಹಾಪಾತ್ರ ಸಮಿತಿ ವರದಿ ನೀಡಿದ್ದು, ಇದನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ' ಎಂದು ಸಲಹೆ ನೀಡಿದರು.

`ತುಳು ಭಾಷೆ ಹಾಗೂ ಕುಂದ ಕನ್ನಡದಲ್ಲಿ ಬಹುತೇಕ ಸಾಮ್ಯ ಪದಗಳಿವೆ. ಪಂಪನ ಕಾವ್ಯದಲ್ಲೂ ತುಳು ಪದದ ಪ್ರಯೋಗವಿದೆ. ಕನ್ನಡ ಭಾಷೆಯಷ್ಟೇ ತುಳು ಕೂಡ 2 ಸಾವಿರ ವರುಷಗಳಷ್ಟು ಪ್ರಾಚೀನ ಭಾಷೆ ಎಂಬುದಕ್ಕೆ ಹಲವು ದಾಖಲೆಗಳು ಪುಷ್ಟಿ ನೀಡುತ್ತವೆ' ಎಂದರು.
`ಆಂಗ್ಲ ಮಾಧ್ಯಮದ ಪ್ರಭಾವ ತುಳು ಭಾಷೆಯ ಮೇಲೆ ಆಗಿದೆ. ಮುಂದಿನ ಜನಾಂಗಕ್ಕೂ ತುಳುಭಾಷೆಯ ಸೊಗಡು ತಲುಪುವಂತೆ ನೋಡಿಕೊಳ್ಳುವ ಜವಾಬ್ದಾರಿ ತುಳು ಭಾಷಿಗರ ಮೇಲಿದೆ' ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಮಾತನಾಡಿ, `ತುಳು ಭಾಷಿಗರು ತುಳುವಿನೊಂದಿಗೆ ಕನ್ನಡವನ್ನು ಉಳಿಸುವತ್ತ ಹೆಚ್ಚಿನ ಆಸ್ಥೆ ವಹಿಸಬೇಕು ಎಂದರು.

`ನನ್ನ ಮೂಲ ಬೇರುಗಳು ದಕ್ಷಿಣ ಕನ್ನಡದಲ್ಲಿ ಇರುವುದರಿಂದ ಈ ಭಾಗದ ಹೆಸರು ಕೇಳಿದರೆ ಮೈ ಪುಳಕಗೊಳ್ಳುತ್ತದೆ. ಈ ನೆಲದ ಸಂಸ್ಕೃತಿ, ಆಚಾರ ವಿಚಾರಗಳು ಎಂದಿಗೂ ಬದುಕಿನ ಅದಮ್ಯ ಪ್ರೀತಿಗೆ ಸಾಕ್ಷಿ' ಎಂದರು. ಸಮಾಜಸೇವಕ ಯು.ಭೋಜರಾಜ್ ಅವರಿಗೂ `ತೌಳವಶ್ರೀ' ಪ್ರದಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪಕಾರ್ಯದರ್ಶಿ ಕೆ.ಸುಧಾಕರಶೆಟ್ಟಿ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.