ಬೆಂಗಳೂರು: ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲವೆಂಬ ಕಾರಣಕ್ಕೆ ತೃತೀಯ ಲಿಂಗಿ ನವೀನ್ ಅಲಿಯಾಸ್ ಪ್ರೀತಿ ಎಂಬುವರನ್ನು ಕೊಂದಿದ್ದ ಅಪರಾಧಿ ಅಬ್ದುಲ್ ಫರೀದ್ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ಆದೇಶ ಹೊರಡಿಸಿದೆ.
‘ಆರೋಪಿ ವಿರುದ್ಧದ ಆರೋಪಗಳು ಸಾಬೀತಾಗಿವೆ. ಜೀವಾವಧಿ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಲಾಗಿದೆ. ಅದನ್ನು ತುಂಬದಿದ್ದರೆ, ಹೆಚ್ಚುವರಿಯಾಗಿ 3 ತಿಂಗಳ ಸಾದಾ ಶಿಕ್ಷೆ ಅನುಭವಿಸಬೇಕು’ ಎಂದುನ್ಯಾಯಾಧೀಶಶಿವಶಂಕರ್ ಅಮರಣ್ಣನವರ ಅವರುಆದೇಶದಲ್ಲಿ ಉಲ್ಲೇಖಿಸಿದ್ದಾರೆ.ಪಬ್ಲಿಕ್ ಪ್ರಾಸಿಕ್ಯೂಟರ್ ಚನ್ನಪ್ಪ ಹರಸೂರ ವಾದಿಸಿದ್ದರು.
ಪ್ರಕರಣದ ವಿವರ:ನವೀನ್ ಅಲಿಯಾಸ್ ಪ್ರೀತಿ, 2011ರ ಅಕ್ಟೋಬರ್ 28ರಂದು ಸಂಜೆ ಮೈಸೂರು ರಸ್ತೆಯ ಶಾಮಣ್ಣ ಗಾರ್ಡನ್ ಬಳಿಯ ಕೃಷ್ಣಪ್ಪ ಬೀರು ಕಾರ್ಖಾನೆ ಮುಂಭಾಗದಲ್ಲಿ ನಡೆದುಕೊಂಡು ಹೊರಟಿದ್ದರು.
ಅದೇ ವೇಳೆ ಅಪರಾಧಿ, ಅವರನ್ನುಲೈಂಗಿಕ ಕ್ರಿಯೆಗೆ ಕರೆದಿದ್ದ. ನಿರಾಕರಿಸಿದ್ದ ಅವರು, ತಮ್ಮ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದರು. ಹಿಂಬಾಲಿಸಿಕೊಂಡು ಹೋದ ಅಪರಾಧಿ, ಚಾಕುವಿನಿಂದ ಹೊಟ್ಟೆಗೆ ಚುಚ್ಚಿದ್ದ.
ಸಾರ್ವಜನಿಕರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಹೋಗಿದ್ದ ಗಸ್ತಿನಲ್ಲಿದ್ದ ಕಾನ್‌ಸ್ಟೆಬಲ್‌ಗಳಾದ ವೆಂಕಟೇಶ್ವರ ಹಾಗೂ ರಾಮಕೃಷ್ಣ, ರಕ್ತದ ಮಡುವಿನಲ್ಲಿ ಬಿದ್ದಿದ್ದ ನವೀನ್ ಅಲಿಯಾಸ್ ಪ್ರೀತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ನವೆಂಬರ್ 15ರಂದು ಅವರು ಮೃತಪಟ್ಟಿದ್ದರು.
ಆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಟರಾಯನಪುರ ಠಾಣೆ ಇನ್‌ಸ್ಪೆಕ್ಟರ್ ಟಿ.ಕೋದಂಡರಾಮ್,ಅಬ್ದುಲ್ ಫರೀದ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.