ADVERTISEMENT

ತ್ಯಾಜ್ಯ ವಿಲೇವಾರಿ: ಶೀಘ್ರವೇ ಹೊಸ ಕಾನೂನು

ಕಸ ವಿಂಗಡಣೆ ಕಾನೂನು ಉಲ್ಲಂಘನೆ: ದಂಡ ವಿಧಿಸಲು ಸರ್ಕಾರ, ಪಾಲಿಕೆ ವಿಫಲ: ಅಲ್‌ಮಿತ್ರಾ ಪಟೇಲ್

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2016, 19:30 IST
Last Updated 23 ಫೆಬ್ರುವರಿ 2016, 19:30 IST
ಅಲ್‌ಮಿತ್ರಾ ಪಟೇಲ್ (ಬಲದಿಂದ ಎರಡನೆಯವರು) ಮತ್ತು ತೇಜಸ್ವಿನಿ ಅನಂತಕುಮಾರ್‌ ಅವರು ಕಾರ್ಯಕ್ರಮದಲ್ಲಿ ಪರಸ್ಪರ ಕಸದ  ಬಕೆಟ್‌ಗಳನ್ನು ವಿನಿಮಯ ಮಾಡಿಕೊಂಡರು. (ಎಡದಿಂದ) ‘ಸ್ಟೂಡೆಂಟ್ಸ್‌ ಫಾರ್‌ ಡೆವಲಪ್‌ಮೆಂಟ್‌’ ಸಂಘಟನೆ ಸಂಚಾಲಕ ಎಸ್‌.ಪ್ರೇಮ್‌, ಪ್ರೊ.ರಾಜಶೇಖರ ಮೂರ್ತಿ ಮತ್ತು ಪ್ರೊ.ಟಿ.ವಿ.ರಾಮಚಂದ್ರ  ಚಿತ್ರದಲ್ಲಿದ್ದಾರೆ. –ಪ್ರಜಾವಾಣಿ ಚಿತ್ರ
ಅಲ್‌ಮಿತ್ರಾ ಪಟೇಲ್ (ಬಲದಿಂದ ಎರಡನೆಯವರು) ಮತ್ತು ತೇಜಸ್ವಿನಿ ಅನಂತಕುಮಾರ್‌ ಅವರು ಕಾರ್ಯಕ್ರಮದಲ್ಲಿ ಪರಸ್ಪರ ಕಸದ ಬಕೆಟ್‌ಗಳನ್ನು ವಿನಿಮಯ ಮಾಡಿಕೊಂಡರು. (ಎಡದಿಂದ) ‘ಸ್ಟೂಡೆಂಟ್ಸ್‌ ಫಾರ್‌ ಡೆವಲಪ್‌ಮೆಂಟ್‌’ ಸಂಘಟನೆ ಸಂಚಾಲಕ ಎಸ್‌.ಪ್ರೇಮ್‌, ಪ್ರೊ.ರಾಜಶೇಖರ ಮೂರ್ತಿ ಮತ್ತು ಪ್ರೊ.ಟಿ.ವಿ.ರಾಮಚಂದ್ರ ಚಿತ್ರದಲ್ಲಿದ್ದಾರೆ. –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಘನತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಮತ್ತು ತ್ಯಾಜ್ಯ ಪುನರ್‌ ಬಳಕೆ ಕುರಿತು ಶೀಘ್ರದಲ್ಲಿಯೇ ಹೊಸ ಕಾನೂನು ಬರಲಿದೆ’ ಎಂದು ಸುಪ್ರೀಂ ಕೋರ್ಟ್‌ ರಚಿಸಿರುವ ಘನತ್ಯಾಜ್ಯ ನಿರ್ವಹಣಾ ಸಮಿತಿಯ ಸದಸ್ಯೆ ಅಲ್‌ಮಿತ್ರಾ ಪಟೇಲ್ ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಇಂಧನ ಮತ್ತು ಜಲಮೂಲಗಳ ಸಂಶೋಧನೆ ಗುಂಪು (ಇಡಬ್ಲ್ಯೂಆರ್‌ಜಿ) ಮಂಗಳವಾರ ಆಯೋಜಿಸಿದ್ದ ‘ನಗರದ ಘನತ್ಯಾಜ್ಯ ನಿರ್ವಹಣೆ’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸೋಮವಾರ ನಡೆದ ಸಮಿತಿಯ ಸಭೆಯಲ್ಲಿ ಕಾನೂನಿನ ಬಗ್ಗೆ ಚರ್ಚೆ ನಡೆದಿದೆ. ತ್ಯಾಜ್ಯ ನಿರ್ವಹಣೆ ಬಗ್ಗೆ ಮಾರ್ಗದರ್ಶಿ ಸೂತ್ರಗಳ ರಚನಾ ಕಾರ್ಯಕ್ಕೆ ಕೂಡ ಚಾಲನೆ ದೊರೆತಿದೆ’ ಎಂದು ತಿಳಿಸಿದರು.

‘ಪ್ರತಿಯೊಬ್ಬರು ಎರಡು ಬಿನ್ ಒಂದು ಬ್ಯಾಗ್ ಪದ್ಧತಿ ಅಳವಡಿಸಿಕೊಂಡು ಕಡ್ಡಾಯವಾಗಿ ತ್ಯಾಜ್ಯ ವಿಂಗಡನೆ ಮಾಡಬೇಕು ಎಂದು ನಿರ್ದೇಶನ ನೀಡಿರುವ ರಾಜ್ಯ ಹೈಕೋರ್ಟ್‌, ಹಾಗೆ ಮಾಡದವರಿಗೆ ದಂಡ ವಿಧಿಸುವಂತೆ ಪಾಲಿಕೆ ಮತ್ತು ಸರ್ಕಾರಕ್ಕೆ ಸೂಚಿಸಿದೆ. ಆದರೆ ಅದು ಈವರೆಗೆ ನಮ್ಮಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ’ ಎಂದರು.

‘ವೈಜ್ಞಾನಿಕ ವಿಲೇವಾರಿಯಿಂದ ಮಾತ್ರ ತ್ಯಾಜ್ಯ ಸಮಸ್ಯೆಯನ್ನು ಬಗೆಹರಿಸ ಬಹುದಾಗಿದೆ. ಕೊಳೆಯುವಂತಹ ತ್ಯಾಜ್ಯ ವನ್ನು ಮಾತ್ರ ಭೂಭರ್ತಿ ಘಟಕಕ್ಕೆ ಸಾಗಿಸಬೇಕು. ಇನ್ನುಳಿದಂತೆ ಸ್ಯಾನಿಟರಿ ಮತ್ತು ಅಪಾಯಕಾರಿ ತ್ಯಾಜ್ಯವನ್ನು ಸಂಬಂಧಪಟ್ಟ ಸಂಸ್ಕರಣಾ ಘಟಕಗಳಿಗೆ ಕಳುಹಿಸಬೇಕು’ ಎಂದು ಹೇಳಿದರು.

ಕಸದ ತೊಟ್ಟಿಯೇ ಇಲ್ಲ: ‘ಅದಮ್ಯ ಚೇತನ’ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ‘ಸಂಸ್ಥೆಯ ಅಡುಗೆಮನೆಯಲ್ಲಿ ನಿತ್ಯ 70 ಸಾವಿರ ಮಕ್ಕಳಿಗೆ ಅಡುಗೆ ತಯಾರಿಸಲಾಗುತ್ತದೆ. ಕೆಲ ವರ್ಷಗಳ ಹಿಂದೆ ನಮ್ಮಲ್ಲಿ ಪ್ರತಿದಿನ 500 ಕೆ.ಜಿಯಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿತ್ತು. ಅದನ್ನು ನಾವು ಯಾವುದೇ ತಂತ್ರಜ್ಞಾನ, ತಂತ್ರಜ್ಞರ ಸಹಾಯವಿಲ್ಲದೆ ಶೂನ್ಯಕ್ಕೆ ಇಳಿಸಿದ್ದೇವೆ. ಇವತ್ತು ನಮ್ಮ ಅಡುಗೆ ಮನೆಯಲ್ಲಿ ಒಂದೇ ಒಂದು ಕಸ ಡಬ್ಬಿ ಇಟ್ಟುಕೊಂಡಿಲ್ಲ’ ಎಂದರು.

‘ಹಸಿ ಮತ್ತು ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಪುನರ್‌ಬಳಕೆ ಮಾಡಿಕೊಳ್ಳುತ್ತಿರುವ ಪರಿಣಾಮ ನಮಗೆ ಶೇ 50 ರಷ್ಟು ಇಂಧನ ವೆಚ್ಚ ಉಳಿತಾಯ ವಾಗುತ್ತಿದೆ. ಸಣ್ಣ ಸಣ್ಣ ಸಂಗತಿಗಳು ಕೂಡ ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ ಎನ್ನುವುದನ್ನು ಮರೆಯಬಾರದು’ ಎಂದು ಅವರು ತಿಳಿಸಿದರು.

‘ಮನೆಯೊಂದರ ಒಟ್ಟು ತ್ಯಾಜ್ಯದಲ್ಲಿ ಶೇ 66ರಷ್ಟು ಪ್ರಮಾಣ ಅಡುಗೆ ಮನೆಯಿಂದಲೇ ಬಂದಿರುತ್ತದೆ. ಅದನ್ನು ವಿವಿಧ ರೂಪದಲ್ಲಿ ಪುನರ್‌ ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ. ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಬದಲಾವಣೆ ಎನ್ನುವುದು ವ್ಯಕ್ತಿಗತ ನೆಲೆಯಿಂದ ಆರಂಭಗೊಳ್ಳುವ ಅಗತ್ಯವಿದೆ’ ಎಂದು ಒತ್ತಿ ಹೇಳಿದರು.

ಇಡಬ್ಲ್ಯೂಆರ್‌ಜಿ ಸಂಯೋಜಕ ಪ್ರೊ.ಟಿ.ವಿ.ರಾಮಚಂದ್ರ ಮಾತನಾಡಿ, ‘ಸಂವಿಧಾನದಡಿಯಲ್ಲಿ ಸ್ವಚ್ಛ ಪರಿಸರ, ಶುದ್ಧ ಗಾಳಿ, ಕುಡಿಯುವ ನೀರು ಪಡೆಯುವುದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಸ್ವಚ್ಛ ಪರಿಸರ ಕಾಪಾಡಿಕೊಳ್ಳದವರನ್ನು ಜೈಲಿಗೆ ಕಳುಹಿಸಲು ಅವಕಾಶವಿದೆ. ದುರದೃಷ್ಟ ವಶಾತ್‌, ನಮ್ಮಲ್ಲಿ ಈವರೆಗೆ ಸ್ವಚ್ಛ ಪರಿಸರಕ್ಕೆ ಆಗ್ರಹಿಸಿ ಬೆರಳೆಣಿಕೆ ಜನ ಕೋರ್ಟ್‌ ಮೆಟ್ಟಿಲೇರಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಪರಿಸರ ಸಂಶೋಧನಾ ಪ್ರತಿಷ್ಠಾನದ ಸಂಸ್ಥಾಪಕ ಪ್ರೊ.ರಾಜಶೇಖರ ಮೂರ್ತಿ ಮಾತನಾಡಿ, ‘ವ್ಯಾಪಕವಾಗಿ ಹೆಚ್ಚುತ್ತಿರುವ ನಗರೀಕರಣದಿಂದ ಚಿಕ್ಕ ಪ್ರದೇಶದಲ್ಲಿ ಜನದಟ್ಟಣೆ ಹೆಚ್ಚುತ್ತ, ತ್ಯಾಜ್ಯ ವಿಲೇವಾರಿ ಸವಾಲು ಎದುರಾಗುತ್ತಿದೆ. ಇದು ಇವತ್ತು ಜಾಗತಿಕ ಸಮಸ್ಯೆಯಾಗಿದೆ. ಇದಕ್ಕೆ ಕೆಲವೇ ದೇಶಗಳು ವೈಜ್ಞಾನಿಕ ಪರಿಹಾರ ಕಂಡುಕೊಂಡಿವೆ’ ಎಂದು ತಿಳಿಸಿದರು.

***
ನಗರದಲ್ಲಿ ಶೇ 3.5 ಜನರಿಗೆ ಮಾತ್ರ ಪರಿಸರ ಮಹತ್ವದ ಅರಿವಿದೆ. ಇದರರ್ಥ ನಮ್ಮಲ್ಲಿ ಇಂದಿಗೂ ಶೇ 96.5ರಷ್ಟು ಜನರು ಪರಿಸರದ ವಿಚಾರದಲ್ಲಿ ಶತಮೂರ್ಖರಾಗಿದ್ದಾರೆ.
-ಪ್ರೊ.ಟಿ.ವಿ.ರಾಮಚಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.