ADVERTISEMENT

ದಿನೇಶ್ ಗುಂಡೂರಾವ್‌– ರೇವಣ್ಣ ಜಗಳ್‌ ಬಂದಿ

ಬಯಲಿಗೆ ಬಂದ ಮೈತ್ರಿ ಭಿನ್ನಮತ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 19:43 IST
Last Updated 4 ಜನವರಿ 2019, 19:43 IST
   

ಬೆಂಗಳೂರು: ಸಚಿವ ಸಂಪುಟ ಪುನಾಚರನೆ ಹಾಗೂ ನಿಗಮ ಮಂಡಳಿಗಳ ನೇಮಕದ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಮಧ್ಯೆ ವಾಕ್ಸಮರ ನಡೆದಿದೆ.

‘ಜಿ.ಪರಮೇಶ್ವರ ಖಾತೆ ಬದಲಾವಣೆಗೆ ಕಾಂಗ್ರೆಸ್‌ ನಾಯಕರ ಹುನ್ನಾರ ಕಾರಣ. ಖಾತೆ ಬದಲಾವಣೆ ಮೂಲಕ ದಲಿತ ನಾಯಕನಿಗೆ ಅನ್ಯಾಯ ಮಾಡಿದ್ದಾರೆ. ನನ್ನ ಖಾತೆಗೆ ಸಂಬಂಧಿಸಿದ ನಿಗಮ ಮಂಡಳಿ ನೇಮಕ ಮಾಡುವ ಮುನ್ನ ನನ್ನ ಜತೆಗೆ ಸಮಾಲೋಚನೆ ನಡೆಸಬೇಕು’ ಎಂದೂ ರೇವಣ್ಣ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಆರ್.ಬಿ. ತಿಮ್ಮಾಪುರ,‘ಕಾಳಜಿ ಇದ್ದರೆ ಜೆಡಿಎಸ್‌ನವರು ದಲಿತರನ್ನು ಉಪಮುಖ್ಯಮಂತ್ರಿ ಮಾಡಲಿ’ ಎಂದು ತಿರುಗೇಟು ನೀಡಿದ್ದರು. ಈ ಬೆಳವಣಿಗೆಗಳ ಮಧ್ಯೆಯೇ ತಿಮ್ಮಾಪುರ ಅವರಿಗೆ ಒಳನಾಡು ಸಾರಿಗೆ, ಬಂದರು(ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿರುವ ಇಲಾಖೆಗಳಾಗಿದ್ದು, ಸದ್ಯ ಕಾಂಗ್ರೆಸ್‌ಗೆ ಹಂಚಿಕೆಯಾಗಿವೆ) ಹಾಗೂ ಸಕ್ಕರೆ ಖಾತೆ ನೀಡುವಂತೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಪಟ್ಟಿ ಕಳುಹಿಸಿದ್ದರು. ಆದರೆ, ಸಕ್ಕರೆ ಖಾತೆಯನ್ನಷ್ಟೇ ಮುಖ್ಯಮಂತ್ರಿ ಹಂಚಿಕೆ ಮಾಡಿದ್ದರು. ರೇವಣ್ಣ ಚಿತಾವಣೆಯಿಂದಲೇ ಮುಖ್ಯಮಂತ್ರಿ ಈ ರೀತಿ ನಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ಬಂದರು ಖಾತೆ ಸದ್ಯ ರೇವಣ್ಣ ಸುಪರ್ದಿಗೆ ಬಂದಿದೆ.

ADVERTISEMENT

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿನೇಶ್‌ ಗುಂಡೂರಾವ್‌, ‘ನಿಗಮ ಮಂಡಳಿಯ ನೇಮಕಾತಿಯ ಪಟ್ಟಿ ಸಣ್ಣ ಸಮಸ್ಯೆ ಇದೆ. ಉಭಯ ಪಕ್ಷಗಳ ನಾಯಕರು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ರೇವಣ್ಣ ಈ ವಿಚಾರದ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು. ನಾನು ಅವರಿಗೆ ಸಲಹೆ ನೀಡುತ್ತೇನೆ’ ಎಂದು ವ್ಯಂಗ್ಯವಾಗಿ ಹೇಳಿದರು.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ರೇವಣ್ಣ, ‘ನಿಗಮ ಮಂಡಳಿಗೆ ನೇಮಕಾತಿ ಮುಖ್ಯಮಂತ್ರಿಗೆ ಸಂಬಂಧಿಸಿದ ವಿಚಾರ. ಯಾವುದೇ ನಿಗಮ ಮಂಡಳಿಗೆ ಇಂತಹವರ ನೇಮಕ ಮಾಡಿ ಎಂದು ಅರ್ಜಿ ಹಿಡಿದುಕೊಂಡು ಹೋಗಿಲ್ಲ. ದಿನೇಶ್ ಗುಂಡೂರಾವ್‌ ಅವರಿಂದ ಎಚ್ಚರಿಕೆ ಹೇಳಿಸಿಕೊಳ್ಳಬೇಕಾಗಿಲ್ಲ. ಐದು ಸಲ ಆರಿಸಿಬಂದಿದ್ದೇನೆ. ನನಗೆ ಹೇಳಲು ದೇವೇಗೌಡರು ಹಾಗೂ ಎಚ್‌.ಡಿ.ಕುಮಾರಸ್ವಾಮಿ ಇದ್ದಾರೆ. ದಿನೇಶ್‌ ಅವರು ಮೊದಲು ಕಾಂಗ್ರೆಸ್‌ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಿ. ನಮ್ಮ ಬಗ್ಗೆ ಮಾತನಾಡುವುದು ಬೇಡ’ ಕಿಡಿ ಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.