ADVERTISEMENT

ದೇವಿಕಾರಾಣಿ ರೋರಿಚ್‌ ಎಸ್ಟೇಟ್‌ ಅಭಿವೃದ್ಧಿಗೆ ಸಿದ್ಧತೆ

ಕಂದಾಯ ಇಲಾಖೆ. ಅರಣ್ಯ ಇಲಾಖೆ ನೇತೃತ್ವದಲ್ಲಿ ಜಂಟಿ ಡಿಜಿಟಲ್‌ ಸರ್ವೆ

ಕೆ.ಎಂ.ಸಂತೋಷಕುಮಾರ್
Published 26 ಅಕ್ಟೋಬರ್ 2017, 19:29 IST
Last Updated 26 ಅಕ್ಟೋಬರ್ 2017, 19:29 IST
ದೇವಿಕಾರಾಣಿ ರೋರಿಚ್‌ ಎಸ್ಟೇಟ್‌ ಅಭಿವೃದ್ಧಿಗೆ ಸಿದ್ಧತೆ
ದೇವಿಕಾರಾಣಿ ರೋರಿಚ್‌ ಎಸ್ಟೇಟ್‌ ಅಭಿವೃದ್ಧಿಗೆ ಸಿದ್ಧತೆ   

ಬೆಂಗಳೂರು: ರೋರಿಚ್‌ ಮತ್ತು ದೇವಿಕಾರಾಣಿ ಎಸ್ಟೇಟ್‌ ಅನ್ನು ನೆದರ್‌ಲೆಂಡಿನ ವಾನ್‌ ಗೋ ಮ್ಯೂಸಿಯಂ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಕೆಲಸಗಳು ಆರಂಭವಾಗಿದ್ದು, ಎಸ್ಟೇಟ್‌ನ ಗಡಿ ಮತ್ತು ಒತ್ತುವರಿ ಗುರುತಿಸಲು ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ಕೈಗೊಂಡಿವೆ.

‘ಡಿಜಿಟಲ್‌ ಸರ್ವೆ ಎರಡು ತಿಂಗಳುಗಳಿಂದ ನಡೆಯುತ್ತಿದ್ದು, ಇನ್ನೊಂದು ತಿಂಗಳಲ್ಲಿ ಸರ್ವೆ ಪೂರ್ಣವಾಗುವ ನಿರೀಕ್ಷೆ ಇದೆ. ಸರ್ವೆ ವರದಿ ಬಂದ ನಂತರ, ಎಸ್ಟೇಟ್‌ ಅನ್ನು ಅಂತರರಾಷ್ಟ್ರೀಯ ಕಲಾ ಕೇಂದ್ರ ಮತ್ತು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಲು ನೀಲನಕ್ಷೆಯನ್ನು ವಾಸ್ತುಶಿಲ್ಪಿಗಳು ಸಿದ್ಧಪಡಿಸಲಿದ್ದಾರೆ’ ಎಂದು ರೋರಿಚ್‌ ಮತ್ತು ದೇವಿಕಾ­ರಾಣಿ ಎಸ್ಟೇಟ್‌ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜಿ.ಎಚ್‌.ಪುಟ್ಟಹಲಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯಕ್ಕೆ ಎಸ್ಟೇಟ್‌ ಜಾಗ ಸಂರಕ್ಷಿಸಲು ಒತ್ತುಕೊಟ್ಟಿದ್ದೇವೆ. ಸರ್ವೆ ಆರಂಭಿಸಿದ ತಕ್ಷಣವೇ ಸಣ್ಣಪುಟ್ಟ ಒತ್ತುವರಿದಾರರು ಸ್ವಯಂಪ್ರೇರಿತವಾಗಿ ಒತ್ತುವರಿ ತೆರವು ಮಾಡುತ್ತಿದ್ದಾರೆ. 468.33 ಎಕರೆ ವಿಸ್ತೀರ್ಣವಿರುವ ಎಸ್ಟೇಟ್‌ ಸಂರಕ್ಷಣೆಗೆ ಸುತ್ತಲೂ ಸುಮಾರು 8ರಿಂದ 9 ಕಿ.ಮೀ. ದೂರ ತಂತಿ ಬೇಲಿ ಅಥವಾ ಕಾಂಪೌಂಡ್‌ ನಿರ್ಮಿಸಬೇಕಿದೆ. ಎಸ್ಟೇಟ್‌ ನಕ್ಷೆ ಲಭ್ಯವಿರದ ಕಾರಣಕ್ಕೆ ಡಿಜಿಟಲ್‌ ಸರ್ವೆ ನಡೆಸಲಾಗುತ್ತಿದೆ. ಎಸ್ಟೇಟ್‌ನಲ್ಲಿ ರೋರಿಚ್‌ ಮತ್ತು ದೇವಿಕಾರಾಣಿ ವಾಸಿಸಿದ ಮನೆ, ಅವರ ಸಮಾಧಿ, ಸುಗಂಧ ದ್ರವ್ಯ ತಯಾರಿಕೆ ಘಟಕ ನಕ್ಷೆಯಲ್ಲಿ ನಿಖರವಾಗಿ ಗುರುತಿಸಲು ಡಿಜಿಟಲ್‌ ಸರ್ವೆಯಿಂದ ಸಾಧ್ಯವಾಗಲಿದೆ’ ಎಂದರು.

ADVERTISEMENT

ಎಸ್ಟೇಟ್‌ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ₹25 ಕೋಟಿ ಹಣ ಮೀಸಲಿಟ್ಟಿದೆ. ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳು ತಮ್ಮ ಅನುದಾನದಲ್ಲೇ ಎಸ್ಟೇಟ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕೈಗೊಂಡಿವೆ. ಅರಣ್ಯ ಇಲಾಖೆ 100 ಎಕರೆಯಲ್ಲಿ ‘ಟ್ರೀ ಪಾರ್ಕ್‌’ ಮಾಡಿದೆ. ತೋಟಗಾರಿಕೆ ಇಲಾಖೆಗೆ ಗುಲಾಬಿ ತೋಟ ರೂಪಿಸಲು 25 ಎಕರೆ ವಹಿಸಿದ್ದು, ಇದರಲ್ಲಿ 5 ಎಕರೆಯಲ್ಲಿ ಗುಲಾಬಿ ಗಿಡ ಬೆಳೆಸಲಾಗಿದೆ. ಬೇಲಿ ಇಲ್ಲದ ಕಾರಣಕ್ಕೆ ದನಗಳ ಹಾವಳಿಯಿಂದ ಗುಲಾಬಿ ತೋಟ ಸುಸ್ಥಿತಿಯಲ್ಲಿಲ್ಲ ಎಂದು ಅವರು ಮಾಹಿತಿ ನೀಡಿದರು.

ಎಸ್ಟೇಟ್‌ ಒಳಗಿರುವ 11.5 ಎಕರೆ ವಿಸ್ತೀರ್ಣದ ಕರಿತಿಮ್ಮಯ್ಯನಕೆರೆಯನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾಗಿದೆ. ರಾಜಕಾಲುವೆ ಸ್ವಚ್ಛಗೊಳಿಸಿದ್ದರಿಂದ ಈ ಬಾರಿ ಕೆರೆ ತುಂಬಿ ಕೋಡಿ ಬಿದ್ದಿದೆ. ಎಸ್ಟೇಟ್‌ಗೆ ಹೊಂದಿಕೊಂಡಿರುವ ಕುಪ್ಪರೆಡ್ಡಿ ಕೆರೆಯೂ ಭರ್ತಿಯಾಗಿದೆ.

ಎಸ್ಟೇಟ್‌ನ 25 ಎಕರೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಮ್ಯೂಸಿಯಂ ನಿರ್ಮಿಸಲು ಪುರಾತತ್ವ ಇಲಾಖೆಗೆ ಜಾಗ ಹಸ್ತಾಂತರಿಸಲಾಗಿದೆ. ಇದರಲ್ಲಿ ಐದು ಎಕರೆ ವಿಸ್ತೀರ್ಣದ ಕಟ್ಟಡ ಸಂಕೀರ್ಣ ತಲೆ ಎತ್ತಲಿದೆ. ರೋರಿಚ್‌ ಮತ್ತು ದೇವಿಕಾರಾಣಿ ಅವರ ಕೊಡುಗೆ ಮತ್ತು ಅವರ ಕಲಾಭಿರುಚಿ ಸಾರುವಂತೆ ಕಲಾ ಪ್ರದರ್ಶನ, ಕಲಾ ತರಬೇತಿ ಹಾಗೂ ಕಲಾಗ್ರಾಮ... ಹೀಗೆ ಮೂರು ವಿಭಾಗಗಳೂ ಇರುವಂತೆ ಕಲಾಕೇಂದ್ರ ನಿರ್ಮಿಸಲು ವಾಸ್ತುಶಿಲ್ಪಿಗಳು ನೀಲನಕ್ಷೆ ಸಿದ್ಧಪಡಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಜಂಟಿ ಸರ್ವೆ ಮತ್ತು ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದರಿಂದ ಎಸ್ಟೇಟ್‌ಗೆ ಸಾರ್ವಜನಿಕರು, ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

**

ವಿನಾಶಗೊಂಡ 8 ಸಾವಿರ ಸುಗಂಧ ಮರ

ಎಸ್ಟೇಟ್‌ನಲ್ಲಿ ಬರ್ಸೆರಾ (ಲಿನೊಲೆ) ಮರಗಳ ಬೀಜಗಳಿಂದ ಸುಗಂಧ ದ್ರವ್ಯವನ್ನು ತಯಾರಿಸುವ ಘಟಕ ಇತ್ತು. ಎಸ್ಟೇಟ್‌ನಲ್ಲಿ ಸುಮಾರು 8 ಸಾವಿರ ಬರ್ಸೆರ ಮರಗಳಿದ್ದವು. ಸುಪ್ರೀಂಕೋರ್ಟ್‌ ಆದೇಶದ ಅನುಸಾರ 1996ರಿಂದ 2000ರವರೆಗೆ ಎಸ್ಟೇಟ್‌ ಒಳಗೆ ಪ್ರವೇಶ ನಿರ್ಬಂಧಿಸಿದ ನಂತರ, ಮರಗಳು ನಿರ್ವಹಣೆ ಇಲ್ಲದೆ ವಿನಾಶವಾಗಿವೆ. ಸುಗಂಧ ದ್ರವ್ಯ ತಯಾರಿಕಾ ಘಟಕದ ಯಂತ್ರಗಳು ಕೆಟ್ಟು ನಿಂತಿವೆ. ಸದ್ಯ ಅಂದಾಜು 500 ಮರಗಳಷ್ಟೇ ಉಳಿದಿರಬಹುದು ಎನ್ನುತ್ತವೆ ಮಂಡಳಿ ಮೂಲಗಳು.

‘ಪಾಳುಬಿದ್ದಿದ್ದ ಸುಗಂಧ ದ್ರವ್ಯ ತಯಾರಿಕೆ ಘಟಕ ದುರಸ್ತಿಪಡಿಸಲಾಗುತ್ತಿದೆ. ಕೆಟ್ಟುನಿಂತಿರುವ 30–40 ವರ್ಷಗಳ ಹಿಂದಿನ ಯಂತ್ರಗಳನ್ನು ರಿಪೇರಿ ಮಾಡಿಸಿ, ಸುಗಂಧ ದ್ರವ್ಯ ತಯಾರಿಕೆ, ಬರ್ಸೆರ ಬೀಜಗಳನ್ನು ಒಣಗಿಸಿ, ಎಣ್ಣೆ ತೆಗೆಯುವ ವಿಧಾನದ ಪ್ರಾತ್ಯಕ್ಷಿಕೆಯನ್ನು ಎಪ್ರವಾಸಿಗರಿಗೆ ತೋರಿಸುವ ಚಿಂತನೆಯೂ ಇದೆ’ ಎನ್ನುತ್ತಾರೆ ಪುಟ್ಟಹಲಗಯ್ಯ.

**

ತಜ್ಞರ ಸಮಿತಿ ರಚನೆ

413 ಎಕರೆಯಲ್ಲೂ ಟ್ರೀ ಪಾರ್ಕ್‌ ಮಾಡಲು, ಇದರಲ್ಲಿ ಎಂತೆಂತಹ ಗಿಡಮರಗಳನ್ನು ಬೆಳೆಸಬೇಕು ಮತ್ತು ನಗರವಾಸಿಗಳಿಗೆ ಹತ್ತಿರದಲ್ಲೊಂದು ‘ಹಸಿರು ವಿಹಾರತಾಣ’ವಾಗುವಂತೆ ಎಸ್ಟೇಟ್‌ ಅನ್ನು ಹೇಗೆ ಅಭಿವೃದ್ಧಿಪಡಿಸಿ, ನಿರ್ವಹಿಸಬೇಕೆಂದು ಸಲಹೆ ನೀಡಲು ಮಂಡಳಿಯು ತಜ್ಞರ ಸಮಿತಿ ರಚಿಸಿದೆ.

ಭೂಮಾಪನಾ ಇಲಾಖೆ ಜಂಟಿ ನಿರ್ದೇಶಕರು, ಪುರಾತತ್ವ ಇಲಾಖೆ ಆಯುಕ್ತರು, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಒಬ್ಬರು ವಾಸ್ತು ಶಿಲ್ಪಿ ಈ ಸಮಿತಿಯಲ್ಲಿದ್ದಾರೆ. ಈ ಸಮಿತಿ ಮಂಡಳಿಗೆ ಕಾಲ ಕಾಲಕ್ಕೆ ವರದಿ ನೀಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.