ಬೆಂಗಳೂರು: ‘ಪ್ರಜಾಪ್ರಭುತ್ವದ ತಳಹದಿ ಮೇಲೆ ನಿರ್ಮಾಣವಾದ ನಮ್ಮ ದೇಶವು ಫ್ಯಾಸಿಸಂ ಅನ್ನು ಅಪ್ಪಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು’ ಎಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್‌ಭೂಷಣ್ ಕಳವಳ ವ್ಯಕ್ತಪಡಿಸಿದರು.
ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಭಾನುವಾರ ಏರ್ಪಡಿಸಿದ್ದ ಈದ್ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸಂವಿಧಾನದ ಮೂಲ ಆಶಯವೇ ಸಂಕಷ್ಟಕ್ಕೆ ಸಿಲುಕಿದೆ. ಸಂವಿಧಾನಾತ್ಮಕ ತತ್ವಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇದನ್ನು ಹೀಗೆಯೇ ಬೆಳೆಯಲು ಬಿಟ್ಟರೆ ದೇಶ ಸಂಪೂರ್ಣ ಫ್ಯಾಸಿಸಂನತ್ತ ವಾಲಲಿದೆ’ ಎಂದರು.
‘ಚಳವಳಿಯ ಮನೋಧರ್ಮ ಈ ಮಣ್ಣಿನಲ್ಲೇ ಇದೆ. ಫ್ಯಾಸಿಸಂ ಬೆಳೆಯುವುದನ್ನು ತಡೆಯಲು ಈ ಮನೋಧರ್ಮವನ್ನು ಬಡಿದೆಬ್ಬಿಸಬೇಕಿದೆ’ ಎಂದರು. ‘ಧರ್ಮಾಂಧ ಪುಂಡರ ಗುಂಪುಗಳು ಅಲ್ಪಸಂಖ್ಯಾತರ ಮೇಲೆ, ದಲಿತರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸರು ಇಂತಹ ಚಟುವಟಿಕೆಯನ್ನು ಹತ್ತಿಕ್ಕುತ್ತಿಲ್ಲ. ರಾಜ್ಯ ಸರ್ಕಾರಗಳೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಂತೂ ಇಂತಹ ಚಟುವಟಿಕೆ ಅವ್ಯಾಹತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತೋರ್ಪಡಿಕೆಗೆ ಇಂತಹ ಕೃತ್ಯವನ್ನು ಖಂಡಿಸಿ ಸುಮ್ಮನಾಗುತ್ತಾರೆ’ ಎಂದರು. ‘ಕ್ರಿಯಾಶೀಲ ವಿರೋಧ ಪಕ್ಷ ಇಲ್ಲದ ಕಾರಣ ನರೇಂದ್ರ ಮೋದಿ ಅವರ ಆಟ ನಡೆಯುತ್ತಿದೆ’ ಎಂದರು. ‘ಆರ್‌ಎಸ್‌ಎಸ್‌ನಲ್ಲಿ ಒಳ್ಳೆಯ ವಿಚಾರಗಳೂ ಇವೆ. ಅವರು ನಡೆಸುವ ಸಮುದಾಯ ಸೇವೆಗಳ ಬಗ್ಗೆ ಯಾರಿಗೂ ತಕರಾರಿಲ್ಲ. ಆದರೆ, ಅವರು ಪ್ರತಿಪಾದಿಸುವ ಕೋಮುವಾದ, ಹಾಗೂ ಸರ್ವಾಧಿಕಾರಿಧೋರಣೆ ಒಪ್ಪಲು ಸಾಧ್ಯವೇ ಇಲ್ಲ. ಪ್ರಜಾಪ್ರಭುತ್ವದ ಬಗ್ಗೆ, ವಿವಿಧತೆಯಲ್ಲಿ ಏಕತೆ ಬಗ್ಗೆ ಅವರಿಗೆ ನಂಬಿಕೆಯೇ ಇಲ್ಲ. ಹಿಟ್ಲರ್ ಹಾಗೂ ಮುಸಲೋನಿ ತತ್ವಗಳಲ್ಲೇ ಅವರಿಗೆ ಹೆಚ್ಚು ನಂಬಿಕೆ’ ಎಂದು ಹೇಳಿದರು.
‘ಏಕರೂಪದ ನಾಗರಿಕ ಸಂಹಿತೆ ಜಾರಿಗೆ ತರುವುದರಲ್ಲಿ ತಪ್ಪೇನೂ ಇಲ್ಲ. ಎಲ್ಲ ಧರ್ಮಗಳ ಒಳ್ಳೆಯ ಚಿಂತನೆಗಳನ್ನು ಕ್ರೋಡೀಕರಿಸಿ, ಎಲ್ಲರಿಗೆ ಸಮ್ಮತವಾಗುವಂತೆ ಇದನ್ನು ಜಾರಿಗೆ ತರಬೇಕು’ ಎಂದರು. ‘ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸುವ ಸಲುವಾಗಿ ಸ್ವಾಮಿನಾಥನ್ ವರದಿ ಜಾರಿಗೆ ತರುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆ. ಈ ವಿಚಾರವನ್ನು ಮರೆತೇ ಬಿಟ್ಟಿದೆ’ ಎಂದರು.
ಕಾನೂನು ಪ್ರಾಧ್ಯಾಪಕ ಪ್ರೊ.ಬಾಬು ಮ್ಯಾಥ್ಯೂ ಮಾತನಾಡಿ, ‘ಅಮಾಯಕರ ಮೇಲಿನ ದಾಳಿಗಳನ್ನು ತಡೆಯಲು ಬಹುವಿಧಗಳ ಮಾರ್ಗೋಪಾಯ ಕಂಡುಕೊಳ್ಳಬೇಕು. ಹೋರಾಟಗಳನ್ನು ನಡೆಸುವುದರ ಜೊತೆ ತುಳಿತಕ್ಕೊಳಗಾದವರೆಲ್ಲ ಒಗ್ಗಟ್ಟಾಗಬೇಕು. ಅವರು ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳುವ ಪ್ರಯತ್ನನಡೆಯಬೇಕು’ ಎಂದರು.
‘ಯುವ ಹಿಂದುಗಳ ಜೊತೆ ಒಡನಾಟ ಬೆಳೆಸಿಕೊಳ್ಳಿ’
‘ಕೋಮುವಾದಿಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಹಿಂದೂಗಳಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಬಿತ್ತುತ್ತಿವೆ. ಅವರ ಈ ಕಾರ್ಯತಂತ್ರವನ್ನು ಸೋಲಿಸಬೇಕಾದರೆ ಮುಸ್ಲಿಮರು ಯುವ ಹಿಂದೂಗಳ ಜೊತೆ ಹೆಚ್ಚು ಒಡನಾಟ ಬೆಳೆಸಿಕೊಳ್ಳಬೇಕು. ಪರಸ್ಪರ ಅರ್ಥಮಾಡಿಕೊಳ್ಳಲು ಅವಕಾಶಗಳು ಹೆಚ್ಚಾಗಬೇಕು. ಆಗ ಸುಳ್ಳುಸುದ್ದಿಗಳನ್ನು, ಆತಂಕಕಾರಿ ಸುದ್ದಿಗಳನ್ನು ಹರಡಲು ಸಾಧ್ಯವಾಗುವುದಿಲ್ಲ’ ಎಂದು ಪ್ರಶಾಂತ್ ಭೂಷಣ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.