ADVERTISEMENT

ನನ್ನಮ್ಮ ಸಿ.ಸಿ.ಟಿ.ವಿ ಕ್ಯಾಮೆರಾದಂತೆ

ತಾರೆಯರ ಮಕ್ಕಳ ಖಾಸಗಿತನ ಗೌರವಿಸಿ * ತಳಮಳ ಬಿಚ್ಚಿಟ್ಟ ರಜನಿ ಮಗಳು ಐಶ್ವರ್ಯಾ

ಪ್ರವೀಣ ಕುಮಾರ್ ಪಿ.ವಿ.
Published 18 ಡಿಸೆಂಬರ್ 2016, 20:17 IST
Last Updated 18 ಡಿಸೆಂಬರ್ 2016, 20:17 IST
ಐಶ್ವರ್ಯಾ ಧನುಷ್‌
ಐಶ್ವರ್ಯಾ ಧನುಷ್‌   

ಬೆಂಗಳೂರು: ‘ನನ್ನಮ್ಮ ಸಿ.ಸಿ.ಟಿ.ವಿ ಕ್ಯಾಮೆರಾದಂತೆ. ಆಕೆಯ ಗಮನಕ್ಕೆ ಬಾರದಂತೆ ಯಾವುದನ್ನೂ ಮಾಡಲು ಸಾಧ್ಯವಿರುತ್ತಿರಲಿಲ್ಲ’

ಚಿತ್ರನಟ ರಜನಿಕಾಂತ್‌ ಅವರ ಮಗಳು, ಚಿತ್ರ ನಿರ್ದೇಶಕಿ, ನಿರ್ಮಾಪಕಿ ಐಶ್ವರ್ಯಾ ಧನುಷ್‌  ತಮ್ಮ ಚೊಚ್ಚಲ ಕೃತಿ  ‘ಸ್ಟ್ಯಾಂಡಿಂಗ್‌ ಆನ್‌ ಆ್ಯನ್‌ ಆಪಲ್‌ ಬಾಕ್ಸ್‌’ ಕುರಿತ ಮಾತುಕತೆಯಲ್ಲಿ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದು ಹೀಗೆ. ಪ್ರಸಿದ್ಧ ನಟನ ಮಗಳಾಗಿ ಬಾಲ್ಯದ ಕೌತುಕಗಳಿಂದ ವಂಚಿತಳಾದ ಬಗೆ ಹಾಗೂ ಈಗ  ತಾಯಿಯಾಗಿ ಮಕ್ಕಳನ್ನು ಬೆಳೆಸುವಾಗ ಅನುಭವಿಸುವ ಆತಂಕಗಳನ್ನು ಅವರು ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಭಾನುವಾರ ಬಿಚ್ಚಿಟ್ಟರು.

‘ಚಿಕ್ಕವಳಿದ್ದಾಗ, ನನ್ನ ಸ್ನೇಹಿತರಂತೆ ಮುಕ್ತವಾಗಿ ತಿರುಗಾಡಲು ಸಾಧ್ಯವಾಗುತ್ತಿಲ್ಲವಲ್ಲಾ ಎಂಬ ಕೊರಗು ಎಷ್ಟೋ  ಬಾರಿ ಕಾಡಿದೆ. ಸದಾ ಶೂಟಿಂಗ್‌ನಲ್ಲಿ ಮುಳುಗಿರುತ್ತಿದ್ದರಿಂದ,  ಅಮ್ಮನೊಡನೆ ಈ ವಿಚಾರದಲ್ಲಿ ಜಗಳವಾಡುತ್ತಿದ್ದೆ.   ಇಬ್ಬರು  ಮಕ್ಕಳ ತಾಯಿಯಾಗಿ ಯೋಚಿಸುವಾಗ ಆಗ ಅಮ್ಮ ಮಾಡಿದ್ದು ಸರಿ ಎಂದು  ಅನಿಸುತ್ತಿದೆ’

ADVERTISEMENT

‘ನನ್ನ ಮಕ್ಕಳಿಗೂ ಎಲ್ಲರಂತೆ ಇರುವ ಆಸೆ ಸಹಜ. ಆದರೆ, ಅವರನ್ನು ಹೊರಗಡೆ ಕಳುಹಿಸಿಕೊಡಲು ಭಯವಾಗುತ್ತದೆ. ಅವರನ್ನು ಜನ ಮುತ್ತಿಕೊಳ್ಳುವುದು, ಅವರ ಫೋಟೊ ತೆಗೆಯುವುದು, ಅಜ್ಜನೊಂದಿಗೆ, ಅಪ್ಪನೊಂದಿಗೆ ಹೋಲಿಸುವುದನ್ನು ನೆನೆದಾಗ ಆತಂಕವಾಗುತ್ತದೆ. ತಾರೆಯರ ಮಕ್ಕಳ ಖಾಸಗಿತನವನ್ನು ಎಲ್ಲರೂ ಗೌರವಿಸಬೇಕು.   ಮಾಧ್ಯಮಗಳು ಇದರ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು’ ಎಂದರು.

‘ನಮ್ಮನ್ನು ಮನೆಯಿಂದ ಆಚೆ ಕಳುಹಿಸುತ್ತಿರಲಿಲ್ಲ. ನನ್ನ 18ನೇ ವರ್ಷದ ಹುಟ್ಟಿದ ಹಬ್ಬದ ದಿನ ಡಿಸ್ಕೊಗೆ ಹೋಗಬೇಕೆಂದು ಆಸೆಪಟ್ಟೆ. ಅಲ್ಲಿಯವರೆಗೆ ಡಿಸ್ಕೊಗೆ ಹೋಗಿರಲಿಲ್ಲ. ಅಪ್ಪ ಒಪ್ಪಿದಾಗ ಖುಷಿಗೆ ಪಾರವೇ ಇರಲಿಲ್ಲ. ನಾವು ಡಿಸ್ಕೊಗೆ ಹೋದಾಗ ನಮ್ಮ ಸುತ್ತ ಬೆಂಗಾವಲಿತ್ತು. ಆದರೂ ಜನ ನಮ್ಮನ್ನು ಮುತ್ತಿಕೊಂಡಿದ್ದರು. ಹೋದ   ಹತ್ತೇ ನಿಮಿಷಕ್ಕೆ, ಡಿಸ್ಕೊ ನೋಡಿದೆಯಲ್ಲ, ಇನ್ನು ಹೊರಡೋಣ ಎಂದು ಅಪ್ಪ ಹೇಳಿದಾಗ ನಿರಾಸೆಯಾಗಿತ್ತು.     ಅವರು ಹಾಗೆ ಮಾಡಿದ್ದು ಸರಿ ಎಂದು ಈಗ ಅನಿಸುತ್ತಿದೆ’ ಎಂದರು.

‘ಸಿನಿಮಾದಲ್ಲಿ ಸಾಹಸ ಕಲಾವಿದರು ಅಪಾಯ ಲೆಕ್ಕಿಸದೆ ಕೆಲಸ ಮಾಡುತ್ತಾರೆ. ಆದರೆ, ಅವರಿಗೆ ಸಂಬಳವೂ ಕಡಿಮೆ. ವಿಮೆ ಅಥವಾ ಇತರ ಭದ್ರತೆಗಳು ಇಲ್ಲ. ಪ್ರಶಸ್ತಿ ನೀಡುವಾಗಲೂ ಅವರನ್ನು ಕಡೆಗಣಿಸಲಾಗುತ್ತಿದೆ. ಆಸ್ಕರ್‌ ಪ್ರಶಸ್ತಿಗೂ  ಅವರನ್ನು ಪರಿಗಣಿಸುವುದಿಲ್ಲ.   ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಆಗಿ  ಸಾಹಸ ಕಲಾವಿದರಿಗೆ ಪ್ರತ್ಯೇಕ ಪ್ರಶಸ್ತಿ ಘೋಷಿಸಬೇಕು ಎಂದು ಮನವಿ ಮಾಡುತ್ತೇನೆ’ ಎಂದರು.
‘ಕಡೆಗಣನೆಗೆ ಒಳಗಾದ ಸಾಹಸ ಕಲಾವಿದರು, ಸಹ ಕಲಾವಿದರು, ಹಾಗೂ ನೃತ್ಯ ಕಲಾವಿದರ ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸುತ್ತಿದ್ದೇನೆ’ ಎಂದು ತಿಳಿಸಿದರು.

‘ಅಜ್ಜನಿಂದಾಗಿ ಓದುವ ಹವ್ಯಾಸ ಬೆಳೆಸಿಕೊಂಡೆ. ಓದು ಅತ್ಯುತ್ತಮ ಸಂಗಾತಿ. ನನ್ನ ಪತಿ ಧನುಷ್‌ ಅವರಿಂದ ಉತ್ತಮ ಸಹಕಾರ ಸಿಗುತ್ತಿರುವುದರಿಂದ  ಪುರುಷರಿಗೆ ಸರಿಸಮನಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಯಾ ಜೊತೆ ಹೋಲಿಕೆಗೆ ಜಾಣ ಉತ್ತರ
‘ಜಯಲಲಿತಾ ಮತ್ತು ನಿಮ್ಮ  ನಡುವೆ ಅನೇಕ ಸಾಮ್ಯತೆಗಳಿವೆ. ಅವರಂತೆಯೇ ನೀವು ಬೆಂಗಳೂರಿನ ನಂಟು ಹೊಂದಿದ್ದೀರಿ. ನಿಮಗೂ ಹಸಿರು ಸೀರೆ ಇಷ್ಟ, ಲಿಂಗ ಸಮಾನತೆ ಬಗ್ಗೆ ಅವರಷ್ಟೇ ಕಾಳಜಿ ನಿಮಗೂ ಇದೆ. ನೀವು  ಜಯಲಲಿತಾ ಅವರಂತೆಯೇ ಆಗಲು ಬಯಸುತ್ತೀರಾ’ ಎಂದು ಮಾತುಕತೆ  ನಡೆಸಿಕೊಟ್ಟ ಪ್ರಮೀಳಾ ಪಾಲ್‌ ಅವರು ಪ್ರಶ್ನಿಸಿದಾಗ ಐಶ್ವರ್ಯಾ ಜಾಣ ಉತ್ತರ ನೀಡಿದರು.

‘ಜಯಾ ಅವರಿಗೆ ಹೋಲಿಸಿದ್ದಕ್ಕೆ ಧನ್ಯವಾದ.  ಅವರಂತಹ ದೊಡ್ಡ ನಾಯಕಿಯೆದುರು ನಾನು ತೃಣ ಸಮಾನ.  ಅವರ ಹಾವಭಾವ, ಗಾಂಭಿರ್ಯ, ದಿಟ್ಟತನ, ಧೈರ್ಯ... ಎಲ್ಲವೂ ನನಗಿಷ್ಟ. ಅಂತಹ ಆಕರ್ಷಕ ವ್ಯಕ್ತಿಯನ್ನು ಅನುಸರಿಸಲು ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ’ ಎಂದು ಮರುಪ್ರಶ್ನೆ ಎಸೆದರು.

ರಜನಿಕಾಂತ್‌ ಹಾಗೂ ಕಮಲಹಾಸನ್‌ ನಡುವೆ ಯಾರು ಹೆಚ್ಚು ಉತ್ತಮ ನಟ  ಎಂಬ ಪ್ರಶ್ನೆಗೆ ನೀವು ರಜನಿ ಮಗಳು ಎಂಬುದನ್ನು ಮರೆತು ಉತ್ತರಿಸಿ ಎಂದು ಸಭಿಕರೊಬ್ಬರು ಕೇಳಿದಾಗ, ‘ನಾನು ರಜನಿಕಾಂತ್‌ ಅವರ ಮಗಳು ಎಂಬುದನ್ನು ಮರೆಯಲು ಹೇಗೆ ಸಾಧ್ಯ’ ಎಂದಷ್ಟೇ ಕೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.