ADVERTISEMENT

‘ನಮ್ಮ ಚಿಂತನೆಗಳು ಅಶುದ್ಧವಾಗಿವೆ’

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2017, 19:55 IST
Last Updated 27 ಡಿಸೆಂಬರ್ 2017, 19:55 IST
ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರು ಡಾ.ಶಂಕರ ರಾಜಾರಾಮನ್‌ ಅವರಿಗೆ ಬನ್ನಂಜೆ ಪ್ರಶಸ್ತಿ ನೀಡಿ ಗೌರವಿಸಿದರು. ಶ್ರೀ ಎಂ, ಬನ್ನಂಜೆ ಗೋವಿಂದಾಚಾರ್ಯ, ವಿದ್ವಾಂಸ ಮಲ್ಲೇಪುರ  ಜಿ. ವೆಂಕಟೇಶ್ ಇದ್ದರು –ಪ್ರಜಾವಾಣಿ ಚಿತ್ರ
ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರು ಡಾ.ಶಂಕರ ರಾಜಾರಾಮನ್‌ ಅವರಿಗೆ ಬನ್ನಂಜೆ ಪ್ರಶಸ್ತಿ ನೀಡಿ ಗೌರವಿಸಿದರು. ಶ್ರೀ ಎಂ, ಬನ್ನಂಜೆ ಗೋವಿಂದಾಚಾರ್ಯ, ವಿದ್ವಾಂಸ ಮಲ್ಲೇಪುರ ಜಿ. ವೆಂಕಟೇಶ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಆನುವಂಶಿಕತೆ ಹಾಗೂ ನಾವು ಬದುಕುವ ವಾತಾವರಣದ ಪ್ರಭಾವದಿಂದ ನಮ್ಮ ಎಲ್ಲಾ ಚಿಂತನೆಗಳು ಅಶುದ್ಧವಾಗಿವೆ. ಹಾಗಾಗಿ ಶುದ್ಧ ಮನಸ್ಸು ಎನ್ನುವುದು ಇಲ್ಲವೇ ಇಲ್ಲ’ ಎಂದು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬುಧವಾರ ಹಮ್ಮಿಕೊಂಡಿದ್ದ ಬನ್ನಂಜೆ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಹುಟ್ಟಿದ ವಾತಾವರಣದಲ್ಲಿ ಪೋಷಕರ ಪ್ರಭಾವ, ಮತದ ಪ್ರಭಾವ ಇರುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಪರಂಪರೆ, ಜಾತಿ, ಮತವೇ ಶ್ರೇಷ್ಠ ಎನ್ನುವ ಭ್ರಮೆ ಇರುತ್ತದೆ’ ಎಂದು ಹೇಳಿದರು.

ADVERTISEMENT

‘ಸತ್ಯವನ್ನು ಗ್ರಹಿಸುವ ಶುದ್ಧ ಬುದ್ಧಿ ಬೇಕು. ಅದು ಯಾರಲ್ಲೂ ಇಲ್ಲ. ಏನೂ ಗೊತ್ತಿಲ್ಲದವರು, ಅರ್ಧ ತಿಳಿದವರು ಕ್ಯಾಮೆರಾ ಎದುರು ಅಭಯಹಸ್ತ ಹಿಡಿದು ದೇಶಕ್ಕೆ ಉಪದೇಶ ನೀಡುತ್ತಿ
ದ್ದಾರೆ. ಸತ್ಯದ ಅರಿವು ಬಹಳ ಕಷ್ಟ. ಹಾಗಾಗಿ ದೇವರ ಬಗ್ಗೆ ಗೊತ್ತಿದೆ ಎಂದು ಹೇಳುವವರಿಂದ ದೂರ ಇರಿ’ ಎಂದು ಕಿವಿಮಾತು ಹೇಳಿದರು. 

ದೇವರ ಬಗ್ಗೆ ಗೊತ್ತಿದ್ದರೆ ಅದನ್ನು ಅಭಿವ್ಯಕ್ತಿಸಲು ಸಾಧ್ಯವಿಲ್ಲ. ಏಕೆಂದರೆ ಅನುಭವವನ್ನು ಯಾವತ್ತು ಭಾಷೆ ಮೂಲಕ ಮತ್ತೊಬ್ಬರಿಗೆ ಸಂವಹನ ಮಾಡಲು ಸಾಧ್ಯವಿಲ್ಲ. ಒಂದು ಶಬ್ದಕ್ಕೆ ನಿಯತವಾದ ಅರ್ಥ ಇರುತ್ತದೆ. ಆ ಅರ್ಥ ಗೊತ್ತಿದ್ದರೆ ಮಾತ್ರ ಭಾಷೆ ಅರ್ಥ ಆಗುತ್ತದೆ. ಇಲ್ಲದಿದ್ದರೆ ಭಾಷೆ ಏನನ್ನೂ ಸಂವಹನ ಮಾಡುವುದಿಲ್ಲ ಎಂದು ತಿಳಿಸಿದರು.

ಮಾನವ ಏಕತಾ ಮಿಷನ್‌ನ ಸಂಸ್ಥಾಪಕ ಶ್ರೀ ಎಂ, ‘ಪೂಜಿಸುವುದಕ್ಕಿಂತ ಮನಸ್ಸಿನ ಗುಣಮಟ್ಟ ಕಾಯ್ದುಕೊಳ್ಳುವುದು ಆಚಾರ್ಯರಿಗೆ, ಯೋಗಿಗಳಿಗೆ ಬಹಳ ಮುಖ್ಯ. ಗ್ರಹಿಕೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಎಲ್ಲಾ ಸಂದರ್ಭಗಳಲ್ಲೂ ಮನಸ್ಸನ್ನು ಪ್ರಶಾಂತವಾಗಿ, ಸಮತೋಲನವಾಗಿರುವುದು ಹಾಗೂ ಹೊಗಳಿಕೆಯಾಗಲಿ, ತೆಗಳಿಕೆಯಾಗಲಿ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸುವ ಮನಸ್ಸು... ಈ ರೀತಿಯ ಗುಣಗಳನ್ನು ಯೋಗಿಗಳು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‌ಸಂಸ್ಕೃತ ಚಿತ್ರಕಾವ್ಯ ರಚಿಸುವ ಅವಧಾನಿ ಡಾ. ಶಂಕರ ರಾಜಾರಾಮನ್‌ ಅವರಿಗೆ ಬನ್ನಂಜೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯು ₹25 ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಹೊಂದಿದೆ. ಪರಾಶರ ಕಂಡ ಪರಾತತ್ವ, ಇನ್ನಷ್ಟೇ ಹೇಳದೆ ಉಳಿದದ್ದು ಪುಸ್ತಕ
ಗಳನ್ನು ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.