ADVERTISEMENT

ನಾಲ್ಕೇ ತಿಂಗಳಿನಲ್ಲಿ 2,456 ಹೆಣ್ಣುಮಕ್ಕಳು ನಾಪತ್ತೆ!

ಭಯ, ಒತ್ತಡಕ್ಕಾಗಿ ಮನೆ ತ್ಯಜಿಸುತ್ತಿರುವ ಮಕ್ಕಳು: ಪತ್ತೆಗೆ ಪೊಲೀಸರ ಹರಸಾಹಸ

ಸಂತೋಷ ಜಿಗಳಿಕೊಪ್ಪ
Published 22 ಮೇ 2017, 8:47 IST
Last Updated 22 ಮೇ 2017, 8:47 IST
ನಾಲ್ಕೇ ತಿಂಗಳಿನಲ್ಲಿ 2,456 ಹೆಣ್ಣುಮಕ್ಕಳು ನಾಪತ್ತೆ!
ನಾಲ್ಕೇ ತಿಂಗಳಿನಲ್ಲಿ 2,456 ಹೆಣ್ಣುಮಕ್ಕಳು ನಾಪತ್ತೆ!   
ಬೆಂಗಳೂರು:  ರಾಜ್ಯದಲ್ಲಿ ನಾಪತ್ತೆಯಾಗುತ್ತಿರುವ ಹಾಗೂ  ಅಪರಿಚಿತ ಶವ ಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲಿ ಬಾಲಕಿ ಹಾಗೂ ಮಹಿಳೆಯರು ಹೆಚ್ಚಾಗಿ ಕಾಣೆಯಾಗುತ್ತಿದ್ದಾರೆ.
 
ಪೊಲೀಸ್‌ ಇಲಾಖೆಯ ಅಪರಾಧ ಗಳ ದಾಖಲಾತಿ ಕೇಂದ್ರದ ಪ್ರಕಾರ  ಜನವರಿಯಿಂದ ಏಪ್ರಿಲ್‌ವರೆಗೆ ರಾಜ್ಯ ದಲ್ಲಿ 3,631 ಕಾಣೆ/ಅಪಹರಣ ಪ್ರಕರಣಗಳು ದಾಖಲಾಗಿವೆ.
 
ಈ ಪೈಕಿ 2,456 ಹೆಣ್ಣು ಮಕ್ಕಳಿದ್ದು, ಉಳಿದ 1,117 ಪುರುಷರು. ಜತೆಗೆ 1ರಿಂದ 18 ವರ್ಷದ 2,024 (ಮಕ್ಕಳು) ಹಾಗೂ 18 ವರ್ಷ ದಾಟಿದ 1,607 ಮಂದಿ ಕಾಣೆಯಾಗಿದ್ದಾರೆ.
 
ಮಕ್ಕಳ ಪೈಕಿ 908 ಬಾಲಕರಿದ್ದು, 1,116 ಬಾಲಕಿಯರು ಇದ್ದಾರೆ. ಈ ಮಕ್ಕಳ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಆದರೆ, ಬೆರಳಣಿಕೆಯಷ್ಟು ಮಕ್ಕಳನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಿದೆ.
 
‘ಮನೆಯವರ ಒತ್ತಡ, ಭಯ ಹಾಗೂ ಹಲವು ಕಾರಣಕ್ಕಾಗಿ ಮಕ್ಕಳು ಮನೆ ಬಿಟ್ಟು ಹೋಗುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ಜಾತ್ರೆ, ನಿಲ್ದಾಣಗಳು, ಉದ್ಯಾನ ಸೇರಿ ಹಲವು ಸಾರ್ವಜನಿಕ ಸ್ಥಳಗಳಿಂದ ಮಕ್ಕಳು ಕಾಣೆಯಾಗುತ್ತಿದ್ದಾರೆ. ಅಂಥ ಸ್ಥಳಗಳಲ್ಲಿ ಹೆಚ್ಚೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಉನ್ನತ ಅಧಿಕಾರಿ ತಿಳಿಸಿದರು.
 
‘ಠಾಣೆಗೆ ಬರುವ ಪ್ರತಿಯೊಬ್ಬರಿಂದಲೂ ದೂರು ಪಡೆದುಕೊಳ್ಳುತ್ತಿದ್ದೇವೆ. ಹೀಗಾಗಿ ದಾಖಲು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಹೇಳಿ ದರು.
ಬೆಂಗಳೂರಿನಲ್ಲೇ ಹೆಚ್ಚು: ಕಾಣೆ ಹಾಗೂ ಅಪಹರಣ ಬಗ್ಗೆ ಬೆಂಗಳೂರಿನಲ್ಲೇ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ.
 
ನಾಲ್ಕು ತಿಂಗಳ ಪ್ರಕರಣಗಳ ಪೈಕಿ ಶೇ 45ರಷ್ಟು ಪ್ರಕರಣಗಳು ಬೆಂಗಳೂರಿನ ಹಲವು ಠಾಣೆಗಳಲ್ಲಿ ದಾಖಲಾಗಿವೆ. ಜನಸಂಖ್ಯೆ ಹೆಚ್ಚಿರುವುದರಿಂದ ಹಾಗೂ ಒಬ್ಬರಿಗೊಬ್ಬರು ಹೆಚ್ಚು ಗೊತ್ತಿರದಿದ್ದರಿಂದ ಇಂಥ ಪ್ರಕರಣಗಳು ಹೆಚ್ಚಾಗುತ್ತಿವೆ.
 
ಕೆಲಸ ಅರಸಿ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್‌ ಸೇರಿ ಹಲವು ರಾಜ್ಯಗಳ ಜನ ಇಲ್ಲಿಗೆ ಬರುತ್ತಾರೆ. ಅಂಥವರ ಮಕ್ಕಳು ಸಹ ಕಾಣೆಯಾಗುತ್ತಿದ್ದಾರೆ.
ಯುವತಿಯರು ಇದ್ದಾರೆ: ‘ನಾಲ್ಕು ತಿಂಗಳಿನಲ್ಲಿ 1,116 ಬಾಲಕಿಯರು ಕಾಣೆ ಯಾಗಿದ್ದು, ಆತಂಕದ ವಿಷಯ.
 
ಪ್ರೀತಿ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ಪಿಡುಗುಗಳಿಂದ ಯುವತಿಯರು ಮನೆ ಬಿಟ್ಟು ಹೋಗುತ್ತಿದ್ದಾರೆ. ಅವರ ಪೈಕಿ ಕೆಲವರನ್ನಷ್ಟೇ ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ’ ಎಂದು  ಉನ್ನತ ಅಧಿಕಾರಿ ತಿಳಿಸಿದರು.
 
ಅಪರಿಚಿತ ಶವಗಳ ಸಂಖ್ಯೆಯೂ ಹೆಚ್ಚಳ: ಅಪರಿಚಿತ ಶವಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅಂಥ ಶವಗಳನ್ನು ಹಲವು ದಿನ ಆಸ್ಪತ್ರೆಯಲ್ಲಿರಿಸಿ, ಗುರುತು ಸಿಗದಿದ್ದಾಗ ಪೊಲೀಸರು ಅಂತ್ಯಕ್ರಿಯೆ ಮಾಡು ತ್ತಿದ್ದಾರೆ.
 
‘ಅಪರಿಚಿತ ಶವ ಸಿಕ್ಕಾಗ, ಅದರ ಚಿತ್ರವನ್ನು ಜಿಲ್ಲೆ, ರಾಜ್ಯ ಹಾಗೂ ದೇಶದ ಠಾಣೆಗಳಿಗೆ ಕಳುಹಿಸುತ್ತೇವೆ. ಪತ್ರಿಕೆಗ ಳಲ್ಲೂ ಪ್ರಕಟಿಸುತ್ತೇವೆ. ಸುಳಿವು ಮಾತ್ರ ಸಿಗುವುದಿಲ್ಲ. ಎಲ್ಲವೂ ಆಕಸ್ಮಿಕ ಸಾವಾ ಗಿದ್ದರಿಂದ ಹೆಚ್ಚು ಗಮನ ಹರಿಸುವು ದಿಲ್ಲ. ಕೊಲೆ ಶಂಕೆ ಇದ್ದರೆ ಮಾತ್ರ ವಿಶೇಷ ತಂಡ ರಚಿಸಿ, ಪ್ರಕರಣ ಭೇದಿ ಸುತ್ತೇವೆ’ ಎಂದು ಉನ್ನತ ಅಧಿಕಾರಿ ಹೇಳುತ್ತಾರೆ. 
****
ಕಾರಣ ಸಮೇತ ವರದಿಗೆ ಸೂಚನೆ
ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕಾರಣ ಸಮೇತ ವರದಿ ನೀಡುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಆಯಾ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
****
ಕಾಣೆ/ಅಪಹರಣ ಪ್ರಕರಣಗಳನ್ನು ಆಯಾ ಜಿಲ್ಲೆಯ ಅಧಿಕಾರಿಗಳೇ ಇತ್ಯರ್ಥಪಡಿಸುತ್ತಾರೆ. ನಾವೂ ನಿರ್ದೇಶನ ನೀಡುತ್ತೇವೆ
ಕೆ.ವಿ. ಗಗನ್‌ದೀಪ್, ಎಡಿಜಿಪಿ  (ಅಪರಾಧ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.