ಬೆಂಗಳೂರು: ‘ಮೋಹನಸ್ವಾಮಿ ಕೃತಿಯ ಮೂಲಕ ನಾನು ಸಲಿಂಗಕಾಮಿ ಎನ್ನುವ ಸತ್ಯವನ್ನು ಹೊರ ಹಾಕಿದೆ’ ಎಂದು ಖ್ಯಾತ ಕತೆಗಾರ ವಸುಧೇಂದ್ರ ಹೇಳಿದರು.
ಭಾನುವಾರ ಬೆಂಗಳೂರು ಸಾಹಿತ್ಯ ಉತ್ಸವದ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಸಲಿಂಗಕಾಮಿಯಾಗಿ ತಮ್ಮ ಒತ್ತಡದ ದಿನಗಳ ತುಮುಲಗಳನ್ನು ಅನಾವರಣಗೊಳಿಸಿದರು.
‘ನಾನೊಬ್ಬ ಸಲಿಂಗಿ ಎಂಬ ಅರಿವಿಗೆ ಬಂದಾಗಿನಿಂದ 22 ವರ್ಷಗಳವರೆಗೆ ಮತ್ತೊಬ್ಬ ಸಲಿಂಗ ಕಾಮಿಯನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಸಂದರ್ಭದಲ್ಲಿ ತೀವ್ರ ಮಾನಸಿಕ ತುಮುಲಕ್ಕೆ ಒಳಗಾಗಿದ್ದೆ. ಅದರಿಂದ ಪಾರಾಗಲು ಮನೋಚಿಕಿತ್ಸೆಯನ್ನೂ ಪಡೆದುಕೊಂಡಿದ್ದೆ. ವೈದ್ಯರೇನೊ ಶಮನದ ಔಷಧವನ್ನು ನೀಡಿದ್ದರು. ಆದರೆ, ಪ್ರಯೋಜನ ಆಗಿರಲ್ಲಿಲ್ಲ. ಸತ್ಯವನ್ನು ಬಹಿರಂಗಪಡಿಸಬೇಕು ಎಂಬ ವಿಚಾರ ಆಗ ನನ್ನನ್ನು ಕಾಡುತ್ತಿತ್ತು. ಅದನ್ನು ಹೇಳದೆ ಸಾಮಾನ್ಯ ಮನುಷ್ಯನಂತೆ ಬದುಕಲು ಸಾಧ್ಯವಿಲ್ಲ ಎಂಬುದು ನನ್ನ ಮನಸ್ಸಿಗೆ ಬಂದಿತ್ತು’ ಎಂದರು.
‘ಇದೇ ಸಂದರ್ಭದಲ್ಲಿ ‘ಮೋಹನಸ್ವಾಮಿ’ಯನ್ನು ಬೇರೆ ಹೆಸರಲ್ಲಿ ಬರೆದಿದ್ದೆ. ಅದನ್ನು ಬಹಳ ಸಮಯ ನನ್ನ ಬಳಿಯೇ ಇಟ್ಟುಕೊಂಡಿದ್ದೆ. ಒಮ್ಮೆ ಅದನ್ನು ಓದಿದ ಕತೆಗಾರ ವಿವೇಕ ಶಾನಭಾಗ್ ಪ್ರಕಟಿಸಲು ಮುಂದೆಬಂದರು. ಅದು ನನ್ನದೇ ಕಥೆ ಎಂದು ಗೊತ್ತಾದರೆ ಜನ ಹೇಗೆ ಸ್ವೀಕರಿಸಿ
ಯಾರು ಎಂಬ ಭಯವೂ ಕಾಡಲಾರಂಭಿಸಿತ್ತು. ಅದು ಪ್ರಕಟವಾದ ಬಳಿಕ ನಾನು ಮನೋ ಒತ್ತಡಗಳಿಂದ ಮುಕ್ತನಾದೆ. ಹಿಂದಿಗಿಂತಲೂ ಉತ್ತಮವಾಗಿದ್ದೇನೆ’ ಎಂದು ನಿರುಮ್ಮುಳರಾಗಿ ನುಡಿದರು.
‘ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ವಾಸವಾಗಿದ್ದ ನನಗೆ, ಹೊರಗಿನಿಂದ ವಸ್ತುಗಳ ಡೆಲಿವರಿಗೆಂದು ಬರುತ್ತಿದ್ದ ಡೆಲಿವರಿ ಬಾಯ್‌ಗಳು ರಿಸೆಪ್ಷನ್‌ನಿಂದ ಪೋನ್ ಮಾಡಿದಾಗ, ನನ್ನ ಧ್ವನಿ ಕೇಳಿ ಮೇಡಮ್ ಎಂದೇ ಹೇಳುತ್ತಿದ್ದರು. ಇದರಿಂದ ಇಡೀ ದಿನ ನನ್ನ ಮೂಡ್ ಕೆಟ್ಟು ಹೋಗುತ್ತಿತ್ತು. ಮೋಹನಸ್ವಾಮಿ ಪುಸ್ತಕ ಪ್ರಕಟಗೊಂಡ ಬಳಿಕ ಆ ಕಿರಿಕಿರಿಯಿಂದಲೂ ಹೊರಬಂದೆ’ ಎಂದರು.
‘ಪ್ರತಿಯೊಬ್ಬ ಸಲಿಂಗಕಾಮಿಯೂ ಸ್ವಂತ ವ್ಯಕ್ತಿತ್ವ ಹೊಂದಿರುತ್ತಾನೆ. ಅವನಲ್ಲಿ ರೊಮ್ಯಾಂಟಿಕ್, ಪ್ರೇಮ, ಫ್ಯಾಂಟಸಿ ಇತ್ಯಾದಿಗಳಿರುತ್ತವೆ. ನಾವು ವಿಲನ್‌ಗಳಲ್ಲ. ನಮ್ಮನ್ನು ‘ಸಲಿಂಗಿಭಯ’ದಿಂದ ಕಾಣಬಾರದು. ಕನ್ನಡದಲ್ಲಿ ಸಲಿಂಗಕಾಮದ ಕುರಿತು ಯಾರೂ ಬರೆದಿರಲಿಲ್ಲ. ಅಂತಹ ಸಾಹಿತ್ಯವನ್ನು ನಾನು ಓದಿಯೂ ಇರಲಿಲ್ಲ. ಮೋಹನಸ್ವಾಮಿ ಕನ್ನಡದ ಅನುಭವದಿಂದ ಮೂಡಿ ಬಂದ ಕೃತಿ’ ಎಂದು ವಸುಧೇಂದ್ರ ವಿವರಿಸಿದರು.
‘ಈ ಬಗ್ಗೆ ಅರಿವಿಲ್ಲದೆ ಎಷ್ಟೋ ಜನ ಒತ್ತಾಯ ಪೂರ್ವಕವಾಗಿ ಮದುವೆ ಮಾಡುತ್ತಾರೆ. ಇದರಿಂದ ಸಂಸಾರಗಳಲ್ಲಿ ಸಮಸ್ಯೆ ಉದ್ಭವವಾಗುತ್ತಿದೆ. ಸಲಿಂಗಕಾಮ ಕೇವಲ ನಗರ ಪ್ರದೇಶಗಳ ‘ಎಲೈಟ್’ ವರ್ಗದ ವಿಕೃತಿ ಎಂದು ಬಿಂಬಿಸಲಾಗುತ್ತದೆ. ಆದರೆ, ಇದು ಗ್ರಾಮೀಣ ಭಾಗದಲ್ಲೂ ಇದೆ. ಅಲ್ಲಿನ ಸಲಿಂಗ ಕಾಮಿಗಳಿಗೆ ಕಾನೂನಿನ(377 ಕಾಯ್ದೆ) ಅರಿವಿಲ್ಲ’ ಎಂದು ತಿಳಿಸಿದರು.
‘ಮೋಹನಸ್ವಾಮಿ ಬಿಡುಗಡೆಯಾದ ಬಳಿಕ ಕರ್ನಾಟಕದ ಮೂಲೆ ಮೂಲೆಗಳಿಂದ ಸಲಿಂಗ ಕಾಮಿಗಳು ಬಂದು ನನ್ನೊಂದಿಗೆ ಮಾತನಾಡಿದರು. ತಮಗಿರುವ ಸಮಸ್ಯೆಗಳನ್ನು ಹೇಳಿಕೊಂಡರು’ ಎಂದರು.
ಮೋಹನಸ್ವಾಮಿಯನ್ನು ಇಂಗ್ಲಿಷಿಗೆ ಅನುವಾದ ಮಾಡಿರುವ ಪತ್ರಕರ್ತೆ ರಶ್ಮಿ ತೇರದಾಳ ಮಾತನಾಡಿ, ‘ಕೃತಿಯಲ್ಲಿದ್ದ ಬಳ್ಳಾರಿ ಕನ್ನಡ ಚೆನ್ನಾಗಿ ಪರಿಚಯ ಇರುವುದು ಮತ್ತು ತಾವು ಅದೇ ಜಿಲ್ಲೆಯಿಂದ ಬಂದ ಕಾರಣ ಅನುವಾದಕ್ಕೆ ಸಮಸ್ಯೆ ಆಗಲಿಲ್ಲ’ ಎಂದರು.
‘ಅದರಲ್ಲಿ ಬರುವ ಕೆಲವು ಪ್ರಸಂಗಗಳ ಬಗ್ಗೆ ಮುಜುಗರ ಆಗಲಿಲ್ಲ. ಬದಲಿಗೆ ಸಲಿಂಗ ಕಾಮಿ ಪುರುಷರ ಲೋಕದ ಬಗ್ಗೆ ಹೆಚ್ಚಿನ ಅರಿವು ಉಂಟಾಯಿತು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.