ADVERTISEMENT

‘ನಿಕೋಟಿನ್‌ ರಹಿತ ಸಿಗರೇಟ್‌ ಅನ್ವೇಷಣೆ ನಡೆಸಿದ್ದ ಸ್ವಾಮಿ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2016, 19:57 IST
Last Updated 16 ಸೆಪ್ಟೆಂಬರ್ 2016, 19:57 IST
ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್‌.ಪಿ. ಮಾಹಾಲಿಂಗೇಶ್ವರ ಮತ್ತು ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸಂಚಾಲಕ ನರಹಳ್ಳಿ ಬಾಲಸುಬ್ರಹ್ಮಣ್ಯ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು. ಸಾಹಿತಿ ಎಸ್‌. ದಿವಾಕರ್‌, ನ್ಯಾಷನಲ್‌ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಸಂಚಾಲಕಿ ಎಂ.ಲೀಲಾವತಿ ಹಾಜರಿದ್ದರು– ಪ್ರಜಾವಾಣಿ ಚಿತ್ರ
ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್‌.ಪಿ. ಮಾಹಾಲಿಂಗೇಶ್ವರ ಮತ್ತು ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸಂಚಾಲಕ ನರಹಳ್ಳಿ ಬಾಲಸುಬ್ರಹ್ಮಣ್ಯ ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು. ಸಾಹಿತಿ ಎಸ್‌. ದಿವಾಕರ್‌, ನ್ಯಾಷನಲ್‌ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಸಂಚಾಲಕಿ ಎಂ.ಲೀಲಾವತಿ ಹಾಜರಿದ್ದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಿ.ಜಿ.ಎಲ್‌.ಸ್ವಾಮಿ ಅವರು ಕನಿಷ್ಠ ಇನ್ನೆರಡು ವರ್ಷವಾದರೂ ಬದುಕಿರಬೇಕಿತ್ತು. ಏಕೆಂದರೆ ನಿಕೊಟಿನ್‌ ಇಲ್ಲದ ಸಿಗರೇಟ್‌ ಅನ್ವೇಷಿಸುತ್ತಿದ್ದ ಅವರ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿತ್ತು. ಅದು ಸಿಗರೇಟ್‌ ದ್ವೇಷಿಗಳಿಗಂತೂ ಸಂತಸದ ಸುದ್ದಿ ಆಗುತ್ತಿತ್ತು’ ಎಂದು ಕಥೆಗಾರ ಎಸ್‌. ದಿವಾಕರ್‌ ಅವರು ತಿಳಿಸಿದರು.

ಕನ್ನಡ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನ್ಯಾಷನಲ್‌ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗ ನ್ಯಾಷನಲ್‌ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ  ಬಿ.ಜಿ.ಎಲ್‌.ಸ್ವಾಮಿ ಅವರ ಜನ್ಮ ಶತಮಾನೋತ್ಸವ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಸ್ವಾಮಿ ಅವರಿಗೆ ಆಸಕ್ತಿ ಇಲ್ಲದ ಕ್ಷೇತ್ರವೇ ಇರಲಿಲ್ಲ. ಅವರ ನೆಚ್ಚಿನ ಸಸ್ಯಶಾಸ್ತ್ರದ ಕ್ಷೇತ್ರಕಾರ್ಯದೊಂದಿಗೆ ಕಥೆ, ಕಾವ್ಯ, ಸಂಗೀತ, ವ್ಯಂಗ್ಯಚಿತ್ರ, ಅಡುಗೆ, ಬಡಗಿ ಕೆಲಸ ಹೀಗೆ ಎಲ್ಲ ಕಲೆಯನ್ನೂ ಕರಗತ ಮಾಡಿಕೊಂಡಿದ್ದರು’ ಎಂದು ಅವರು ನೆನಪಿಸಿಕೊಂಡರು.

‘ಸ್ವಾಮಿ ಅವರು ಬಡಗಿ ಆದ ಕಥೆಯೂ ರೋಚಕವಾದದ್ದು. ಸೋಮರಸವನ್ನು ಯಾವ ಸಸ್ಯದಿಂದ ತಯಾರಿಸುತ್ತಾರೆ ಎಂದು ತಿಳಿಯಲು ವೇದಗಳಲ್ಲಿ ಬರುವ ಶ್ಲೋಕಗಳನ್ನು ಓದುವಾಗ ಅದರಲ್ಲಿ ಬರುವ ವಿವರಗಳನ್ನು ಆಧರಿಸಿ ಮರದ ಪಾತ್ರೆಗಳನ್ನು ತಯಾರಿಸಿದ್ದರು’ ಎಂದು ಸ್ವಾಮಿ ಅವರ ವ್ಯಕ್ತಿತ್ವ ಪರಿಚಯಿಸಿದರು.

‘ವಿಜ್ಞಾನ ಬರಹಗಾರರು ರೂಪಗೊಳ್ಳಲು ಇವರ ಬರಹಗಳೇ ಪರೋಕ್ಷ ಕಾರಣ. ಒಮ್ಮೆ ಕಾರಂತರು ಸ್ವಾಮಿ ಅವರ ‘ಹಸಿರು ಹೊನ್ನು’ ಪುಸ್ತಕ ಓದಿ, ಸಸ್ಯವಿಜ್ಞಾನದ ಕುರಿತು ಬರೆಯವವರು ಇಲ್ಲ ಎಂಬ ಕಾರಣಕ್ಕೆ ಆ ಬಗ್ಗೆ ಬರೆಯುತ್ತಿದ್ದೆ, ಇನ್ನು ಮುಂದೆ ಬರೆಯುವುದಿಲ್ಲ ಎಂದು ಸ್ವಾಮಿ ಅವರಿಗೆ ಪತ್ರ ಬರೆದಿದ್ದರು’ ಎಂದು ನೆನಪಿಸಿಕೊಂಡರು.

‘ಸ್ವಾಮಿ ಅವರದ್ದು ವಿಚಿತ್ರವಾದ ಹಾಸ್ಯ ಪ್ರಜ್ಞೆ. ಒಮ್ಮೆ ಪತ್ರಕರ್ತರೊಬ್ಬರು ‘ಪ್ರತಿಭಾವಂತರ ಪತ್ನಿಯರು’ ಎಂಬ ಸರಣಿ ಲೇಖನಗಳನ್ನು ಬರೆಯುತ್ತಿದ್ದಾಗ, ಸ್ವಾಮಿ  ಅವರಿಗೆ ಪತ್ರ ಬರೆದು ನಿಮ್ಮ ತಾಯಿಯ ಕಣ್ಣಲ್ಲಿ ನಿಮ್ಮ ತಂದೆ (ಡಿ.ವಿ.ಜಿ) ಹೇಗೆ ಕಾಣುತ್ತಿದ್ದರು ಎಂಬ ಬಗ್ಗೆ ಹೇಳಿ ಎಂದಿದ್ದರು.

ಬಹಳ ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದ ಸ್ವಾಮಿ ಅವರು ‘ಆಕೆಯ ಪರಿಚಯ ನನಗಿಲ್ಲ ಮತ್ತು ಇನ್ನೊಬ್ಬರ ಹೆಂಡತಿ ಬಗ್ಗೆ ಮಾತನಾಡುವ ಅಭ್ಯಾಸ ನನಗಿಲ್ಲ’ ಎಂದು ಎರಡೇ ಸಾಲಿನಲ್ಲಿ ಉತ್ತರಿಸಿದ್ದರು’  ಎಂದಾಗ ಸಭಾಂಗಣದಲ್ಲಿ ಜೋರು ನಗು ಉಕ್ಕಿತು.

ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸಂಚಾಲಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಾತನಾಡಿ, ‘ಕನ್ನಡದಲ್ಲಿ ವೈಜ್ಞಾನಿಕ ತಿಳಿವಳಿಕೆ ಸಿಗುವುದು ಕಷ್ಟ. ಕೆಲವರನ್ನು ಹೊರತು ಪಡಿಸಿದರೆ ವಿಜ್ಞಾನ ಬರಹ ಕನ್ನಡದಲ್ಲಿ ವಿರಳವಾಗುತ್ತಿದೆ. ಅಲ್ಲದೆ ಸ್ವಾಮಿ ಅವರ ಬರಹಗಳಲ್ಲಿ ತಿಳಿಹಾಸ್ಯ ಪ್ರಧಾನವಾಗಿರುತ್ತಿತ್ತು. ಆದರೆ ಈಗ ಹಾಸ್ಯ ನಮ್ಮ ಸಮಾಜದಿಂದ ಮರೆಯಾಗಿ, ಅಪಹಾಸ್ಯ ತುಂಬಿಕೊಂಡಿದೆ. ಒಳ್ಳೆಯ ಹಾಸ್ಯ ಎಂತಹ ಇಕ್ಕಟ್ಟಿನ ಮನಸ್ಥಿತಿಯನ್ನೂ ತಿಳಿಗೊಳಿಸಿ, ಮನಸ್ಸನ್ನು ಹಗುರಗೊಳಿಸುತ್ತದೆ. ಅದು ಸ್ವಾಮಿ ಅವರಲ್ಲಿ ಕಾಣುತ್ತಿತ್ತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.