ADVERTISEMENT

ನೋಡುವ ಪರಂಪರೆ ಕಲಿಯಿರಿ

ಲಲಿತಕಲಾ ಅಕಾಡೆಮಿಯಲ್ಲಿ ‘ತಿಂಗಳ ಚಿತ್ರ’ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2015, 19:32 IST
Last Updated 22 ಜೂನ್ 2015, 19:32 IST

ಬೆಂಗಳೂರು: ‘ಯುವ ಕಲಾವಿದರು ಬದ್ಧತೆ, ತಾಳ್ಮೆ ಜತೆಗೆ ನೋಡುವ ಪರಂಪರೆಯನ್ನು ಕಲಿಯಬೇಕಿದೆ. ಅದರಿಂದ, ಆಂತರಿಕ ಆಲೋಚನಾ ಕ್ರಮ ಪರಿಶುದ್ಧವಾಗುತ್ತದೆ’ ಎಂದು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಎಂ.ಎಸ್‌.ಮೂರ್ತಿ ಹೇಳಿದರು.

ಅಕಾಡೆಮಿಯ ‘ವರ್ಣ’ ಗ್ಯಾಲರಿಯಲ್ಲಿ ಸೋಮವಾರ ಆಯೋಜಿಸಿದ್ದ ‘ತಿಂಗಳ ಚಿತ್ರ’ ಯುವ ಕಲಾವಿದರ ಕಲಾಕೃತಿಗಳ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

‘ದೃಶ್ಯಕಲೆ ಪರಂಪರೆಯ ಯುವ ಕಲಾವಿದರು ಅದರ ತಾತ್ವಿಕ ಹಿನ್ನೆಲೆ ಅರಿತು ಕೆಲಸ ಮಾಡುವ ಅಗತ್ಯವಿದೆ. ನನ್ನ ಕಲಾಕೃತಿಯ ಸ್ಥಾನವೇನು? ನಾನೇಕೆ ಕೃತಿಯೊಂದನ್ನು ರಚಿಸುತ್ತಿದ್ದೇನೆ ಎಂದು ಆತ್ಮಸಾಕ್ಷಿಯನ್ನು ಕೇಳಿಕೊಳ್ಳಬೇಕಿದೆ’ ಎಂದು ಹೇಳಿದರು.

‘ಸಾರ್ವಜನಿಕರ ಹಣದಿಂದ ಓದುವ ಪ್ರತಿಯೊಬ್ಬ ವಿದ್ಯಾರ್ಥಿ ತೆರಿಗೆ ಹಣವನ್ನು ಪೋಲು ಮಾಡದೆ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಪೂರೈಸಬೇಕು. ಹಿಂದಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ದೊಡ್ಡ ಸಾಂಸ್ಕೃತಿಕ ಹೊಣೆಗಾರಿಕೆ ನಮ್ಮ ಮೇಲಿದೆ ಎನ್ನುವುದನ್ನು ಮರೆಯಬಾರದು’ ಎಂದು ತಿಳಿಸಿದರು.

ಪ್ರದರ್ಶನಕ್ಕೆ ಚಾಲನೆ ನೀಡಿದ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್‌ ಮಾತನಾಡಿ, ‘ಅನೇಕ ಗ್ರಾಮೀಣ ಕಲೆಗಳು ಕಣ್ಮರೆಯಾಗುತ್ತ, ನಗರಾದಾಚೆಗಿನ ಕಲಾವಿದರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ  ಗ್ರಾಮೀಣ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಅವರ ಕಲಾಕೃತಿಗಳ ಪ್ರದರ್ಶನಕ್ಕೆ ಸಹಾಯ ಮಾಡುವ ಮೂಲಕ ಅಕಾಡೆಮಿ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದರು.

‘ಕಲೆಗಳು ವ್ಯಾಪಾರೀಕರಣ ಗೊಳ್ಳುತ್ತಿವೆ. ಇಂತಹ ಕಾಲಘಟ್ಟದಲ್ಲಿ ಪರಂಪರೆಯ ಭಾಗವಾದ ಕಲಾವಿದರು ಮತ್ತು ಸಾಹಿತಿಗಳ ಮೇಲೆ ಸಮಾಜಕ್ಕೆ ಉತ್ತರದಾಯಿಗಳಾಗಿ ಬದು ಕುವ ದೊಡ್ಡ ಜವಾಬ್ದಾರಿ ಇದೆ. ಅದನ್ನು ಅವರು ಎಚ್ಚರಿಕೆಯಿಂದ ನಿರ್ವಹಿಸಬೇಕಿದೆ’ ಎಂದರು.

ಅಕಾಡೆಮಿಯ 8ನೇ ‘ತಿಂಗಳ ಚಿತ್ರ’ದಲ್ಲಿ ಕಲಬುರ್ಗಿ ಜಿಲ್ಲೆಯ ಪುಷ್ಪಾ ಮೋಟಗಿ, ಮಹೇಶ್‌, ಯಾದಗಿರಿ ಜಿಲ್ಲೆಯ ವಿಶ್ವನಾಥ್‌ ಎಂ. ತಂಬಾಕೆ ಮತ್ತು ಸುಜಾತ ಎಸ್‌.ಆವಂತಿ ಅವರ ಕಲಾಕೃತಿ ಗಳ ಪ್ರದರ್ಶನ ಏರ್ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.