ADVERTISEMENT

ಪಕ್ಷಿಗಳಿಗೆ ಗುಟುಕು ನೀರು ಅಭಿಯಾನ

​ಪ್ರಜಾವಾಣಿ ವಾರ್ತೆ
Published 5 ಮೇ 2014, 19:30 IST
Last Updated 5 ಮೇ 2014, 19:30 IST

ಬೆಂಗಳೂರು: ಬೇಸಿಗೆಯ ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಗರದ ಜನ ತಣ್ಣನೆಯ ನೀರು, ಮಜ್ಜಿಗೆ, ತಂಪುಪಾನೀಯ, ಎಳನೀರಿನ ಮೊರೆ ಹೋಗುತ್ತಾರೆ. ಆದರೆ, ಉರಿ ಬೇಸಿಗೆಯ ದಿನಗಳಲ್ಲಿ ಪಕ್ಷಿಗಳು ಗುಟುಕು ನೀರಿಲ್ಲದೆ ಪರದಾಡುತ್ತವೆ. ಪಕ್ಷಿಗಳ ಬಾಯಾರಿಕೆ ತಣಿಸಲು ನಗರದ ಸಮರ್ಪಣ ಸಂಸ್ಥೆ ಮುಂದಾಗಿದೆ.

ಸಂಸ್ಥೆಯು ‘ಬಿಸಿಲಿನ ಬೇಗೆಯಲ್ಲಿ ಪಕ್ಷಿಗಳಿಗೆ ಗುಟುಕು ನೀರು’ ಹೆಸರಿನ ಅಭಿಯಾನದ ಮೂಲಕ ಪಕ್ಷಿಗಳ ದಾಹ ನೀಗಲು ಮುಂದಾಗಿದೆ. ಮನೆ ಮನೆಗಳಿಗೆ ಉಚಿತವಾಗಿ ಮಣ್ಣಿನ ಪಾತ್ರೆಗಳನ್ನು ನೀಡಿ ಪಕ್ಷಿಗಳಿಗೆ ನೀರಿನ ಅಗತ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಸಂಸ್ಥೆ ತೊಡಗಿಕೊಂಡಿದೆ.

‘ರಾಜಾಜಿನಗರ ಮತ್ತು ಸುತ್ತ­ಮುತ್ತಲಿನ ಬಡಾವಣೆಗಳಲ್ಲಿ ಈವರೆಗೆ ಸುಮಾರು ಐದು ಸಾವಿರ ಮನೆಗಳಿಗೆ ಉಚಿತವಾಗಿ ಮಣ್ಣಿನ ಪಾತ್ರೆಗಳನ್ನು ವಿತರಿಸಲಾಗಿದೆ. ಮನೆ ಮನೆಗೆ ಹೋಗಿ ಮಣ್ಣಿನ ಪಾತ್ರೆ ಹಾಗೂ ಕರಪತ್ರಗಳನ್ನು ಹಂಚುವ ಮೂಲಕ ಪಕ್ಷಿಗಳ ನೀರಿನ ದಾಹ ನೀಗಿಸುವಂತೆ ಮನವಿ ಮಾಡ­ಲಾಗುತ್ತಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ಶಿವಕುಮಾರ್‌ ಹೊಸಮನಿ ಹೇಳಿದರು.

‘ಮನುಷ್ಯನಿಗೆ ದಾಹವಾದರೆ ನೀರನ್ನು ಕೊಂಡು ಪಡೆಯುತ್ತಾನೆ ಅಥವಾ ಯಾರಲ್ಲಾದರೂ ಕೇಳಿ ಪಡೆ­ಯು­ತ್ತಾನೆ. ಆದರೆ, ಪಕ್ಷಿಗಳಿಗೆ ಇದು ಸಾಧ್ಯವಿಲ್ಲ.
ಹೀಗಾಗಿ ಅವುಗಳಿಗೆ ಕುಡಿ­ಯಲು ನೀರು ಕಲ್ಪಿಸುವುದು ನಮ್ಮ ಅಭಿ­ಯಾನದ ಉದ್ದೇಶ’ ಎಂದರು.

‘ಪ್ರತಿಯೊಬ್ಬರ ಮನೆಯ ತಾರಸಿ ಮೇಲೂ ಪಕ್ಷಿಗಳಿಗೆ ಕುಡಿಯುವ ನೀರು ದೊರೆಯಲಿ ಎಂಬ ಉದ್ದೇಶ ನಮ್ಮದು. ಹೀಗಾಗಿ ವಿಶೇಷ ವಿನ್ಯಾಸದ ಮಣ್ಣಿನ ಪಾತ್ರೆಗಳನ್ನು ಮನೆ ಮನೆಗೆ ನೀಡಿ ನೀರು ಇರಿಸುವಂತೆ ತಿಳಿಸುತ್ತಿದ್ದೇವೆ’ ಎಂದು ವಿವರಿಸಿದರು.

‘ಈ ವರ್ಷ ಸುಮಾರು 10 ಸಾವಿರ ಮಣ್ಣಿನ ಪಾತ್ರೆಗಳನ್ನು ವಿತರಿಸುವ ಉದ್ದೇಶವಿದೆ. ಕುಂಬಾರರಿಂದ ವಿಶೇಷ ರೀತಿಯಲ್ಲಿ ಪಾತ್ರೆಗಳ ವಿನ್ಯಾಸ ಮಾಡಿಸ­ಲಾಗಿದೆ. ಕುಂಬಾರರಿಗೆ ಒಂದು ಮಣ್ಣಿನ ಪಾತ್ರೆ ಮಾಡಲು ರೂ. 18 ನೀಡಲಾ­ಗುತ್ತಿದೆ. ಬೆಟ್ಟಹಲಸೂರು ಸಮೀಪದ ನಾರಾಯಣಪುರದ ಕುಂಬಾರರಿಂದ ಮಣ್ಣಿನ ಪಾತ್ರೆಗಳನ್ನು ತರಿಸಲಾಗುತ್ತಿದೆ’ ಎಂದರು.

‘ನಮ್ಮ ಅಭಿಯಾನಕ್ಕೆ ಕೈಜೋಡಿಸು­ವವರಿಗೆ ಸದಾ ಸ್ವಾಗತ. ಈಗಾಗಲೇ, ಬನಶಂಕರಿ, ಹೆಸರಘಟ್ಟ, ಜಯನಗರ, ನೆಲಮಂಗಲದಿಂದ ಬಂದು ಕೆಲವರು ಮಣ್ಣಿನ ಪಾತ್ರೆಗಳನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ಅವರು ತಿಳಿಸಿದರು.
‘ವಿಧಾನ ಸೌಧ, ವಿಕಾಸ ಸೌಧ, ಎಂ.ಎಸ್‌.ಬಿಲ್ಡಿಂಗ್‌ ಹೀಗೆ ಮರಗಳು ಹೆಚ್ಚಿರುವ ಕಟ್ಟಡಗಳಲ್ಲಿಯೂ ಮಣ್ಣಿನ ಪಾತ್ರೆಗಳನ್ನು ಇಟ್ಟು ಬರುವ ಯೋಚನೆ­ಯಿದೆ. ಅಲ್ಲಿ ಸಂಸ್ಥೆಯ ಒಬ್ಬ ಸ್ವಯಂ ಸೇವಕ ಬೆಳಿಗ್ಗೆ ಹೋಗಿ ನೀರು ತುಂಬಿ ಬರುವ ವ್ಯವಸ್ಥೆಯನ್ನೂ ಮಾಡಲಾಗು­ವುದು’ ಎಂದರು.
ಮಣ್ಣಿನ ಪಾತ್ರೆಗಳಿಗೆ ಸಂಪರ್ಕಿಸ­ಬೇಕಾದ ವಿಳಾಸ: ಸಮರ್ಪಣ, ನಂ.17/ಬಿ, 19 ನೇ ‘ಸಿ’ ಮುಖ್ಯರಸ್ತೆ, 1 ನೇ ಹಂತ, ರಾಜಾಜಿನಗರ.

‘ಪಕ್ಷಿ ಸಂಕುಲ ಉಳಿಯಬೇಕು’
ಕುಂಬಾರರಿಗೆ ಅವಕಾಶ, ನಗರದ ಜನರಿಗೆ ಪಕ್ಷಿಗಳ ಬಗ್ಗೆ ಅರಿವು ಹಾಗೂ ಪಕ್ಷಿಗಳಿಗೆ ನೀರು ದೊರೆಯುವಂತೆ ಮಾಡುವುದೇ ನಮ್ಮ ಅಭಿಯಾನದ ಉದ್ದೇಶವಾಗಿದೆ. ಎಲ್ಲರೂ ಕೈ ಜೋಡಿಸುವ ಮೂಲಕ ಪಕ್ಷಿಗಳ ಸಂಕುಲ ಉಳಿಸಲು ಪ್ರಯತ್ನಿಸಬೇಕು.

– ಶಿವಕುಮಾರ್‌ ಹೊಸಮನಿ, ಮುಖ್ಯಸ್ಥ, ಸಮರ್ಪಣ ಸಂಸ್ಥೆ

‘ಪಕ್ಷಿಗಳಿಗೆ ಕುಡಿಯಲು ನೀರು ಸಿಕ್ಕಂತಾಗಿದೆ’
ಸಮರ್ಪಣ ಸಂಸ್ಥೆಯು ನೀಡಿರುವ ಮಣ್ಣಿನ ಪಾತ್ರೆಗಳನ್ನು ನಮ್ಮ ಮನೆಯ ತಾರಸಿ ಮೇಲೂ ಇಟ್ಟಿದ್ದೇವೆ. ದಿನಾಲು ಪಕ್ಷಿಗಳು ನೀರು ಕುಡಿದು ಹೋಗುತ್ತವೆ. ನೋಡಲು ಸಂತಸವಾಗುತ್ತದೆ. ಈಗಿನ ಬಿರು ಬಿಸಿಲಲ್ಲಿ ಪಕ್ಷಿಗಳಿಗೆ ಕುಡಿಯಲು ನೀರು ಸಿಕ್ಕಂತಾಗಿದೆ. ಸಮರ್ಪಣ ಸಂಸ್ಥೆಯ ಈ ಅಭಿಯಾನ ಒಳ್ಳೆಯದಾಗಿದೆ.

– ಪುಟ್ಟರಾಜು, ರಾಜಾಜಿನಗರ ನಿವಾಸಿ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.