ADVERTISEMENT

ಪಿಎಚ್‌.ಡಿಗಳು ಗುಣಮಟ್ಟ ಕಳೆದುಕೊಂಡು ಕಸವಾಗಿವೆ

ಹಿರಿಯ ಸಂಶೋಧಕ ಷ.ಶೆಟ್ಟರ್‌ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 19:38 IST
Last Updated 3 ಮಾರ್ಚ್ 2017, 19:38 IST
ಪಿಎಚ್‌.ಡಿಗಳು ಗುಣಮಟ್ಟ ಕಳೆದುಕೊಂಡು ಕಸವಾಗಿವೆ
ಪಿಎಚ್‌.ಡಿಗಳು ಗುಣಮಟ್ಟ ಕಳೆದುಕೊಂಡು ಕಸವಾಗಿವೆ   

ಬೆಂಗಳೂರು: ‘ಈಗ ಸಂಶೋಧನೆಎನ್ನುವುದು ಪದವಿ ಪಡೆದಂತೆ ಆಗಿದೆ. ಸುಧಾರಿಸಲಿಕ್ಕೆ ಸಾಧ್ಯವಾಗದ ರೀತಿಯಲ್ಲಿ ಪಿಎಚ್‌.ಡಿ ಗುಣಮಟ್ಟ ಕಳೆದುಕೊಂಡಿದೆ’ ಎಂದು ಹಿರಿಯ ಸಂಶೋಧಕ ಷ.ಶೆಟ್ಟರ್‌ ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯ ಕಾಲೇಜು ಕನ್ನಡ ಅಧ್ಯಾಪಕರ ಸಂಘ ಶುಕ್ರವಾರ ವಿವೇಕಾನಂದ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಸಂಶೋಧನೆ : ಭಿನ್ನ ನೆಲೆಗಳು’ ವಿಷಯದ ಕುರಿತ ಎರಡು ದಿನಗಳ ರಾಜ್ಯಮಟ್ಟದ ಸಂಶೋಧನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

‘ಆಗೆಲ್ಲ ಪಿಎಚ್‌.ಡಿ ಮಾಡುವುದು ಅವಶ್ಯಕತೆಯೂ ಆಗಿರಲಿಲ್ಲ, ಹವ್ಯಾಸವೂ ಆಗಿರಲಿಲ್ಲ. ಹಾಗಾಗಿ ಬೆರಳೆಣಿಕೆಯಷ್ಟು ಸಂಶೋಧಕರು ಮಾತ್ರ ಇದ್ದರು. ಆದರೆ, ತರಗತಿಗೆ ಹೋಗುವ ಪ್ರತಿಯೊಬ್ಬ ಅಧ್ಯಾಪಕನೂ ಆ ವಿಷಯಕ್ಕೆ ಸಂಬಂಧಿಸಿದ ಸಂಶೋಧನೆ ಮಾಡುತ್ತಿದ್ದರಿಂದ ಗುಣಮಟ್ಟದ ಶಿಕ್ಷಣ ಸಿಗುತ್ತಿತ್ತು’ ಎಂದು ಹೇಳಿದರು.

ADVERTISEMENT

‘ಮಾರ್ಗದರ್ಶಕರು ವರ್ಷದಲ್ಲಿ ಮೂರು ಪಿಎಚ್‌.ಡಿ ಪದವಿ ನೀಡಲಿಲ್ಲ ಎಂದರೆ ಅವರಿಗೆ ಭಡ್ತಿ ಇಲ್ಲ ಎನ್ನುವ  ಸ್ಥಿತಿ ಈಗಿದೆ. ಹಾಗಾಗಿ ಪಿಎಚ್‌.ಡಿ ಮಾಡಿಸುವುದು ಮಾರ್ಗದರ್ಶಕರಿಗೆ ಅನಿವಾರ್ಯವಾಗಿದೆ. ಗುಣಮಟ್ಟ ಕುಸಿಯಲು ಇದೂ ಸಹ ಕಾರಣ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸಂಶೋಧನ ವಿದ್ಯಾರ್ಥಿಗಳು ಚರಿತ್ರೆಯ ಜ್ಞಾನ ಪಡೆಯಬೇಕೆ ಹೊರತು ಅದು ಎಲ್ಲಾ ಕಾಲಕ್ಕೂ ಸಲ್ಲುತ್ತದೆ ಎಂದು ಪ್ರತಿಪಾದಿಸಬಾರದು. ಹಾಗಾದಾಗ ಹೊಸ ಚಿಂತನೆಗೆ ದಾರಿ ಇರುವುದಿಲ್ಲ. ಎಲ್ಲವನ್ನು ಅರಗಿಸಿಕೊಂಡು ಹೊಸ ಒಳನೋಟ ನೀಡಿದರೆ ಮಾತ್ರ ಉತ್ತಮ ಸಂಶೋಧನೆ ರೂಪಗೊಳ್ಳುತ್ತದೆ’ ಎಂದು ಸಲಹೆ ನೀಡಿದರು.

ಸಾಹಿತಿ ರಹಮತ್‌ ತರಿಕೆರೆ ಅವರು ‘ಕನ್ನಡ ಸಂಶೋಧನೆ ಗ್ರಹಿಕೆಗಳು’ ವಿಷಯದ ಕುರಿತು ಮಾತನಾಡಿ, ‘ಸಂಶೋಧನೆಯಲ್ಲಿ ಪ್ರಮುಖವಾಗಿ ಕಾಣುವುದು ಸತ್ಯಶೋಧನೆ ಮಾದರಿ ಮತ್ತು ದೃಷ್ಟಿಕೋನ ಮಂಡನೆ ಮಾದರಿ. ಸಂಶೋಧನೆ ವ್ಯಾಖ್ಯಾನ ಎಂದು ಕೇಳಿದ ಕೂಡಲೇ ಸತ್ಯಶೋಧನೆ ಎನ್ನುತ್ತಾರೆ. ಆದರೆ, ಎಷ್ಟೋ ಸಂಶೋಧನೆಗಳಲ್ಲಿ ಸತ್ಯವೇ ಇರುವುದಿಲ್ಲ. ಮಾಡಿದ ಕೆಲಸದ ಆಧಾರದ ಮೇಲೆ ಸಂಶೋಧನೆಗೆ ವ್ಯಾಖ್ಯಾನ ನೀಡಬೇಕು’ ಎಂದು ತಿಳಿಸಿದರು.

‘ಸಂಶೋಧನೆಗೆ ಆಕರ ಆಯ್ಕೆ ಮಾಡುವಾಗಲೇ ನಮ್ಮ ದೃಷ್ಟಿಕೋನ ಪ್ರಾರಂಭವಾಗುತ್ತದೆ. ಆಶಯ, ಪರಿಕಲ್ಪನೆ, ವಾದ, ಸಂವೇದನೆ ಹೀಗೆ ಒಬ್ಬೊಬ್ಬರ ಸಂಶೋಧನೆಯಲ್ಲೂ ಒಂದೊಂದು ಅಂಶಗಳು ಪ್ರಧಾನವಾಗಿರುತ್ತವೆ’  ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.