ಬೆಂಗಳೂರು: ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಓದಿ ಟೇಬಲ್ ಮೇಲೆ ಇಟ್ಟು ಹೋದ ಪುಸ್ತಕಗಳನ್ನು ಎತ್ತಿ ಮತ್ತೆ ರ್‌್್ಯಾಕ್‌ಗೆ ಜೋಡಿಸಬೇಕಲ್ಲ ಎಂಬ ಚಿಂತೆಯೇ? ಗ್ರಂಥಾಲಯ ನಿರ್ವಹಣೆಗೆ ಸಿಬ್ಬಂದಿ ಕೊರತೆಯೇ? ಇದಕ್ಕೊಂದು ಪರಿಹಾರವನ್ನು ಪಿ.ಇ.ಎಸ್ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ರೂಪಿಸಿದ್ದಾರೆ.
ಮಾಹಿತಿ ಕೇಂದ್ರದಲ್ಲಿ ಪುಸ್ತಕದ ನಿರ್ವಹಣೆಗೆಂದೇ ‘ಗ್ರಂಥಾಲಯ ರೋಬೊ’ ರೂಪಿಸಿದ್ದಾರೆ. ಒಂದು ಬಟನ್ ಒತ್ತಿದರೆ ಸಾಕು ಟೇಬಲ್ ಮೇಲೆ ಇಟ್ಟ ಪುಸ್ತಕಗಳನ್ನು ಈ ರೋಬೊ ಮತ್ತೆ ರ್‌್ಯಾಕ್‌ಗೆ ಜೋಡಿಸುತ್ತದೆ. ವಿ.ವಿ ಗ್ರಂಥಾಲಯದಲ್ಲಿ ಈ ಯಂತ್ರವು ಕಾರ್ಯನಿರ್ವಹಿಸುತ್ತಿದ್ದು, ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುತ್ತಿದೆ.
ಎಲೆಕ್ಟ್ರಾನಿಕ್ ಹಾಗೂ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಈ ರೋಬೊ ಅಭಿವೃದ್ಧಿಪಡಿಸಿದ್ದಾರೆ. ಸುಮಾರು ₨ 1 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ರೋಬೊ, ಪುಸ್ತಕಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಕೆಲಸದಲ್ಲಿ ನಿರತವಾಗಿದೆ.
‘ಈ ರೋಬೊ ಅಭಿವೃದ್ಧಿಗೆ ಎರಡು ವರ್ಷ ತೆಗೆದುಕೊಂಡಿದ್ದೇವೆ. ಮೂರು ಹಂತಗಳಲ್ಲಿ ವಿನ್ಯಾಸಗೊಳಿಸಿದ್ದೇವೆ. ಮೊದಲು ಫ್ಲೈವುಡ್‌ನಿಂದ ನಿರ್ಮಿಸಿದೆವು. ಬಳಿಕ ಅಲ್ಯೂಮಿನಿಯಂ ಕವಚ ಅಳವಡಿಸಲಾಯಿತು. ಅಂತಿಮವಾಗಿ ಸ್ಟೀಲ್‌ನಿಂದ ನಿರ್ಮಿಸಿದೆವು’ ಎಂದು ವಿಭಾಗದ ಕರುಣಾಕರ್ ಪ್ರವೀಣ್ ‘ಪ್ರಜಾವಾಣಿ’ಗೆ ತಿಳಿಸಿದರು.
ರಿಮೋಟ್ ಮೂಲಕ ಈ ಯಂತ್ರವನ್ನು ನಿಯಂತ್ರಿಸಬಹುದು. ಪ್ರಾಕ್ಸಿಮಿಟಿ, ಅಲ್ಟ್ರಾ ಸೋನಿಕ್, ಪಿಐಆರ್ ಸೆನ್ಸರ್ ಅಳವಡಿಸಲಾಗಿದೆ. ಸೆನ್ಸರ್ ನೆರವಿನಿಂದ ಸಾಗುವ ರೋಬೊಗೆ ಪ್ರತ್ಯೇಕ ಹಾದಿ ನಿರ್ಮಿಸಬೇಕು. ಈ ಹಾದಿಯಲ್ಲಿ ಯಾರಾದರೂ ಅಡ್ಡಬಂದರೆ ಸಂಚಾರ ಸ್ಥಗಿತಗೊಳಿಸಿ ಶಬ್ದಮಾಡುತ್ತದೆ.
ವಿ.ವಿ ಅನನ್ಯ ಸಂಶೋಧನಾ ಮತ್ತು ಆವಿಷ್ಕಾರ ಕೇಂದ್ರದಲ್ಲಿ (ಕೋರಿ) ಈ ಯಂತ್ರ ಸಿದ್ಧಪಡಿಸಲಾಗಿದೆ. ಪ್ರಾಧ್ಯಾಪಕ ಪ್ರೊ.ನಂದಕುಮಾರ್ ಮಾರ್ಗದರ್ಶನದಲ್ಲಿ ಸಂಕೇತ್, ಸ್ನೇಹಿತ್, ರಜತ್, ಕರುಣಾಕರ್ ಪ್ರವೀಣ್, ಜೂಡ್, ವಿನಯ್ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.
‘ರೋಬೊಗೆ ಬಳಸಿರುವ ಪ್ರತಿಯೊಂದು ವಸ್ತುವನ್ನು ಇಲ್ಲಿಯೇ ತಯಾರಿಸಿದ್ದೇವೆ. ಯಂತ್ರವು ಬ್ಯಾಟರಿ ನೆರವಿನಿಂದ ಚಲಿಸುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಐದು ದಿನ ಬಳಸಬಹುದು. 10 ಸೆನ್ಸರ್‌ಗಳನ್ನು ಬಳಸಲಾಗಿದೆ. ನೇವಿಗೇಟರ್, ಆಪ್ಟಿಕಲ್ ಡಿಟೆಕ್ಷನ್, ಡೀಕೋಡರ್, ಎಲೆಕ್ಟ್ರಾನಿಕ್ ಬೋರ್ಡ್ ಉಪಕರಣಗಳನ್ನು ಬಳಸಿಕೊಳ್ಳಲಾಗಿದೆ’ ಎಂದು ಕರುಣಾಕರ್ ಮಾಹಿತಿ ನೀಡಿದರು.
‘ರೋಬೊ ಬಳಕೆಯಿಂದ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಪುಸ್ತಕ ಜೋಡಿಸುವ ಕೆಲಸ ಮುಗಿದ ನಂತರ ತನ್ನ ಸ್ಥಾನಕ್ಕೆ ಹೋಗಿ ಸ್ವಯಂ ಚಾರ್ಜ್ ಮಾಡಿಕೊಳ್ಳುವಂತೆ ರಚಿಸಲಾಗಿದೆ. ಯಂತ್ರವನ್ನು ಸುಧಾರಣೆ ಮಾಡಲು ಇನ್ನೂ ಅವಕಾಶವಿದೆ’ ಎಂದರು.
ದಿನಕ್ಕೆ 800 ಪುಸ್ತಕ
ಏಕಕಾಲದಲ್ಲಿ ಸುಮಾರು 10 ಕೆ.ಜಿ. ಪುಸ್ತಕವನ್ನು ಎತ್ತಿಕೊಂಡು ಹೋಗಿ ರ್‌್್ಯಾಕ್‌ನಲ್ಲಿ ಇಡುವ ಸಾಮರ್ಥ್ಯವನ್ನು ಈ ರೋಬೊ ಹೊಂದಿದೆ. ಗ್ರಂಥಾಲಯದಲ್ಲಿ ಪುಸ್ತಕ ಓದಿ ಟೇಬಲ್ ಮೇಲೆ ಇಟ್ಟಿರುವ ಬ್ಯಾಸ್ಕೆಟ್‌ನಲ್ಲಿ ಹಾಕಬೇಕು. ಆಗ ರೋಬೊ ಆ ಬ್ಯಾಸ್ಕೆಟ್ ಎತ್ತಿಕೊಂಡು ರ್‌್ಯಾಕ್‌ನಲ್ಲಿಡುತ್ತದೆ.
ಯಾವ ರ್‌್ಯಾಕ್‌ನಲ್ಲಿಡಬೇಕು ಎಂದು ಪೂರ್ವನಿಯೋಜಿತವಾಗಿ ಯಂತ್ರಕ್ಕೆ ದತ್ತಾಂಶ ಅಳವಡಿಸಲಾಗಿರುತ್ತದೆ. ದಿನವೊಂದಕ್ಕೆ 800 ಪುಸ್ತಕಗಳನ್ನು ಹೊರುವ ಬ್ಯಾಟರಿ ಸಾಮರ್ಥ್ಯವನ್ನು ಇದು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.